Facebook ಬಳಸುವ ಮುನ್ನ ಎಚ್ಚರ; ಫೇಸ್​ಬುಕ್​ ಗೆಳೆಯನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡ ಸೈಬರ್ ತಜ್ಞ

| Updated By: ಸುಷ್ಮಾ ಚಕ್ರೆ

Updated on: Jul 28, 2021 | 7:26 PM

ಮುಂಬೈನ ಸೈಬರ್ ಎಕ್ಸ್​ಪರ್ಟ್​ ಒಬ್ಬರು ತಮ್ಮ ಫೇಸ್​ಬುಕ್ ಫ್ರೆಂಡ್​ನನ್ನು ನಂಬಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೀಗಾಗಿ, ಫೇಸ್​ಬುಕ್​ ಸ್ನೇಹಿತರ ಬಳಿ ಹಣದ ವ್ಯವಹಾರ ಮಾಡುವ ಮುನ್ನ ಎಚ್ಚರ!

Facebook ಬಳಸುವ ಮುನ್ನ ಎಚ್ಚರ; ಫೇಸ್​ಬುಕ್​ ಗೆಳೆಯನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡ ಸೈಬರ್ ತಜ್ಞ
ಸೈಬರ್ ಕ್ರೈಂ
Follow us on

ಈಗಿನ ಟೆಕ್ನಾಲಜಿ ಯುಗದಲ್ಲಿ ಫೇಸ್​ಬುಕ್(Facebook), ಟ್ವಿಟ್ಟರ್ (Twitter), ವಾಟ್ಸಾಪ್(Whatsapp), ಇನ್​ಸ್ಟಾಗ್ರಾಂ (Instagram) ಬಳಸದಿರುವವರೇ ಕಡಿಮೆ ಎನ್ನಬಹುದು. ಸೋಷಿಯಲ್ ಮೀಡಿಯಾಗಳ (Social Media) ಮಾಯೆಯೇ ಅಂಥದು. ಎಲ್ಲೋ ಇರುವವರು ಇನ್ನೆಲ್ಲೋ ಇರುವವರ ಸಂಪೂರ್ಣ ಮಾಹಿತಿಯನ್ನು ಈ ಸಾಮಾಜಿಕ ಜಾಲತಾಣಗಳ ಆ್ಯಪ್​ಗಳ ಮೂಲಕ ಪಡೆದುಕೊಳ್ಳಬೇಕು. ಕೊಂಚ ಖತರ್ನಾಕ್​ಗಳಾಗಿದ್ದರೆ ಬೇರೊಬ್ಬರ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಕೂಡ ಸೋಷಿಯಲ್ ಮೀಡಿಯಾ ಮೂಲಕ ಸುಲಭವಾಗಿ ಹ್ಯಾಕ್ ಮಾಡಬಹುದು. ಹೀಗಾಗಿ, ಫೇಸ್​ಬುಕ್, ಇನ್​ಸ್ಟಾಗ್ರಾಂ ಮತ್ತಿತರ ಸೋಷಿಯಲ್ ಮೀಡಿಯಾ ಆ್ಯಪ್​ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಹಾಕುವ ಮುನ್ನ ಎಚ್ಚರ. ಏಕೆಂದರೆ ಖುದ್ದು ಸೈಬರ್ ಎಕ್ಸ್​ಪರ್ಟ್​ (Cyber Expert) ಒಬ್ಬರು ತಮ್ಮ ಫೇಸ್​ಬುಕ್ ಫ್ರೆಂಡ್​ನಿಂದಾಗಿ ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಫೇಸ್​ಬುಕ್​ನಲ್ಲಿ ಇತ್ತೀಚೆಗೆ ನಕಲಿ ಅಕೌಂಟ್​ಗಳ ಹಾವಳಿ ಹೆಚ್ಚಾಗಿದೆ. ಯಾರದ್ದೋ ಒಬ್ಬರ ಫೋಟೋ, ಮಾಹಿತಿಗಳನ್ನು ಹಾಕಿಕೊಂಡು ನಕಲಿ ಫೇಸ್​ಬುಕ್ ಖಾತೆ ಕ್ರಿಯೇಟ್ ಮಾಡಿ, ಅಸಲಿ ವ್ಯಕ್ತಿಯ ಸ್ನೇಹಿತರ ಬಳಿ ಹಣ ಕೇಳುವುದು ಒಂದು ದಂಧೆಯಾಗಿಬಿಟ್ಟಿದೆ. ಹೇಗೂ ನನಗೆ ಪರಿಚಯದವರೇ ಅಲ್ಲವಾ ಎಂದು ಯಾಮಾರಿ ಹಣ ಕೊಟ್ಟರೆ ಅದರ ಆಸೆ ಬಿಟ್ಟಂತೆಯೇ. ಯಾಕೆಂದರೆ ಆ ಫೇಸ್​ಬುಕ್ ಅಕೌಂಟ್​ ಯಾರದ್ದು ಎಂಬುದು ಕೂಡ ನಿಮಗೆ ಗೊತ್ತಾಗುವುದಿಲ್ಲ. ಕೆಲವು ದಿನಗಳ ಬಳಿಕ ಆ ಅಕೌಂಟ್ ಡಿಲೀಟ್ ಆಗಿಬಿಡುತ್ತದೆ.

ಮಹಾರಾಷ್ಟ್ರದ ಮುಂಬೈನ 35 ವರ್ಷದ ಸೈಬರ್ ತಜ್ಞರೊಬ್ಬರು ತಮ್ಮ ಫೇಸ್​ಬುಕ್ ಸ್ನೇಹಿತನನ್ನು ನಂಬಿ 12 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸೈಬರ್ ಸೆಕ್ಯುರಿಟಿ ಬಗ್ಗೆ ಕೆಲಸ ಮಾಡುತ್ತಿರುವ ಈ ವ್ಯಕ್ತಿ 2018ರಿಂದಲೂ ಫೇಸ್​ಬುಕ್​ನಲ್ಲಿ ಸ್ನೇಹಿತರೊಬ್ಬರೊಂದಿಗೆ ಚಾಟ್ ಮಾಡುತ್ತಿದ್ದರು. ತಾನು ದುಬೈನ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದ. ಹೀಗಾಗಿ, ಮುಂಬೈನ ವ್ಯಕ್ತಿ ಕೂಡ ತನಗೆ ದುಬೈನಲ್ಲಿ ಒಂದು ಒಳ್ಳೆಯ ಕೆಲಸವಿದ್ದರೆ ಹೇಳುವಂತೆ ಮನವಿ ಮಾಡಿದ್ದರು.

ಅದಕ್ಕೆ ಒಪ್ಪಿದ್ದ ಆತ ಬಹಳ ಬೇಗ ಜಾಸ್ತಿ ಹಣ ಸಂಪಾದಿಸಲು ನನ್ನ ಬಳಿ ಒಂದೆರಡು ಪ್ಲಾನ್​ಗಳಿವೆ ಎಂದು ಹೇಳಿದ್ದ. ಸಾಫ್ಟ್​ವೇರ್ ಕಂಪನಿಯಲ್ಲಿದ್ದರೂ ಇನ್ನೂ ಹೆಚ್ಚು ಹಣ ಸಂಪಾದಿಸಬೇಕೆಂಬ ಆಸೆಯಿಂದ ಮುಂಬೈನ ಸೈಬರ್ ಎಕ್ಸ್​ಪರ್ಟ್​ ತನ್ನ ಫೇಸ್​ಬುಕ್ ಫ್ರೆಂಡ್​ನ ಪ್ಲಾನ್ ಬಗ್ಗೆ ಕೇಳಿದ್ದರು. ಅದಕ್ಕೆ ಹೊಸ ಕತೆ ಕಟ್ಟಿದ್ದ ಆತ, ‘ದುಬೈನಲ್ಲಿರುವ ನಮ್ಮ ಬ್ಯಾಂಕ್​ನ ಗ್ರಾಹಕರೊಬ್ಬರ ಬಳಿ ಸುಮಾರು 200 ಕೋಟಿ ರೂ.ಗೂ ಹೆಚ್ಚು ಆಸ್ತಿಯಿದೆ. ಅವರಿಗೆ ಯಾರೂ ಮಕ್ಕಳಿಲ್ಲ. ಅವರು ಇತ್ತೀಚೆಗಷ್ಟೇ ಸಾವನ್ನಪ್ಪಿದರು. ಹೀಗಾಗಿ, ಆ ಹಣಕ್ಕೆ ಯಾರೂ ವಾರಸ್ದಾರರಿಲ್ಲ. ನಮ್ಮ ಬ್ಯಾಂಕ್​ನ ಖಾತೆಯಲ್ಲಿರುವ ಆ ಹಣವನ್ನು ನನ್ನ ಖಾತೆಗೆ ಹಾಕಿಕೊಂಡರೆ ಅಪರಾಧವಾಗುತ್ತದೆ. ಅದನ್ನು ಕಾನೂನುಬದ್ಧವಾಗಿ ನಿನ್ನ ಖಾತೆಗೆ ವರ್ಗಾಯಿಸುತ್ತೇನೆ. ನಂತರ ಆ ಹಣವನ್ನು ನಾವಿಬ್ಬರೂ ಹಂಚಿಕೊಳ್ಳೋಣ’ ಎಂಬ ಐಡಿಯಾ ಕೊಟ್ಟಿದ್ದ.

ತನಗೆ ಅಯಾಚಿತವಾಗಿ 100 ಕೋಟಿ ರೂ. ಸಿಗುತ್ತದೆ ಎಂಬುದನ್ನು ಕಲ್ಪನೆ ಮಾಡಿಕೊಂಡೇ ಆಕಾಶದಲ್ಲಿ ತೇಲಾಡುತ್ತಿದ್ದ ಸೈಬರ್ ಎಕ್ಸ್​ಪರ್ಟ್​ ಈ ಪ್ಲಾನ್​ಗೆ ಓಕೆ ಎಂದಿದ್ದರು. ಆ ಹಣವನ್ನು ತನಗೆ ವರ್ಗಾಯಿಸಲು ಮುಂಗಡವಾಗಿ ಸೈಬರ್ ಎಕ್ಸ್​ಪರ್ಟ್​ ತನ್ನ ಫೇಸ್​ಬುಕ್ ಗೆಳೆಯನಿಗೆ 2 ಲಕ್ಷ ರೂ. ಹಣವನ್ನು ನೀಡಿದ್ದ. ನಂತರ ದುಬೈನಲ್ಲಿದ್ದ ಸ್ನೇಹಿತ ಮೇಲ್ ಮೂಲಕ ಹಲವು ದಾಖಲೆಗಳನ್ನು ಕಳುಹಿಸಿ, ಸಹಿ ಮಾಡಿ ವಾಪಾಸ್ ಕಳುಹಿಸಲು ಹೇಳಿದ್ದ. ಆದರೂ ಅನುಮಾನಗೊಂಡ ಸೈಬರ್ ಎಕ್ಸ್​ಪರ್ಟ್ ಆ ದಾಖಲೆಗಳನ್ನು ತನಗೆ ಪರಿಚಯವಿರುವ ವಕೀಲರೊಬ್ಬರಿಗೆ ತೋರಿಸಿದ್ದರು. ಆ ವಕೀಲ ಕೂಡ ಆ ದಾಖಲೆಗಳೆಲ್ಲವೂ ಒರಿಜಿನಲ್ ಎಂದು ಹೇಳಿದ್ದರಿಂದ ಆತನಿಗೆ ಯಾವುದೇ ಅನುಮಾನವಿರಲಿಲ್ಲ. ಆ ಪೇಪರ್​ಗಳನ್ನು ರೆಡಿ ಮಾಡಿಸಿ, 200 ಕೋಟಿ ರೂ.ಗಳನ್ನು ತನ್ನ ಹೆಸರಿಗೆ ವರ್ಗಾಯಿಸಲು ತಗುಲುವ ವೆಚ್ಚಕ್ಕಾಗಿ ಆತ 2019ರ ವೇಳೆಗೆ ದುಬೈನ ಗೆಳೆಯನಿಗೆ 12 ಲಕ್ಷ ರೂ. ವರ್ಗಾಯಿಸಿದ್ದರು.

ಅದಾದ ಬಳಿಕ ಹಲವು ದಿನಗಳಾದರೂ ದುಬೈನ ಫೇಸ್​ಬುಕ್ ಗೆಳೆಯನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮುಂಬೈನ ವ್ಯಕ್ತಿ ಚಾರ್ಟರ್ಟ್​ ಅಕೌಂಟೆಂಟ್ ಬಳಿ ನಡೆದ ವಿಷಯವನ್ನೆಲ್ಲ ಹೇಳಿದ್ದರು. ಆದರೆ, ಆ ದಾಖಲೆಗಳಲ್ಲಿ ಯಾವುದೇ ತಪ್ಪುಗಳಿಲ್ಲ, ಎಲ್ಲವೂ ಕಾನೂನುಬದ್ಧವಾಗಿದೆ ಎಂದು ಸಿಎ ಹೇಳಿದ್ದರಿಂದ ಮುಂಬೈನ ವ್ಯಕ್ತಿ ಕೊಂಚ ನಿರಾಳವಾಗಿದ್ದರು. ಸೈಬರ್ ಎಕ್ಸ್​ಪರ್ಟ್​ ಆಗಿದ್ದ ಆತ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಆ ಫೇಸ್​ಬುಕ್ ಫ್ರೆಂಡ್ ಬಗ್ಗೆ ಮಾಹಿತಿ ಹೊರಗೆ ತೆಗೆಯಲು ಪ್ರಯತ್ನಿಸಿದ್ದರು. ಆ ಫೇಸ್​ಬುಕ್ ಖಾತೆಯನ್ನು ದುಬೈ ಮತ್ತು ಟರ್ಕಿಯಿಂದ ಆಪರೇಟ್ ಮಾಡಲಾಗುತ್ತಿದೆ ಎಂಬುದು ಆತನಿಗೆ ಗೊತ್ತಾಗಿತ್ತು. ಇಲ್ಲೇನೋ ಗೋಲ್​ಮಾಲ್ ನಡೆಯುತ್ತಿದೆ ಎಂದು ಅನುಮಾನಗೊಂಡ ಆತ ಬಿಕೆಸಿ ಸೈಬರ್ ಪೊಲೀಸ್​ಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Crime News: ನಾಲ್ಕು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ; ಬೆಂಗಳೂರಿನಲ್ಲಿ ಘಟನೆ

Crime News: ಬಾಯ್​ಫ್ರೆಂಡ್ ಜೊತೆ ಸೇರಿ ಗಂಡನನ್ನೇ ಕೊಂದು, ಸುಟ್ಟುಹಾಕಿದ ಹೆಂಡತಿ; 10 ವರ್ಷಗಳ ಬಳಿಕ ಸೆರೆ ಸಿಕ್ಕ ಹಂತಕಿ

(Crime News: Mumbai Cyber expert falls for Facebook friends plot loses Rs 12 lakh in Cyber Fraud)