AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ದೇವಸ್ಥಾನಗಳನ್ನ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಆಂದೋಲನಕ್ಕೆ ಮುಂದಾದ ವಿಎಚ್​​ಪಿ

dakshina kannada news: ಸರ್ಕಾರದ ಹತೋಟಿಯಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಲು ಬೃಹತ್ ಆಂದೋಲನಕ್ಕೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ಅಷ್ಟೇ ಅಲ್ಲದೆ ಅಯೋಧ್ಯೆ ರಾಮಮಂದಿರ ಕಾಣಿಕೆ ಕಳವು ಪ್ರಕರಣದ ತನಿಖೆಗೂ ವಿಹೆಚ್​​ಪಿ ಒತ್ತಾಯಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದೆ.

ಹಿಂದೂ ದೇವಸ್ಥಾನಗಳನ್ನ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಆಂದೋಲನಕ್ಕೆ ಮುಂದಾದ ವಿಎಚ್​​ಪಿ
ವಿಎಚ್​​ಪಿ Image Credit source: tv9 kannada
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Aug 06, 2026 | 9:30 PM

Share

ಮಂಗಳೂರು, ಆಗಸ್ಟ್​​ 06: ‘ದೇಶಾದ್ಯಂತ ಇರುವ ಹಿಂದೂ ದೇವಸ್ಥಾನಗಳನ್ನು (Hindu Temples) ಸರ್ಕಾರಗಳ ನಿಯಂತ್ರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ (VHP) ರಾಮಜನ್ಮಭೂಮಿ ಹೋರಾಟದ ಮಾದರಿಯಲ್ಲೇ ಬೃಹತ್ ಜನಾಂದೋಲನ ರೂಪಿಸಲು ನಿರ್ಧರಿಸಿದೆ’ ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸಂಘಟನಾತ್ಮಕ ವಿಭಾಗಗಳ ಭೇಟಿ ಹಾಗೂ ಸಂತರಿಂದ ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ’ ಮಾಹಿತಿ ನೀಡಿದರು.

ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಸರ್ಕಾರದ ನಿಯಂತ್ರಣ?

‘ಸರ್ಕಾರಗಳು ಮಸೀದಿ, ಚರ್ಚ್, ಗುರುದ್ವಾರ ಅಥವಾ ಬೌದ್ಧ-ಜೈನ ಮಂದಿರಗಳ ಆಡಳಿತವನ್ನು ನಡೆಸುವುದಿಲ್ಲ. ಹೀಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಮಾತ್ರ ಏಕೆ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು’ ಎಂದು ಅಲೋಕ್ ಕುಮಾರ್​ ಪ್ರಶ್ನಿಸಿದರು. ‘ಕುಕ್ಕೆ ಸುಬ್ರಹ್ಮಣ್ಯದಂತಹ ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂ ಆದಾಯ ಬರುತ್ತಿದೆ. ದೇವಸ್ಥಾನಗಳು ಸ್ವತಂತ್ರಗೊಂಡರೆ ವರ್ಷಕ್ಕೆ ಕನಿಷ್ಠ 1 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಧಾರ್ಮಿಕ ಮತ್ತು ಹಿಂದೂ ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಬಹುದು. ಆದರೆ, ಭಕ್ತರು ನೀಡುವ ಕಾಣಿಕೆ ಹಣವನ್ನು ಆಡಳಿತದ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ಸಿಇಒಗಳ ಭಾರಿ ವೇತನ ಮತ್ತು ಆಡಿಟ್ ವೆಚ್ಚಗಳಿಗೆ ಪಾವತಿಸಲಾಗುತ್ತಿದ್ದು, ಇದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ’ ಎಂದು ಖಂಡಿಸಿದರು.

ಮುಖ್ಯಮಂತ್ರಿಗಳು, ಗವರ್ನರ್‌ಗಳಿಗೆ ಮನವಿ ಸಲ್ಲಿಕೆ

ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಗವರ್ನರ್‌ಗಳು, ಸಂಸದರು ಮತ್ತು ಶಾಸಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿಗಳು ಇದಕ್ಕೆ ಸಮ್ಮತಿಸದಿದ್ದಲ್ಲಿ ಮೆಟ್ರೋ ನಗರಗಳಲ್ಲಿ ಹಿರಿಯ ನಾಗರಿಕರು ಹಾಗೂ ಗಣ್ಯರ ಸಮ್ಮೇಳನಗಳನ್ನು ಆಯೋಜಿಸಿ ಬೃಹತ್ ಮಟ್ಟದ ಸಾರ್ವಜನಿಕ ಆಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಅಯೋಧ್ಯೆ ಕಾಣಿಕೆ ಹಣ ಕಳವು ಪ್ರಕರಣದ ತನಿಖೆಗೆ ವಿಎಚ್‌ಪಿ ಮುಕ್ತ

ಅಯೋಧ್ಯೆ ಕಾಣಿಕೆ ಹಣ ಕಳವು ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ‘ಪ್ರಕರಣ ತೀವ್ರ ಆಘಾತ ತಂದಿದೆ. ತಪ್ಪಿತಸ್ತರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ವಿಚಾರ ಬೆಳಕಿಗೆ ಬಂದ ತಕ್ಷಣವೇ ಎಸ್‌ಐಟಿ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ವಿಎಚ್‌ಪಿ ಒತ್ತಾಯಿಸಿ ಸ್ವತಃ ಎಫ್‌ಐಆರ್ ದಾಖಲಿಸಿದೆ. ತನಿಖೆಗೆ ಸಹಕರಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ರಾಮಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರು ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ’ ಎಂದರು.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮತ್ತೆ ವಿವಾದ: 30 ಕೋಟಿ ರೂ. ಮೌಲ್ಯದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಭಕ್ತರ ವಿರೋಧ, ಶಾಸಕರ ನಡೆಗೆ ಆಕ್ರೋಶ

‘ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. 2026ರ ಅಂತ್ಯದ ವೇಳೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ. ಭವಿಷ್ಯದಲ್ಲಿ ಇಂತಹ ಲೋಪಗಳು ನಡೆಯದಂತೆ ತಡೆಯಲು ವೃತ್ತಿಪರ ದೇವಸ್ಥಾನ ಆಡಳಿತ ಅನುಭವವಿರುವ ಸಿಇಒ ನೇಮಕ ಮಾಡಲು ನಿರ್ಧರಿಸಲಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿಇಓ ಹುದ್ದೆಗೆ ದೇಶಾದ್ಯಂತ ಐದು ಸಾವಿರ ಅರ್ಜಿಗಳು ಬಂದಿದ್ದು, ಪರಿಶೀಲನೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ರಿಯಾಂಕ್ ಖರ್ಗೆಗೆ ಅಲೋಕ್ ಕುಮಾರ್ ತಿರುಗೇಟು

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್​​ಎಸ್​ಎಸ್​​ ವಿರುದ್ಧ ನಿರಂತರ ವಾಗ್ದಾಳಿ ವಿಚಾರವಾಗಿ ಮಾತನಾಡಿದ ಅವರು, ‘ದೇಶದಲ್ಲಿ ವಾಕ್ ಸ್ವಾತಂತ್ರ್ಯವಿರುವ ಕಾರಣ ಮಾತನಾಡುತ್ತಿದ್ದಾರೆ, ಅದರಲ್ಲಿ ತಪ್ಪಿಲ್ಲ. ತಮ್ಮ ಹೇಳಿಕೆಗಳ ಮೂಲಕ ಅಲ್ಪ ಸಂಖ್ಯಾತರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆರ್​ಎಸ್ಎಸ್​ನ ಗುರುದಕ್ಷಿಣೆಯು ಸ್ವಯಂಸೇವಕರು ನೀಡುವ ಪವಿತ್ರ ಸಂಭಾವನೆಯಾಗಿದೆ‌. ಇದು ಯಾವುದೇ ಸಾರ್ವಜನಿಕ ದೇಣಿಗೆಯಲ್ಲ. ಬಿಹಾರ್ ಹೈಕೋರ್ಟ್ ಮತ್ತು ಆದಾಯ ತೆರಿಗೆ ಇಲಾಖೆಯ ತೀರ್ಪುಗಳ ಪ್ರಕಾರ ಇದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ವಿಚಾರಗಳು ಸ್ಪಷ್ಟವಾಗಿರುವಾಗ ಕರ್ನಾಟಕದ ಗೃಹ ಸಚಿವರ ಹೇಳಿಕೆ ಹಾಸ್ಯಾಸ್ಪದ’ ಎಂದು ಅಲೋಕ್ ಕುಮಾರ್ ತಿರುಗೇಟು ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us