ಮೈಸೂರು, ಡಿಸೆಂಬರ್ 05: ದೇವಸ್ಥಾನದ ಕಾರ್ಯಕ್ಕೆ ತಮಟೆ ಬಾರಿಸಲು ನಿರಾಕರಿಸಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ ಮಾಡಿ, ಜಾತಿ ನಿಂದನೆ ಮಾಡಿರುವ ಘಟನೆ ಪಿರಿಯಾಪಟ್ಟಣ (Periyapatna) ತಾಲೂಕಿನ ಮಾಕೋಡು ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ ಕುಮಾರ್ ಎಂಬುವರ ವಿರುದ್ಧ ಪಿರಿಯಾಪಟ್ಟಣ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿದೆ. ಪರಮಯ್ಯ ಹಲ್ಲೆಗೊಳಗಾದ ವ್ಯಕ್ತಿ.
ಬಸವೇಶ್ವರ ದೇವಸ್ಥಾನದ ಪೂಜಾ ಕಾರ್ಯಕ್ಕೆ ಕುಳುವಾಡಿಕೆ ಮಾಡಿ ತಮಟೆ ಹೊಡದು ಸಾರುವಂತೆ ಪರಮಯ್ಯ ಅವರಿಗೆ ಕುಮಾರ್ ಹೇಳಿದರು. ಇದಕ್ಕೆ ಪರಮಯ್ಯ ತಮಟೆ ಹೊಡೆಯುವ ಕೆಲಸ ಮಾಡುತ್ತಿಲ್ಲ ಬಿಟ್ಟಿದ್ದೇನೆ ಎಂದು ಹೇಳಿದರು. ಆದರೂ ಸುಮ್ಮನಾಗದ ಕುಮಾರ್ ಅವರು ಪರಮಯ್ಯ ಅವರಿಗೆ ಒತ್ತಡ ಹಾಕಿದರು. ಒತ್ತಡಕ್ಕೆ ಮಣಿದ ಪರಮಯ್ಯ ಮಗ ಬಸವರಾಜ್, ತಮಟೆ ಹೊಡೆಯಲು ದೇವಸ್ಥಾನದ ಬಳಿ ಹೋದರು. ಈ ವೇಳೆ ಕುಮಾರ್ ದೇವಸ್ಥಾನದ ಬಳಿಗೆ ಬಂದಿದ್ದ ಪರಮಯ್ಯ ಅವರಿಗೆ ಯಾಕೆ ತಮಟೆ ಹೊಡೆಯುವುದಿಲ್ಲ ಎಂದು ಪ್ರಶ್ನಿಸಿ ಹಲ್ಲೆ ಮಾಡಿದರು.
ಗಾಯಗೊಂಡ ಪರಮಯ್ಯ ಅವರನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕುಮಾರ್ ವಿರುದ್ಧ ಪರಮಯ್ಯ ಮಗ ಬಸವರಾಜ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಜೈ ಶ್ರೀರಾಮ್ ಹೇಳುವಂತೆ ವೈದ್ಧನ ಮೇಲೆ ಹಲ್ಲೆ ಕೇಸ್; ಆಕ್ಷೇಪಾರ್ಹ ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು
ಆಕಸ್ಮಿಕವಾಗಿ ತಲೆಗೆ ಯಂತ್ರ ಬಡಿದು ಕಾರ್ಮಿಕ ಮೃತಪಟ್ಟಿರುವ ಘಟನೆ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕೃಷಿ ಜಿಯೋ ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ನಡೆದಿದೆ. ಆಶೀಸ್ ಸುಖದಾಸ್ ಪಾಟ್ಲೆ (24) ಮೃತ ದುರ್ದೈವಿ. ಯುವಕ ಸುಖದಾಸ್ ಪಾಟ್ಲೆ ಮಹಾರಾಷ್ಟ್ರ ಮೂಲದವನಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.
ಸೋಮವಾರ ಯಂತ್ರಕ್ಕೆ ದಾರವನ್ನು ಹಾಕುತ್ತಿದ್ದ ವೇಳೆ ಕಾರ್ಮಿಕನ ತಲೆ ಯಂತ್ರ ಬಡಿದಿದೆ. ಇದರಿಂದ ತೀವ್ರವಾದ ಗಾಯಗೊಂಡು ಯುವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರು: ಹಣದ ವಿಚಾರಾವಾಗಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಿಪಟೂರಿನ ಗಾಂಧಿ ನಗರದಲ್ಲಿ ನಡೆದಿದೆ. 30 ಸಾವಿರ ರೂ. ವಿಚಾರವಾಗಿ ಅಕ್ಬರ್ ಹಾಗೂ ಇಂತಿಯಾಜ್ ನಡುವೆ ಗಲಾಟೆ ನಡೆದಿದೆ. ಅಕ್ಬರ್ ಎಂಬುವರ ಬಳಿ ಇಂತಿಯಾಜ್ 30 ಸಾವಿರ ಹಣ ಪಡೆದುಕೊಂಡಿದ್ದರು.
30 ಸಾವಿರ ಹಣದ ಸಂಬಂಧ ಅಕ್ಬರ್ ಮಸೀದಿಗೆ ಹೋಗಿ ದೂರು ನೀಡಿದ್ದರು. ಈ ವೇಳೆ ಮಸೀದಿಯವರು ಅಕ್ಬರ್ಗೆ 80 ಸಾವಿರ ಹಣ ವಾಪಸ್ ನೀಡಿ ಎಂದು ಇಂತಿಯಾಜ್ಗೆ ಹೇಳಿದ್ದರು. ಇದಕ್ಕೆ ಮನನೊಂದ ಇಂತಿಯಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇಂತಿಯಾಜ್ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ