ಬೆಳಗಾವಿ: ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ‌ ಹತ್ಯೆ ಕೇಸ್; ಇಬ್ಬರು ಆರೋಪಿಗಳ ಬಂಧನ

|

Updated on: May 20, 2023 | 7:45 AM

ಆತ ಐಟಿಐ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಕೆಲಸಕ್ಕೆ ಹೋಗಿದ್ದ ಆತ ಮನೆಗೆ ವಾಪಸ್ ಆಗಿರಲಿಲ್ಲ. ಬೆಳ್ಳಂಬೆಳಗ್ಗೆ ಗ್ರಾಮದಲ್ಲಿರುವ ಸರ್ಕಾರಿ ಶಾಲಾ ಕೊಠಡಿ ಎದುರು ರಕ್ತದ ಮಡುವಿನಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಸರ್ಕಾರಿ ಶಾಲಾ ಕೊಠಡಿ ಎದುರು ಯುವಕನ ಮೃತದೇಹ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಇದೀಗ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಷ್ಟಕ್ಕೂ ಆ ಯುವಕನಿಗೆ ಆಗಿದ್ದೇನು ಇಲ್ಲಿದೆ ನೋಡಿ.

ಬೆಳಗಾವಿ: ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ‌ ಹತ್ಯೆ ಕೇಸ್; ಇಬ್ಬರು ಆರೋಪಿಗಳ ಬಂಧನ
ಆರೋಪಿಗಳು
Follow us on

ಬೆಳಗಾವಿ: ನಿನ್ನೆ(ಮೇ.18) ಬೆಳಗ್ಗೆ ಮಾರಿಹಾಳ ಸರ್ಕಾರಿ ಶಾಲೆ(Marihal Government School)ಯ ಕೊಠಡಿ ಎದುರು ಮಹಾಂತೇಶ ಕರಲಿಂಗಣ್ಣವರ್ (24) ಮೃತದೇಹ ಪತ್ತೆಯಾಗಿತ್ತು. ಯುವಕನನ್ನ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಯಾರೂ ಹತ್ಯೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಮಾರಿಹಾಳ ಠಾಣೆ ಪೊಲೀಸರು, ಘಟನೆ ನಡೆದ 24 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಳೇಭಾವಿ ನಿವಾಸಿ ಅಕ್ಷಯಕುಮಾರ್ ಕೊಣಕೇರಿ(23), ಮಾರಿಹಾಳ ನಿವಾಸಿ ರಾಜೇಸಾಬ್ ಮುಲ್ಲಾ(23) ಬಂಧನಕ್ಕೊಳಗಾದ ಆರೋಪಿಗಳು. ನಾಲ್ಕು ದಿನಗಳ ಹಿಂದೆ ಕೊಲೆಯಾದ ಮಹಾಂತೇಶ ಹಾಗೂ ಆರೋಪಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು. ಈ ವೇಳೆ ಕೊಲೆಯಾದ ಮಹಾಂತೇಶ್ ರಾಜೇಸಾಬ್‌ಗೆ ಧಮ್ಕಿ ಹಾಕಿದ್ದನಂತೆ. ಇದೇ ವೈಷಮ್ಯವಿಟ್ಟುಕೊಂಡು ಇಬ್ಬರು ಆರೋಪಿಗಳು ಹತ್ಯೆ ಮಾಡಿ, ಪರಾರಿಯಾಗಿದ್ರು.

ಇನ್ನು ಕೊಲೆಯಾದ ಮಹಾಂತೇಶ ಬೆಳಗ್ಗೆ 7 ಗಂಟೆಗೆ ಬೆಳಗಾವಿಗೆ ಕೆಲಸಕ್ಕೆ ಹೋಗಿ, ಸಂಜೆ 7 ಗಂಟೆ ಹೊತ್ತಿಗೆ ಮನೆಗೆ ವಾಪಸ್ ಆಗುತ್ತಿದ್ದ. ಆದ್ರೆ, ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮಹಾಂತೇಶನಿಗೆ ಅಣ್ಣ ಫೋನ್ ಮಾಡಿದ ವೇಳೆ ಬಸ್ ನಿಲ್ದಾಣ ಬಳಿ ಇದ್ದೀನಿ ಎಂದಿದ್ದ ಮಹಾಂತೇಶ, ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಸ್ನೇಹಿತರ ಜೊತೆ ಎಲ್ಲಿಯಾದರೂ ಹೋಗಿರಬೇಕು ಎಂದು ಮನೆಯವರು ನಿದ್ದೆಗೆ ಜಾರಿದ್ದರು. ನಿನ್ನೆ(ಮೇ.19) ಬೆಳ್ಳಂಬೆಳಗ್ಗೆ ಮಾರಿಹಾಳ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿ ಎದುರು ಮಹಾಂತೇಶ ಕೊಲೆಯಾಗಿದ್ದಾನೆ ಎಂಬ ಸುದ್ದಿ ಗೊತ್ತಾಗಿದೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಡಿಸಿಪಿ ಸ್ನೇಹಾ ಹಾಗೂ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ವೃದ್ಧನ ಮೃತದೇಹವನ್ನು ಫ್ರೀಜರ್​ನಲ್ಲಿರಿಸಿ, ಪಿಂಚಣಿ ಹಣದಲ್ಲಿ ಶಾಪಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದ ವ್ಯಕ್ತಿ ಕೊನೆಗೂ ತಪ್ಪೊಪ್ಪಿಕೊಂಡ್ರು

ಮೃತ ಮಹಾಂತೇಶ ತಂದೆ ರುದ್ರಪ್ಪ ಸಹ 18 ವರ್ಷಗಳ ಹಿಂದೆ ಹತ್ಯೆಯಾಗಿದ್ದ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರುದ್ರಪ್ಪನನ್ನು ಹತ್ಯೆ ಮಾಡಲಾಗಿತ್ತು. ತಂದೆಯ ಕೊಲೆ ಆರೋಪಿಗಳೇ ಹತ್ಯೆ ಮಾಡಿರಬಹುದು ಎಂದು ಮಹಾಂತೇಶ್​ ತಾಯಿ ಶಂಕೆ ವ್ಯಕ್ತಪಡಿಸಿದ್ದರು. ಇನ್ನು ಮಾರಿಹಾಳ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಪಾಳು ಬಿದ್ದಿದ್ದು ಸರಿಯಾದ ಕಾಂಪೌಂಡ್ ಗೇಟ್ ಹಾಗೂ ಬೆಳಕಿನ ವ್ಯವಸ್ಥೆ ಇಲ್ಲ. ರಾತ್ರಿಯಾಯಿತೆಂದರೆ ಶಾಲಾ ಆವರಣದಲ್ಲಿ ಪುಂಡರು ಎಂಟ್ರಿ ಕೊಟ್ಟು ಮದ್ಯಪಾನ ಸೇರಿ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರಂತೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಲಾ ಮುಖ್ಯೋಪಾಧ್ಯಾಯರು ಆರೋಪಿಸಿದ್ದಾರೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಮಾರಿಹಾಳ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು. ಜ್ಞಾನದೇಗುಲವಾದ ಶಾಲಾ ಆವರಣದಲ್ಲಿಯೇ ಈ ರೀತಿಯ ಘಟನೆ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆ ನಡೆದು ಕೇವಲ 24 ಗಂಟೆಗಳೊಳಗೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ