ಬೆಂಗಳೂರು, ನವೆಂಬರ್ 10: ಭಾರತದ ಐಟಿ ದಿಗ್ಗಜ ಸಂಸ್ಥೆ ವಿಪ್ರೋ (Wipro Technologies) ಈ ಬಾರಿ ಅಳೆದು ತೂಗಿ ಸಂಬಳ ಹೆಚ್ಚಳ ಕ್ರಮ ತೆಗೆದುಕೊಳ್ಳಲಿದೆ. ಐಟಿ ಕ್ಷೇತ್ರದಲ್ಲಿ ತುಸು ಹಿನ್ನಡೆ ಇರುವುದರಿಂದ ವಿಪ್ರೋ ಮಾಮೂಲಿಯ ರೀತಿಯಲ್ಲಿ ಸಂಬಳ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಿಪ್ರೋದ ಇಂಟರ್ನಲ್ ಮೆಮೋವೊಂದನ್ನು (wipro internal memo) ಆಧರಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ಪ್ರಕಟಿಸಿದ ವರದಿ ಪ್ರಕಾರ, ಡಿಸೆಂಬರ್ನಲ್ಲಿ ಸ್ಯಾಲರಿ ಪರಿಷ್ಕರಣೆ (salary revision) ಆಗಲಿದೆ. ಈ ಬಾರಿ ಟಾಪ್ ಪರ್ಫಾರ್ಮರ್ಸ್ಗಳೆಲ್ಲರಿಗೂ ಸಂಬಳ ಹೆಚ್ಚಳ ಸಿಗುವುದು ಅನುಮಾನ. ಅಧಿಕ ಸಂಬಳ ಇರುವ ದಕ್ಷ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಇರುವುದಿಲ್ಲ. ಕಡಿಮೆ ಸಂಬಳದವರಿಗೆ ಮೊದಲ ಆದ್ಯತೆ ಕೊಡಲು ವಿಪ್ರೋ ಆಡಳಿತ ನಿರ್ಧರಿಸಿದೆ ಎಂದು ರಾಯ್ಟರ್ಸ್ ವರದಿಯಲ್ಲಿ ಹೇಳಲಾಗಿದೆ.
‘ನಮ್ಮ ವ್ಯವಹಾರಕ್ಕೆ ಅನುಗುಣವಾಗಿ ಎಂಎಸ್ಐ (ಮೆರಿಟ್ ಆಧಾರಿತ ಸಂಬಳ ಹೆಚ್ಚಳ) ಕ್ರಮ ತೆಗೆದುಕೊಳ್ಳುತ್ತಿದ್ದೇವೆ… ಸಂಬಳ ಹೆಚ್ಚಳಕ್ಕೆ ಅರ್ಹರಾಗಿರುವವರ ಪೈಕಿ ಕಡಿಮೆ ಸಂಬಳದ ಉದ್ಯೋಗಿಗಳಿಗೆ ಆದ್ಯತೆ ಕೊಡುತ್ತೇವೆ. ಅಧಿಕ ಸಂಬಳದ ಅರ್ಹ ಉದ್ಯೋಗಿಗಳನ್ನು ಈ ಬಾರಿ ಸಂಬಳ ಹೆಚ್ಚಳಕ್ಕೆ ಪರಿಗಣಿಸಲಾಗುವುದಿಲ್ಲ,’ ಎಂದು ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್ನಲ್ಲಿ ವಿಪ್ರೋದ ಹಿರಿಯ ಅಧಿಕಾರಿ ನಾಗೇಂದ್ರ ಬಂಡಾರು ತಿಳಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ರಿಲಾಯನ್ಸ್ನ ಮೊದಲ ‘ಸ್ವದೇಶ್ ಸ್ಟೋರ್’; ದೇಶದ ಕರಕುಶಲಕರ್ಮಿಗಳ ಬದುಕಿಕೊಂದು ಆಧಾರ
ಇದು ವಿಪ್ರೋ ಎಂಟರ್ಪ್ರೈಸ್ ಫ್ಯೂಚರಿಂಗ್ (Wipro Interprise Futuring business line) ವಿಭಾಗದಲ್ಲಿ ತೆಗೆದುಕೊಳ್ಳಲಾಗುವ ಕ್ರಮ. ನಾಗೇಂದ್ರ ಬಂಡಾರು ಅವರು ಈ ವಿಭಾಗದ ಮ್ಯಾನೇಜಿಂಗ್ ಪಾರ್ಟ್ನರ್ ಮತ್ತು ಪ್ರೆಸಿಡೆಂಟ್ ಆಗಿದ್ದಾರೆ. ವಿಪ್ರೋದಲ್ಲಿ ಇದಲ್ಲದೇ ಇನ್ನೂ ಮೂರು ಬಿಸಿನೆಸ್ ಲೈನ್ಗಳಿವೆ. ಎಲ್ಲಾ ವಿಭಾಗದಲ್ಲೂ ಇದೇ ಕ್ರಮ ಅನುಸರಿಸಲಾಗುತ್ತದಾ ಎಂಬುದು ಗೊತ್ತಾಗಿಲ್ಲ ಎಂದೂ ರಾಯ್ಟರ್ಸ್ ವರದಿ ಸ್ಪಷ್ಟಪಡಿಸಿದೆ. ಡಿಸೆಂಬರ್ 1ಕ್ಕೆ ವಿಪ್ರೋ ಉದ್ಯೋಗಿಗಳಿಗೆ ಪರಿಷ್ಕೃತ ಸಂಬಳ ಬಿಡುಗಡೆ ಆಗುತ್ತದೆ.
ಭಾರತದ ಐಟಿ ಕಂಪನಿಗಳ ಬಿಸಿನೆಸ್ ಜಾಗತಿಕ ಆರ್ಥಿಕತೆಯ ಮೇಲೆ ನಿಂತಿದೆ. ಅದರ ಹೆಚ್ಚಿನ ಕ್ಲೈಂಟ್ಗಳು ಅಮೆರಿಕ ಮತ್ತು ಯೂರೋಪ್ನಲ್ಲಿವೆ. ಆದರೆ, ಅಲ್ಲೀಗ ಆರ್ಥಿಕ ಹಿನ್ನಡೆ ಇರುವುದರಿಂದ ಹೆಚ್ಚಿನ ಕಂಪನಿಗಳು ತಮ್ಮ ಖರ್ಚುವೆಚ್ಚವನ್ನು ಕಡಿಮೆ ಮಾಡಿವೆ. ಅದರಲ್ಲಿ ಐಟಿ ಸೇವೆಗೆ ಮಾಡಲಾಗುವ ವೆಚ್ಚವೂ ಕಡಿತಗೊಂಡಿದೆ. ಇದರ ಪರಿಣಾಮವಾಗಿ ಭಾರತದ ಐಟಿ ಸರ್ವಿಸ್ ಕಂಪನಿಗಳ ಬಿಸಿನೆಸ್ಗೆ ಹಿನ್ನಡೆ ಆಗಿದೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ ಇತ್ಯಾದಿ ಕಂಪನಿಗಳ ಆದಾಯದಲ್ಲಿ ಇಳಿಕೆ ಕಂಡುಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ