ಶ್ರೀನಿವಾಸಪುರ: ಮತ್ತೆ ಹೆಣ್ಣು ಮಗು ಹುಟ್ಟಿತೆಂದು ಮನನೊಂದು ನೇಣಿಗೆ ಶರಣಾದ ತಂದೆ
ಮತ್ತೆ ಹೆಣ್ಣು ಮಗು ಹುಟ್ಟಿತೆಂದು ತಂದೆ ನೇಣಿಗೆ ಶರಣಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಲಾರ: ಹೆಣ್ಣು ಮಕ್ಕಳಾದರೆ ಕಣ್ಣೀರು ಹಾಕುವ ಕಾಲವೊಂದಿತ್ತು. ಆದರೆ ಇವತ್ತು ಹೆಣ್ಣು (girl) ಪ್ರತಿ ಹಂತದಲ್ಲೂ ತಾನು ಗಂಡಿಗಿಂತ ಕಡಿಮೆ ಇಲ್ಲಾ ಅನ್ನೋದನ್ನ ಸಾಬೀತು ಮಾಡುವ ಮೂಲಕ ಗಂಡಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಎಲ್ಲ ರಂಗದಲ್ಲೂ ತನ್ನ ಸಾಧನೆಯನ್ನು ಸಾಧಿಸಿ ತೋರಿಸಿದ್ದಾಳೆ ಇಂಥ ಕಾಲದಲ್ಲೂ ಇಲ್ಲೊಬ್ಬ ತಂದೆ ತನಗೆ ಹೆಣ್ಣು ಮಕ್ಕಳಾಯ್ತು ಎಂದು ಮನನೊಂದು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಶೆಟ್ಟಿಹಳ್ಳಿ ಗ್ರಾಮದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಲೋಕೇಶ್ಗೆ ಕಳೆದ ಎಂಟು ವರ್ಷಗಳ ಹಿಂದೆ ಆಂಧ್ರ ಪ್ರದೇಶ ಪುಂಗನೂರಿನ ಸಿರಿಶ ಎನ್ನುವವರೊಂದಿಗೆ ಮದುವೆ ಮಾಡಲಾಗಿತ್ತು. ಇದಾದ ನಂತರ ಲೋಕೇಶ್ಗೆ ಎರಡು ವರ್ಷಗಳ ಅಂತರದಲ್ಲಿ ಮೂರು ಜನ ಹಣ್ಣುಮಕ್ಕಳಾಗಿವೆ. ಇದರಿಂದ ಲೋಕೇಶ್ ತನಗೆ ಗಂಡು ಮಕ್ಕಳಾಗಿಲ್ಲ ಅನ್ನೋ ಕೊರಗು ಸಾಕಷ್ಟು ಬಾದಿಸುತ್ತಲೇ ಇತ್ತು. ಜೊತೆಗೆ ಸ್ನೇಹಿತರು ಹಾಗೂ ಕೆಲವು ಜೊತೆಗಿದ್ದವರು ಅದೇ ವಿಚಾರವಾಗಿ ಲೋಕೇಶ್ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಆದರೂ ಕುಟುಂಬಸ್ಥರು ಲೋಕೇಶ್ಗೆ ಸಮಾಧಾನ ಮಾಡಿ ದೈರ್ಯ ಹೇಳಿದ್ದರು. ಹೀಗಿರುವಾಗಲೇ ನವೆಂಬರ್ 4 ರಂದು ಲೋಕೇಶ್ ಪತ್ನಿಗೆ ಸಿರಿಶಗೆ ನಾಲ್ಕನೇ ಮಗುವಾಗಿದ್ದು, ಅದೂ ಕೂಡಾ ಹೆಣ್ಣುಮಗುವಾಗಿದೆ. ವಿಷಯ ತಿಳಿದು ಕಣ್ಣೀರು ಹಾಕಿ ತೀವ್ರವಾಗಿ ನೊಂದಿದ್ದ ಲೋಕೇಶ್ ನಿನ್ನೆ ರಾತ್ರಿ ಮನೆಯಲ್ಲಿ ಒಂಟಿಯಾಗಿ ಮಲಗಿದ್ದಾನೆ. ಪ್ರತಿನಿತ್ಯ ತನ್ನ ಮನೆಯಲ್ಲೇ ಮಲಗುತ್ತಿದ್ದ ತನ್ನ ತಾಯಿಯನ್ನು ತನ್ನ ತಮ್ಮನ ಮನೆಗೆ ಕಳಿಸಿ ತಾನೊಬ್ಬನೇ ಮನೆಯಲ್ಲಿ ಮಲಗಿದ್ದಾನೆ. ಮಧ್ಯರಾತ್ರಿ ಸುಮಾರಿಗೆ ಮನೆಯ ಪ್ಯಾನ್ಗೆ ಲೋಕೇಶ್ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದು ಮನೆಗೆ ಬಂದ ಸಂಬಂಧಿಕರು ಹಾಗೂ ಲೋಕೇಶ್ ಸೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಎಂಥ ಕೆಲಸ ಮಾಡಿಬಿಟ್ಟ ನಮ್ಮಣ್ಣ, ದಯವಿಟ್ಟು ಯಾರೂ ಗಂಡು ಮಕ್ಕಳಾಗಿಲ್ಲ ಎಂದು ಇಂಥ ಕೆಲಸ ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಲೋಕೇಶ್ ತಂಗಿಯರಾದ ಉಮಾ ಹಾಗೂ ವಿಮಲಾ ನೋವು ವ್ಯಕ್ತಪಡಿಸಿದರು.
ಇನ್ನು ಎಂದಿನಂತೆ ಲೋಕೇಶ್ ತಾಯಿ ಮನೆಗೆ ಬಂದು ನೋಡಿದ್ದು, ಲೋಕೇಶ್ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ. ಆಘಾತಗೊಂಡ ತಾಯಿ ತಕ್ಷಣ ತನ್ನ ಇನ್ನೊಬ್ಬ ಮಗ ಮಂಜುನಾಥ್ನನ್ನು ಕರೆದಿದ್ದಾರೆ. ಎಲ್ಲರೂ ಬಂದು ನೋಡುವಷ್ಟರಲ್ಲಿ ಲೋಕೇಶ್ ಸತ್ತುಹೋಗಿದ್ದ. ಇನ್ನು ವಿಷಯವನ್ನು ಶ್ರೀನಿವಾಸಪುರ ಪೊಲೀಸ್ ಠಾಣೆಗೆ ಪೋನ್ ಮಾಡಿ ತಿಳಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕುಟುಂಬಸ್ಥರನ್ನು ವಿಚಾರಣೆ ಮಾಡಿದರು. ಎಲ್ಲರನ್ನೂ ವಿಚಾರ ಮಾಡಿದಾಗ ಲೋಕೇಶ್ ಡ್ರೈವರ್ ಕೆಲಸ ಮಾಡಿಕೊಂಡಿದ್ದು ಒಟ್ಟು ಕುಟುಂಬದಲ್ಲಿ ಬದುಕುತ್ತಿದ್ದವನು ತನ್ನಪಾಡಿಗೆ ತಾನು ದುಡಿದು ಬದುಕುತ್ತಿದ್ದ ಯಾವುದೇ ತೊಂದರೆ ಇತರಲಿಲ್ಲ.
ಆದರೆ ಅವನಿಗೆ ಅತಿಯಾಗಿ ಬಾದಿಸುತ್ತಿದ್ದ ವಿಚಾರ ಅಂದರೆ ತನಗೆ ಗಂಡುಮಕ್ಕಳಿಲ್ಲ ಅನ್ನೋದು. ಅದನ್ನು ಸಾಕಷ್ಟು ಬಾರಿ ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಹೇಳಿಕೊಂಡು ಕಣ್ಣೀರಾಕಿದ್ದ. ಅಂತಿಮವಾಗಿ ನಾಲ್ಕನೇ ಮಗುವಾದರೂ ಗಂಡು ಮಗುವಾಗುತ್ತದೆ ಎಂದುಕೊಂಡ ಲೋಕೇಶ್, ಆದರೂ ನಾಲ್ಕನೇ ಮಗು ಕೂಡಾ ಹೆಣ್ಣಾಗಿದೆ. ಇದರಿಂದ ತೀವ್ರವಾಗಿ ಮನನೊಂದು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅನ್ನೋದು ಅವರ ತಂದೆ ಆಂಜಿನಪ್ಪ ಅವರ ಮಾತು.
ವರದಿ: ರಾಜೇಂದ್ರ ಸಿಂಹ, ಟಿವಿ9, ಕೋಲಾರ
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 pm, Sun, 6 November 22