ಹಾವೇರಿ: ವ್ಯಕ್ತಿಯೊಬ್ಬರನ್ನು ಕೊಡಲಿಯಿಂದ ಹತ್ಯೆ ಮಾಡಿ ಬಳಿಕ ಸುಟ್ಟು ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಇತ್ತ ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ಮೃತದೇಹದ ಗುರುತನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿತ್ತು. ಏಕೆಂದರೆ ಕಾಲಿನ ಅಲ್ಪಸ್ವಲ್ಪ ಭಾಗ ಬಿಟ್ಟರೆ ದೇಹದ ಉಳಿದೆಲ್ಲಾ ಭಾಗ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಆದರೆ ಕಾಲಿನ ಮೇಲಿದ್ದ ಗಾಯದ ಗುರುತುಗಳಿಂದ ಪೊಲೀಸರು ಮೃತನ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅದರಂತೆ ಪ್ರಕರಣದ ಬೆನ್ನು ಬಿದ್ದಾಗ ಮೃತನ ಪತ್ನಿ ಸೇರಿದಂತೆ ಏಳು ಜನರು ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ. ಈ ಬಗ್ಗೆ ಸಂಪೂರ್ಣ ಸ್ಟೋರಿ ಇಲ್ಲಿದೆ ನೋಡಿ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಆಗಸ್ಟ್ 25ರಂದು ವ್ಯಕ್ತಿಯೊಬ್ಬನ ಮೃತದೇಹ ಪತ್ತೆ ಆಗಿತ್ತು. ಗ್ರಾಮದ ಬಳಿ ಇರೋ ಹಳ್ಳದ ಪೊದೆಯಲ್ಲಿ ವ್ಯಕ್ತಿಯ ಮೃತದೇಹವನ್ನು ದುಷ್ಕರ್ಮಿಗಳು ಸಂಪೂರ್ಣ ಸುಟ್ಟು ಹಾಕಿ ಪರಾರಿಯಾಗಿದ್ದರು. ಶೇ.99 ರಷ್ಟು ಭಾಗ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ ಇದೊಂದು ಅಪರಿಚಿತ ಮೃತದೇಹ ಅಂತಾ ತಡಸ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಯಿತು. ನಂತರ ಪೊಲೀಸರು ತನಿಖೆಗೆ ಇಳಿದರು. ಆದರೆ ಪೊಲೀಸರಿಗೆ ಮೃತನ ಎರಡು ಕಾಲಿನ ಅಲ್ಪಸ್ವಲ್ಪ ಭಾಗಗಳು ದೊರೆತಿದ್ದು ಬಿಟ್ಟರೆ ಹತ್ಯೆಯಾದವನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಸುಟ್ಟು ಉಳಿದಿದ್ದ ಕಾಲಿನ ಅಲ್ಪಸ್ವಲ್ಪ ಭಾಗಗಳನ್ನೆ ಹಿಡಿದುಕೊಂಡು ಪೊಲೀಸರು ತನಿಖೆಗೆ ಆರಂಭಿಸಿದ್ದರು. ಎರಡು ತಿಂಗಳು ಕಳೆದರೂ ಹತ್ಯೆಯಾದವನ ಬಗ್ಗೆ ಯಾವುದೇ ಸುಳಿವು ಸಿಕ್ಕಿರ್ಲಿಲ್ಲ. ಕೆಲವೇ ಕೆಲವು ದಿನಗಳ ಹಿಂದೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದರ ಬೆನ್ನು ಬಿದ್ದ ಪೊಲೀಸರು ಮಿಸ್ಸಿಂಗ್ ಆಗಿದ್ದವನ ಸಂಬಂಧಿಕರಿಗೆ ಹತ್ಯೆಯಾಗಿದ್ದ ಮೃತದೇಹದ ಕಾಲಿನ ಭಾಗಗಳನ್ನು ತೋರಿಸಿದರು. ಆಗ ಕಾಲಿನ ಮೇಲೆ ಆಗಿದ್ದ ಗಾಯದ ಗುರುತುಗಳನ್ನು ಗಮನಿಸಿದ ಮಿಸ್ಸಿಂಗ್ ಆಗಿದ್ದ ಸಕ್ರಪ್ಪ ಲಮಾಣಿ ಎಂಬುವರ ಸಂಬಂಧಿಕರು ಮೃತದೇಹ ಸಕ್ರಪ್ಪ ಲಮಾಣಿಯದ್ದೆ ಅಂತಾ ಗುರುತಿಸಿದ್ದಾರೆ. ಅದರ ನಂತರ ತನಿಖೆಗೆ ಇಳಿದ ಪೊಲೀಸರಿಗೆ ಸಕ್ರಪ್ಪನ ಹತ್ಯೆಗೆ ಆತನ ಪತ್ನಿ ಶೀಲವ್ವ ಲಮಾಣಿ ಪರಪುರುಷನ ಜೊತೆಗೆ ಹೊಂದಿದ್ದ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ.
ಹತ್ಯೆಯಾಗಿದ್ದ ಸಕ್ರಪ್ಪ ಲಮಾಣಿಗೆ ನಾಲ್ವತ್ತು ವರ್ಷ ವಯಸ್ಸು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ನಿವಾಸಿ. ಸಕ್ರಪ್ಪನಿಗೆ ಪತ್ನಿ ಶೀಲವ್ವ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸಕ್ರಪ್ಪಳ ಪತ್ನಿ ಶೀಲವ್ವಳಿಗೆ ಪತಿ ಮತ್ತು ಇಬ್ಬರು ಮಕ್ಕಳಿದ್ದರೂ ಮೂಲತಃ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಸುರೇಶ ಮಿರ್ಜಿ ಅಲಿಯಾಸ್ ಲಮಾಣಿ ಎಂಬಾತನ ಜೊತೆ ಅನೈತಿಕ ಸಂಬಂಧ ಕುದುರಿತ್ತು. ಸುರೇಶ ಮತ್ತು ಶೀಲವ್ವಳ ನಡುವಿನ ಅನೈತಿಕ ಸಂಬಂಧದ ವಿಷಯ ಶೀಲವ್ವಳ ಪತಿ ಸಕ್ರಪ್ಪನಿಗೆ ಗೊತ್ತಾಗಿದೆಯಂತೆ. ಹೀಗಾಗಿ ಸಕ್ರಪ್ಪನನ್ನು ಮುಗಿಸೋಕೆ ಸಕ್ರಪ್ಪನ ಪತ್ನಿ ಶೀಲವ್ವ ಹಾಗೂ ಸುರೇಶ ಸೇರಿಕೊಂಡು ಸಂಚು ರೂಪಿಸಿದ್ದಾರೆ.
ಸಕ್ರಪ್ಪನಿಗೆ ಕುಡಿತದ ಚಟವಿರೋದು ಹಾಗೂ ಆತನಿಗೆ ಹಣದ ಅವಶ್ಯಕತೆ ಇರುವುದನ್ನೇ ಬಂಡವಾಳ ಮಾಡಿಕೊಂಡು ಸಕ್ರಪ್ಪನ ಹತ್ಯೆಗೆ ಸಂಚು ರೂಪಿಸಲಾಗಿದೆ. ಅದರಂತೆ ಆಗಸ್ಟ್ 25ರ ರಾತ್ರಿ ಸುರೇಶ, ಚಂದ್ರಪ್ಪ, ಗೋದಪ್ಪ ಎಂಬುವರು ಸೇರಿಕೊಂಡು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಅಡವಿಸೋಮಾಪುರ ಗ್ರಾಮದ ಬಳಿ ಇರುವ ಡಾಬಾವೊಂದಕ್ಕೆ ಬಂದಿದ್ದಾರೆ. ಅಲ್ಲಿ ಭರ್ಜರಿ ಊಟ ಮಾಡಿ ಕಂಠಪೂರ್ತಿ ಕುಡಿದಿದ್ದಾರೆ. ನಂತರ ಅಡವಿಸೋಮಾಪುರ ಗ್ರಾಮದ ಬಳಿ ಇರುವ ಹಳ್ಳದ ಬಳಿಯಲ್ಲಿ ಆರೋಪಿಗಳು ಸಕ್ರಪ್ಪನಿಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿ ಆಗಿದ್ದರು.
ಮರುದಿನ ರಾತ್ರಿ ವೇಳೆಯಲ್ಲಿ ಪಂಕ್ಚರ್ ಅಂಗಡಿಯೊಂದರಿಂದ ಹಾಳಾದ ಟೈರ್, ಪೆಟ್ರೋಲ್ ತೆಗೆದುಕೊಂಡು ಸಕ್ರಪ್ಪನನ್ನು ಹತ್ಯೆ ಮಾಡಿದ್ದ ಸ್ಥಳಕ್ಕೆ ಆರೋಪಿಗಳುಯ ಬಂದಿದ್ದಾರೆ. ಪೊದೆಯಲ್ಲಿ ಯಾರಿಗೂ ಕಾಣದಂತೆ ಬಿದ್ದಿದ್ದ ಮೃತದೇಹವನ್ನು ಟೈರ್ನಲ್ಲಿ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮೃತದೇಹ ಸಂಪೂರ್ಣ ಸುಡುತ್ತಿದ್ದಂತೆ ಅಲ್ಲಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಮೃತದೇಹ ಗುರುತು ಸಿಗದಂತೆ ಸಂಪೂರ್ಣ ಸುಟ್ಟಿದ್ದರೂ ಸಕ್ರಪ್ಪನ ಮೃತದೇಹದ ಎರಡು ಕಾಲುಗಳು ಮಾತ್ರ ಅಲ್ಪಸ್ವಲ್ಪ ಪ್ರಮಾಣದಲ್ಲಿ ಉಳಿದುಕೊಂಡಿದ್ದವು. ಇದರ ಆಧಾರದ ಮೇಲೆ ತನಿಖೆ ನಡೆಸಿದ ಶಿಗ್ಗಾಂವಿ ಠಾಣೆ ಸಿಪಿಐ ಬಸವರಾಜ ಹಳಬಣ್ಣವರ ನೇತೃತ್ವದ ಪೊಲೀಸರ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಸಕ್ರಪ್ಪನ ಪತ್ನಿ ಶೀಲವ್ವ, ಶೀಲವ್ವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸುರೇಶ ಮಿರ್ಜಿ ಅಲಿಯಾಸ್ ಲಮಾಣಿ ಹಾಗೂ ಹತ್ಯೆ ಮತ್ತು ಸಾಕ್ಷ್ಯ ನಾಶಕ್ಕೆ ಸಹಾಯ ಮಾಡಿದವರು ಸೇರಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಸಕ್ರಪ್ಪ ಅಲ್ಲಿದ್ದಾನೆ, ಇಲ್ಲಿದ್ದಾನೆ ಎನ್ನುತ್ತಿದ್ದ ಪತ್ನಿ
ಸಕ್ರಪ್ಪ ಮನೆಯಿಂದ ಕಾಣೆ ಆಗುತ್ತಿದ್ದಂತೆ ಸಕ್ರಪ್ಪನ ಸಂಬಂಧಿಕರು ಹಾಗೂ ಗ್ರಾಮದ ಜನರು ಸಕ್ರಪ್ಪನ ಪತ್ನಿಯನ್ನು ವಿಚಾರಿಸಿದ್ದಾರೆ. ಆದರೆ ಸಕ್ರಪ್ಪನ ಪತ್ನಿ ಶೀಲವ್ವ ಪತಿ ಸಕ್ರಪ್ಪ ದುಡಿಯಲು ಹೋಗಿದ್ದಾನೆ, ಅಲ್ಲಿದ್ದಾನೆ, ಇಲ್ಲಿದ್ದಾನೆ ಅಂತಾ ಇಲ್ಲದ ಕತೆಗಳನ್ನು ಹೇಳಿದ್ದಾಳೆ. ತಾಂಡಾದ ಜನರು ಎಲ್ಲಿಯೇ ಕೆಲಸಕ್ಕೆ ಹೋದರೂ ದೀಪಾವಳಿ ಹಬ್ಬಕ್ಕೆ ಬರುತ್ತಾರೆ. ತಾಂಡಾದ ಬಹುತೇಕ ಜನರು ದೀಪಾವಳಿ ಹಬ್ಬಕ್ಕೆ ಬಂದರೂ ಸಕ್ರಪ್ಪ ಮಾತ್ರ ಬಂದಿರಲಿಲ್ಲ.
ಅಷ್ಟೊತ್ತಿಗಾಗಲೇ ಸಕ್ರಪ್ಪನ ಪತ್ನಿ ಶೀಲವ್ವಳ ಹಾವಭಾವ ಕೂಡ ಬದಲಾಗಿದ್ದವು. ಇದನ್ನು ಗಮನಿಸಿದ ಗ್ರಾಮಸ್ಥರು ಹಾಗೂ ಸಕ್ರಪ್ಪನ ಸಂಬಂಧಿಕರು ಲಕ್ಷ್ಮೇಶ್ವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಇದರ ಜಾಡು ಹಿಡಿದು ಹೊರಟ ಹಾವೇರಿ ಜಿಲ್ಲೆ ಶಿಗ್ಗಾಂವಿ ಸಿಪಿಐ ಬಸವರಾಜ ಹಳಬಣ್ಣವರ ನೇತೃತ್ವದ ಪೊಲೀಸರ ತಂಡ ಹತ್ಯೆಯಾದವನ ಪತ್ನಿ ಸೇರಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟಾರೆ ಪತ್ನಿಯ ಅನೈತಿಕ ಸಂಬಂಧಕ್ಕೆ ಪತಿಯೊಬ್ಬ ಅಮಾನುಷವಾಗಿ ಹತ್ಯೆಯಾಗಿದ್ದು, ಆರೋಪಿಗಳಿಗೆ ಪೊಲೀಸರು ತಕ್ಕ ಶಿಕ್ಷೆ ಕೊಡಿಸಬೇಕಿದೆ.
ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Sun, 6 November 22