Mangalore: ಮಹಿಳೆ ಮಾನಭಂಗ ಆರೋಪಿಸಿ ನೈತಿಕ ಪೊಲೀಸ್ ಗಿರಿ ಪ್ರಕರಣ: ಆರು ಮಂದಿ ಅರೆಸ್ಟ್

| Updated By: Rakesh Nayak Manchi

Updated on: Oct 23, 2022 | 5:59 PM

ಮಹಿಳೆ ಮಾನಭಂಗ ಆರೋಪಿಸಿ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ಸಚಿವ ಎಸ್.ಅಂಗಾರ ಅವರು ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ.

Mangalore: ಮಹಿಳೆ ಮಾನಭಂಗ ಆರೋಪಿಸಿ ನೈತಿಕ ಪೊಲೀಸ್ ಗಿರಿ ಪ್ರಕರಣ: ಆರು ಮಂದಿ ಅರೆಸ್ಟ್
ಮಹಿಳೆ ಮಾನಭಂಗ ಆರೋಪಿಸಿ ನೈತಿಕ ಪೊಲೀಸ್ ಗಿರಿ ಪ್ರಕರಣ: ಆರು ಮಂದಿ ಅರೆಸ್ಟ್
Follow us on

ಮಂಗಳೂರು: ಮಹಿಳೆ ಮಾನಭಂಗ ಆರೋಪಿಸಿ ನಡೆಡ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಕಾರು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಆರೋಪದಡಿ ಪುನೀತ್, ರಾಜು, ಕಿಶೋರ್, ಭವಿತ್, ರಂಜಿತ್ ಮತ್ತು ಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ರಮೀಜುದ್ದಿನ್ ಮತ್ತು ಮಹಮ್ಮದ್ ರಫೀಕ್ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ‌ಕಡಬ ತಾಲೂಕಿನ ದೋಲ್ಬಾಡಿಯ ಸಂತ್ರಸ್ತ ಮಹಿಳೆ ಮನೆಗೆ ಸಚಿವ ಎಸ್. ಅಂಗಾರ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು.

ಮಹಿಳೆಗೆ ಸಾಂತ್ವಾನ ಹೇಳಿದ ನಂತರ ಮಾತನಾಡಿದ ಸಚಿವರು, ಇದು ಅತ್ಯಂತ ನೋವು ತರುವ ಘಟನೆಯಾಗಿದೆ. ಕಾಂಗ್ರೆಸ್ಸಿಗರು ಈ ಘಟನೆಯ ವಾಸ್ತವ ಮರೆಮಾಚಿ ನೈತಿಕ ಪೊಲೀಸ್ ಗಿರಿ ಎಂದು ಹೇಳುತ್ತಿದ್ದಾರೆ. ಕಂಬಳಿ ಮಾರಾಟ ಮಾಡಲು ಬಂದವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ವಾಸ್ತವಿಕ ಸತ್ಯಾಂಶವನ್ನು ಗೃಹ ಸಚಿವರಿಗೂ ತಿಳಿಸಿದ್ದೇನೆ. ಮಹಿಳೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದೇನೆ ಎಂದರು.

ಏನಿದು ಪ್ರಕರಣ?

‌ಕಡಬ ತಾಲೂಕಿನ ದೋಲ್ಬಾಡಿಯ ಮಹಿಳೆ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ರಮೀಜುದ್ದಿನ್ ಮತ್ತು ಮಹಮ್ಮದ್ ರಫೀಕ್ ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಬಂದಿದ್ದರು. ಈ ವೇಳೆ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಚಿನ್ನದ ಸರ ಎಗರಿಸಲು ಯತ್ನ ಮಾಡಿರುವುದಾಗಿ ಮತ್ತು ‌ಮಹಿಳೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂತು.

ಅನ್ಯಕೋಮಿನ ಇಬ್ಬರು ಯುವಕರು ಮಾನಭಂಗಕ್ಕೆ ಯತ್ನಿಸುತ್ತಿದ್ದಂತೆ ಮಹಿಳೆ ಬೊಬ್ಬೆ ಹೊಡೆದಿದ್ದು, ಭಯದಿಂದ ಇಬ್ಬರು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಕಾರು ಪಲ್ಟಿಯಾಗಿದ್ದಲ್ಲದೆ, ಅವರನ್ನು ಕಾರಿನಿಂದ ಹೊರಕ್ಕೆ ಎಳೆದ ಸ್ಥಳೀಯರು ಥಳಿಸಿದ್ದರು. ಬಳಿಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿದ್ದರು.

ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ರಮೀಜುದ್ದಿನ್ ಮತ್ತು ಮಹಮ್ಮದ್ ಬೆಳ್ಳಾರೆ ಪೊಲೀಸ್ ಠಾಣೆಗೆ ತೆರಳಿ ನೈತಿಕ ಪೊಲೀಸ್ ಗಿರಿ ಬಗ್ಗೆ ದೂರು ನೀಡಿದ್ದರು. ಕಾರು ತಡೆದ ನಿಲ್ಲಿಸಿ ಹೊರಗೆಳೆದು ದೊಣ್ಣೆ, ಕಬ್ಬಿಣದ ರಾಡ್, ಕಾಲಿನಿಂದ ತುಳಿದು ರಸ್ತೆಯಲ್ಲಿ ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕಾರನ್ನು ಹುಡಿ ಮಾಡಿ ಜಖಂ ಗೊಳಿಸಿ ಲಕ್ಷಾಂತರ ರೂಪಾಯಿ ನಷ್ಟ ಎಸಗಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Sun, 23 October 22