
ಬೆಂಗಳೂರು, ಅಕ್ಟೋಬರ್ 10: ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ವಿಚಾರವಾಗಿ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿರುವ ಆರೋಪದ ಹಿನ್ನಲೆ ಆಟೋ ಚಾಲಕನನ್ನು (Auto Driver) ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪವನ್ ಎಂದು ಗುರುತಿಸಲಾಗಿದ್ದು, ಆಟೋ ವಿಚಾರವಾಗಿ ಈಶಾನ್ಯ ಭಾರತ ಮೂಲದ ಯುವತಿ ಜೊತೆಗೆ ಈತನ ಗಲಾಟೆಯ ವಿಡಿಯೋ ವೈರಲ್ ಆಗಿತ್ತು.
ಅಕ್ಟೋಬರ್ 2ರ ಸಂಜೆ 7.30ರ ಸುಮಾರಿಗೆ ಈಶಾನ್ಯ ಭಾರತ ಮೂಲದ ಯುವತಿ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಆಟೋ ಬುಕ್ ಮಾಡಿದ್ದಳು. ಆದರೆ ಬುಕ್ ಮಾಡಿದ್ದ ಆಟೋ ಬರೋದು ತಡವಾದ ಕಾರಣ, ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಹಾಗೆಯೇ ಬುಕ್ ಮಾಡಿದ್ದ ಆಟೋವನ್ನು ಕ್ಯಾನ್ಸಲ್ ಮಾಡಿದ್ದಳು. ಆದರೆ ಈವೇಳೆಗೆ ಬುಕ್ ಮಾಡಿದ್ದ ಆಟೋ ಕೂಡ ಸ್ಥಳ ತಲುಪಿದ್ದು, ಬೇರೆ ಆಟೋ ಹತ್ತಿ ಹೊರಟ ಯುವತಿ ಬಳಿ ಚಾಲಕ ಪವನ್ ಜಗಳ ತೆಗೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಯತ್ನ ಮಾಡಿರುವ ಬಗ್ಗೆ ಯುವತಿ ಆರೋಪಿಸಿದ್ದಳು. ಘಟನೆ ಬಗ್ಗೆ ಕೊತ್ತನೂರು ಠಾಣೆಗೆ ದೂರನ್ನೂ ನೀಡಿದ್ದಳು. ಆ ದೂರು ಆಧರಿಸಿ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಏಕಕಾಲಕ್ಕೆ ಎರಡು ಆಟೋ ಬುಕ್ ಮಾಡಿದ ಯುವತಿ, ರೊಚ್ಚಿಗೆದ್ದ ಆಟೋ ಚಾಲಕ
ವಿಡಿಯೋ ರೆಕಾರ್ಡ್ ಮಾಡುತ್ತಿದ್ದರೂ ಕ್ಯಾರೇ ಎನ್ನದ ಆಟೋ ಚಾಲಕ ಪದೇ ಪದೆ ಹಲ್ಲೆಗೆ ಯತ್ನಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಳು. ಅಲ್ಲದೆ ಆ್ಯಪ್ ಗಳ ಮೂಲಕ ಬುಕ್ಕಿಂಗ್ ಮಾಡಿ ತೆರಳುವ ಆಟೋಗಳಲ್ಲಿನ ಸುರಕ್ಷತೆ ಬಗ್ಗೆಯೂ ಪ್ರಶ್ನೆ ಮಾಡಿ ವಿಡಿಯೋ ಹಂಚಿಕೊಂಡಿದ್ದಳು. ಆ ಬೆನ್ನಲ್ಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಯುವತಿಯನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಒಂದು ಆಟೋ ಬುಕ್ ಮಾಡಿ ಮತ್ತೊಂದರಲ್ಲಿ ಹೋಗಿದ್ದು ತಪ್ಪಲ್ಲವಾ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:40 pm, Fri, 10 October 25