ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ಮಹೂರ್ತ ಫಿಕ್ಸ್: ಮತದಾನ, ಫಲಿತಾಂಶ ಯಾವಾಗ?; ಇಲ್ಲಿದೆ ಮಾಹಿತಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನ ಸಭೆ ಉಪಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ಹೆಚ್.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಈ ಕ್ಷೇತ್ರಗಳು ತೆರವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿಯೂ ಟಕೆಟ್ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಈ ನಡುವೆಯೇ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿರೋದು, ಬೈ ಎಲೆಕ್ಷನ್ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ.

ಬೆಂಗಳೂರು, ಮಾರ್ಚ್ 15: ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನ ಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಏಪ್ರಿಲ್ 9ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿಯಿತ್ತು. ಇನ್ನು ಮಾರ್ಚ್ 16ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 24ರಂದು ನಾಮಪತ್ರ ಸಲ್ಲಿಸಲು ಮತ್ತು ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಿರಲಿದೆ.
ಜೋರಾದ ಟಿಕೆಟ್ ಫೈಟ್
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಶಾಮನೂರ ಶಿವಶಂಕರಪ್ಪ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಸ್ಥಿತಿ ಮನೆಯೊಂದು ಮೂರು ಬಾಗಿಲಾಗಿದ್ದರೆ, ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿದೆ. ಮತ್ತೊಂದೆಡೆ ತಮ್ಮ ಕುಟುಂಬಕ್ಕೇ ಮರಳಿ ಟಿಕೆಟ್ ಸಿಗಬೇಕೆಂವ ಆಗ್ರಹವನ್ನು ಶಾಮನೂರು ಕುಟುಂಬ ವ್ಯಕ್ತಪಡಿಸಿದ್ದರೆ, ಈ ನಡುವೆ ಅಖಾಡಕ್ಕೆ ಹೊಸ ಮುಖದ ಪ್ರವೇಶವೂ ಆಗಿದೆ. ಎಐಸಿಸಿ ಯುವ ಘಟಕದ ಕಾರ್ಯದರ್ಶಿ, ಜಿಲ್ಲೆಯ ಮುಸ್ಲಿಂ ಸಮಾಜದ ಪ್ರಭಾವಿ ಮುಖಂಡ ಸೈಯದ್ ಸೈಪುಲ್ಲಾ ಪುತ್ರ ಮಹಮ್ಮದ್ ಖಾಲೀದ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೃಹತ್ ಇಫ್ತಾರ್ ಕೂಟ ಆಯೋಜನೆ ಮಾಡಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಮತ್ತೋರ್ವ ಆಕಾಂಕ್ಷಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಕೂಡ ಹಾಜರಾಗಿರೋದು ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: 5 ಕೋಟಿ ಆಫರ್ ನೀಡಿ ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನ; ಡಿಕೆಶಿ ಸ್ಫೋಟಕ ಆರೋಪ
ಇನ್ನು ಮೊನ್ನೆ ಮೊನ್ನೆಯವರೆಗೂ ಜಿಲ್ಲೆಯಲ್ಲಿ ಕಿತ್ತಾಡುತ್ತಿದ್ದ ಬಿಜೆಪಿ ನಾಯಕರೀಗ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಪಕ್ಷ ಯಾರಿಗೇ ಮಣೆ ಹಾಕಿದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜಿಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ. ಅಜಯಕುಮಾರ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ ಹಾಗೂ ದೇವರಮನೆ ಶಿವಕುಮಾರ ಒಂದೇ ವೇದಿಕೆಗೆ ಬಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಣಗಳ ಟಿಕೆಟ್ ಆಕಾಂಕ್ಷಿಗಳು ಬಹುದಿನಗಳ ಬಳಿಕ ಒಂದೇ ವೇದಿಕೆಗೆ ಬಂದಿದ್ದು, ಪಕ್ಷ ಹೊಸ ಮುಖದ ಹುಡುಕಾಟ ನಡೆಸುತ್ತಿರೋದೇ ಇದರ ಹಿಂದಿನ ಕಾರಣ ಎನ್ನಲಾಗ್ತಿದೆ. ಅತ್ತ ಬಾಗಲಕೋಟೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ನಡುವಿನ ಸ್ಪರ್ಧೆ ಪಕ್ಷಗಳಲ್ಲಿ ಜೋರಾಗಿಯೇ ಇದ್ದು, ಅಂತಿಮವಾಗಿ ಅಖಾಡಕ್ಕೆ ಇಳಿಯುವವರು ಯಾರೆಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗುವ ನಿರೀಕ್ಷೆ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Sun, 15 March 26
