ಬೆಂಗಳೂರು: ಸರ್ಕಾರಿ ವೈದ್ಯರೊಬ್ಬರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರ ತಿಲಕ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಾ.ಎಸ್.ರೇಣುಕಾನಂದ (43) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಜಯನಗರ (Jayanagar) ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದ ರೇಣುಕಾನಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತ ಅವರು ಆಸ್ಪತ್ರೆಯ ಡ್ಯೂಟಿ ರೂಮ್ನಲ್ಲೇ ಇಂದು (ಏಪ್ರಿಲ್ 23) ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾಯಿ ಸೀರೆಯಿಂದ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈದ್ಯರು ನೇಣಿಗೆ ಶರಣಾಗಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ತಿಲಕ್ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರಿನ ಅನ್ವಯ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ರೇಣುಕಾನಂದ ಅವರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಮೂವರು ಸಹೋದರರು ನೀರುಪಾಲಾದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಬಳಿ ನಡೆದಿದೆ. ಹಿರೇಗೋಣಿಗೆರೆ ಗ್ರಾಮದ ಕಿರಣ್ (14), ವರುಣ್ (15), ಪವನ್ (16) ಮೃತಪಟ್ಟ ಸಹೋದರರು. ಸ್ನಾನ ಮಾಡಲೆಂದು ನದಿಗೆ ಇಳಿದ ಮೂವರು ನೀರುಪಾಲಾಗಿದ್ದು, ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಜೋಧ್ಪುರದಲ್ಲಿ 11 ಮಂದಿ ಪಾಕಿಸ್ತಾನಿ ವಲಸಿಗರ ಸಾಮೂಹಿಕ ಆತ್ಮಹತ್ಯೆ ಪ್ರಕರಣ, 3 ವರ್ಷದ ಬಳಿಕ ಅಂತೂ ಕಾರಣ ಬಹಿರಂಗವಾಯ್ತು
ಸದ್ಯ ನೀರುಪಾಲಾದ ಮೂವರ ಪೈಕಿ ವರುಣ್ ಮೃತದೇಹ ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂಪಿ ರೇಣುಕಾಚಾರ್ಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಚಾಮರಾಜನಗರ: ಸಿಡಿಲು ಬಡಿದು 8 ಹಸುಗಳು ಮತ್ತು 2 ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರಾಜಪ್ಪ ಎಂಬುವವರು ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುವ ಸಂದರ್ಭದಲ್ಲಿ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ. ಸದ್ಯ ಜಾನುವಾರುಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತ ರಾಜಪ್ಪ ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Sun, 23 April 23