ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆಗೆ ಶರಣು!
ಹೆಂಡತಿ ಮನೆ ಬಿಟ್ಟು ಹೋದಳು ಎಂದು ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ: ಹೆಂಡತಿ ಮನೆ ಬಿಟ್ಟು ಹೋದಳು ಎಂದು ಗಂಡ ವಿಷ (poison) ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಗಂಡ ಹೊಳ್ಳಪ್ಪ, ಹೆಂಡತಿ ವಾಸಂತಿ (20), ಮಗಳು ಮಾನಸಾ (ಒಂದೂವರೆ ವರ್ಷ) ಮೃತರು. ಹೊಳ್ಳಪ್ಪ ಮತ್ತು ವಾಸಂತಿ ಇವರದು ಲವ್ ಮ್ಯಾರೇಜ್. ಅಂತರ್ಜಾತಿ ಆದರು ಮನೆಯವರನ್ನ ಒಪ್ಪಿಸಿ ಇಬ್ಬರು ಮದುವೆ ಆಗಿದ್ದರು. ಆದರೆ ಐದು ವರ್ಷ ಚೆನ್ನಾಗಿದ್ದ ಅವರ ದಾಂಪತ್ಯ ಜೀವನದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ ನಾಲ್ಕು ದಿನದ ಹಿಂದಷ್ಟೇ ಹೆಂಡತಿ ತವರಿಗೆ ಹೋಗಿದ್ದಳು. ಹೆಂಡತಿ ಮನೆ ಬಿಟ್ಟು ಹೋಗುತ್ತಿದ್ದಂತೆ ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತ್ತ ವಿಷಯ ತಿಳಿದ ಹೆಂಡತಿ ದುಡುಕಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾಳೆ.
ಅಷ್ಟಕ್ಕೂ ವಾಸಂತಿ ಐದು ವರ್ಷದ ಹಿಂದೆ ತನ್ನ ಊರಿಗೆ ಹೊಂದಿಕೊಂಡಿರುವ ಮಲ್ಲಹೋಳ ಗ್ರಾಮದ ಹೊಳ್ಳಪ್ಪನ ಜತೆಗೆ ಮದುವೆಯಾಗಿದ್ದಾಳೆ. ಮದುವೆಗೂ ಮುನ್ನ ಈ ಜೋಡಿ ಎರಡು ವರ್ಷ ಪ್ರೀತಿ ಮಾಡಿದ್ದರು. ವಂಟಮೂರಿ ಗ್ರಾಮದ ಈಕೆ ಒಂದು ಕಿಮೀ ದೂರದಲ್ಲಿರುವ ಮಲ್ಲಹೋಳದಲ್ಲಿರುವ ಬಾವಿಗೆ ಹೋಗಿ ನೀರು ತರುತ್ತಿದ್ದಳು. ಈ ವೇಳೆ ಹೊಳ್ಳಪ್ಪ ಹಾಗೂ ವಾಸಂತಿ ನಡುವೆ ಪ್ರೀತಿ ಶುರುವಾಗಿದೆ. ಇಬ್ಬರದ್ದು ಬೇರೆ ಬೇರೆ ಜಾತಿಯಾದರೂ ಎರಡು ವರ್ಷ ಪ್ರೀತಿ ಬಳಿಕ ಈ ವಿಚಾರ ಮನೆಯವರಿಗೆ ಗೊತ್ತಾಗಿ, ಎರಡು ಮನೆಯವರು ಒಪ್ಪಿಕೊಂಡು ಇಬ್ಬರ ಮದುವೆ ಮಾಡಿದ್ದಾರೆ. ಹೀಗೆ ಐದು ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿ ಆರಂಭದಲ್ಲಿ ಖುಷಿ ಖುಷಿಯಾಗಿದ್ದರು. ಡ್ರೈವರ್ ಆಗಿದ್ದ ಹೊಳ್ಳಪ್ಪ ಕೆಲ ದಿನಗಳಿಂದ ನಿತ್ಯವೂ ಕುಡಿದು ಮನೆಗೆ ಬಂದು ಹೆಂಡತಿ ಜತೆಗೆ ಸಣ್ಣಪುಟ್ಟ ಜಗಳ ಮಾಡುತ್ತಿದ್ದ. ಇದರಿಂದ ಬೇಸರಗೊಂಡ ಹೆಂಡತಿ ವಾಸಂತಿ ನಾಲ್ಕು ದಿನದ ಹಿಂದೆ ತವರು ಮನೆ ಹೋಗಿದ್ದಾಳೆ.
ಇಲ್ಲಿ ಹೆಂಡತಿ ವಾಸಂತಿ ಗಂಡ ಹೊಳ್ಳಪ್ಪನ ಜತೆಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದು, ಗಂಡ ಸಿಕ್ಕಾಪಟ್ಟೆ ಕುಡಿಯಲು ಆರಂಭಿಸಿದ್ದಾನೆ. ಅ.20ರಂದು ಕಂಠಪೂರ್ತಿ ಕುಡಿದ ಹೊಳ್ಳಪ್ಪ ಅಂದೇ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೆಂಡತಿ ಬಿಟ್ಟು ಹೋದಳು ಅನ್ನೋ ಕಾರಣಕ್ಕೆ ಈ ರೀತಿ ಹೊಳ್ಳಪ್ಪ ಸಾವಿನ ಮನೆ ಸೇರಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಹೆಂಡತಿ ವಾಸಂತಿ ಅಂದು ಗಂಡನ ಅಂತ್ಯಸಂಸ್ಕಾರ ನೆರವೇರಿಸಿ ಸುಮ್ಮನಾಗಿದ್ದಾಳೆ. ಆದರೆ ಮಾರನೇ ದಿನ ಅಂದರೆ ಅ.21ರಂದು ಪ್ರೀತಿಸಿದ ಗಂಡನೇ ಹೋದ ಎಂದು ಮನನೊಂದು ಮಧ್ಯಾಹ್ನದ ವೇಳೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬೇರೊಬ್ಬರ ಜಮೀನಿಗೆ ಹೋಗಿದ್ದಾಳೆ. ಮೂರು ವರ್ಷದ ಒಂದು ಮಗುವನ್ನು ಕಮಲವ್ವಾ ಎನ್ನುವವರ ಮನೆಯಲ್ಲಿ ಬಿಟ್ಟು, ಒಂದೂವರೆ ವರ್ಷದ ಮಾನಸಾ ಎಂಬ ಮಗಳನ್ನ ಕರೆದುಕೊಂಡು ಜಮೀನಿಗೆ ಹೋಗಿದ್ದಾಳೆ. ಹೀಗೆ ಹೋದಾಕೆ ಯಾರು ಇಲ್ಲದ್ದನ್ನ ಗಮನಿಸಿ ಮೊದಲು ಮಗಳು ಮಾನಸಾಳನ್ನ ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಅಲ್ಲೇ ಇದ್ದ ಮರಕ್ಕೆ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕಾಕತಿ ಪೊಲೀಸರು ಕೂಡಲೇ ಶವಗಳನ್ನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದ್ದು, ಊರಲ್ಲಿ ತಾಯಿ ಹಾಗೂ ಮಗಳ ಅಂತ್ಯಸಂಸ್ಕಾರ ನೆರವೇರಿದೆ. ಇದೇ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ
ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆ
Published On - 10:24 am, Sun, 23 October 22