ನಾಗ್ಪುರ: ಸಣ್ಣ ವಿಷಯಕ್ಕೆ ಶುರುವಾದ ಜಗಳ ಮಿತಿ ಮೀರಿ ಕೊನೆಗೆ ತನ್ನ ರೂಂ ಮೇಟ್ ಅನ್ನೇ ಗೆಳೆಯ ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಬಳಿ ಇರುವ ಡಾಬಾ ಎಂಬಲ್ಲಿ ನಡೆದಿದೆ. ಶನಿವಾರ ರಾತ್ರಿ ಗೆಳೆಯರಿಬ್ಬರ ನಡುವೆ ಜೋರಾಗಿ ಜಗಳವಾಗಿದೆ. ಈ ವೇಳೆ ಕೋಪದಲ್ಲಿ ಒಬ್ಬ ಇನ್ನೊಬ್ಬನನ್ನು ಕೊಲೆ ಮಾಡಿ, ಆತನ ಹೆಣವನ್ನು ಪ್ಯಾಕ್ ಮಾಡಿ ರಸ್ತೆ ಬದಿ ಎಸೆದು ಬಂದಿದ್ದಾನೆ. ನಂತರ ಕೊಲೆಯ ಸುಳಿವು ಸಿಗಬಾರದು ಎಂದು ರಾತ್ರಿಯಿಡೀ ಮನೆಯನ್ನು ಒರೆಸಿ, ಕ್ಲೀನ್ ಮಾಡಿ ಬೆಳಗಿನ ಜಾವ ಮಲಗಿದ್ದಾನೆ.
ರಾಜು ನಂದೇಶ್ವರ ಕೊಲೆಯಾದ ಯುವಕ. ಆತನ ಜೊತೆ ಶನಿವಾರ ರಾತ್ರಿ ಜಗಳವಾಡಿದ್ದ ದೇವಾಂಶ್ ವಘೋಡೆ ಕೋಪದಲ್ಲಿ ತನ್ನ ರೂಂ ಮೇಟ್ ಅನ್ನೇ ಹತ್ಯೆ ಮಾಡಿದ್ದಾನೆ. ಚಾಕುವಿನಿಂದ ರಾಜುವಿಗೆ ಇರಿದು ಕೊಲೆ ಮಾಡಿದ ದೇವಾಂಶ್ ಬಳಿಕ ಆತನ ತಲೆಗೆ ಚೂಪಾದ ವಸ್ತುವಿನಿಂದ ಹೊಡೆದಿದ್ದಾನೆ. ಬಳಿಕ ಆ ದೇಹವನ್ನು ಚೀಲದಲ್ಲಿ ಸುತ್ತಿ ರಸ್ತೆ ಬದಿಯಲ್ಲಿ ಬಿಸಾಡಿ ಬಂದಿದ್ದಾನೆ. ರೂಂ ತುಂಬ ರಕ್ತವಾಗಿದ್ದರಿಂದ ಬೆಳಗಿನ ಜಾವದವರೆಗೂ ಮನೆಯನ್ನು ಕ್ಲೀನ್ ಮಾಡಿದ್ದಾನೆ. ನಂತರ ನಿದ್ರೆ ಮಾಡಿದ್ದಾನೆ.
ರಾಜು ಮತ್ತು ದೇವಾಂಶ್ ಇಬ್ಬರೂ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋದ ಸ್ಥಳೀಯರು ರಸ್ತೆ ಬದಿಯಲ್ಲಿ ಬಿದ್ದಿದ್ದ ಹೆಣವನ್ನು ನೋಡಿ ಸುತ್ತಮುತ್ತಲಿನವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ವೇಳೆ ರಾಜು ಎಲ್ಲಿ ವಾಸವಾಗಿದ್ದ ಎಂಬ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ದೇವಾಂಶ್ನನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಗತಿ ಬಯಲಾಗಿದೆ.
ಇದನ್ನೂ ಓದಿ: Murder: ದಾವಣಗೆರೆ; ಅಕ್ರಮ ಸಂಬಂಧ ಮುಚ್ಚಿಡಲು ಪ್ರಿಯಕರನ ಜೊತೆ ಸೇರಿ ಹೆಂಡತಿಯಿಂದಲೇ ಗಂಡನ ಕೊಲೆ
(Crime News Mechanic Murders Roommate Dumps Dead Body Sleeps After Cleaning Room In Nagpur)
Published On - 5:10 pm, Mon, 9 August 21