
ಅಹ್ಮದಾಬಾದ್, ನವೆಂಬರ್ 16: ತಾಳಿ ಕಟ್ಟಲು ಕೆಲವೇ ಕ್ಷಣ ಇರುವಾಗ ಏನೇನೋ ಘಟನೆಗಳು ಸಂಭವಿಸಿಬಿಡುತ್ತವೆ. ವಧು (Would-be bride) ಓಡಿ ಹೋಗಬಹುದು, ಇನ್ಯಾರೋ ಹಳೆಯ ಪ್ರೇಮಿ ಬಂದು ಮದುವೆ ನಿಲ್ಲಿಸಬಹುದು, ವರದಕ್ಷಿಣ ಕೊಟ್ಟಿಲ್ಲವೆಂದು ಮದುವೆ ಮುರಿದುಬೀಳಬಹುದು. ಆದರ, ಗುಜರಾತ್ನ ಭಾವನಗರ್ (Bhavnagar, Gujarat) ಎಂಬಲ್ಲಿ ಸೀರೆ ವಿಚಾರವೊಂದು ವರನಿಂದ ವಧು ಹತ್ಯೆಯಾಗಲು (murder) ಕಾರಣವಾಗಿದೆ.
ಹತ್ಯೆಯಾಗಿರುವ ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್. ಈಕೆಯನ್ನು ಕೊಂದ ಆರೋಪ ಎದುರಿಸುತ್ತಿರುವ ವರನ ಹೆಸರು ಸಾಜನ್ ಬರೇಯ. ಘಟನೆ ನಡೆದಿರುವುದು ಗುಜರಾತ್ನ ಭಾವನಗರ್ನ ಪ್ರಭುದಾಸ್ ಲೇಕ್ನಲ್ಲಿನ ತೇಕ್ರಿ ಚೌಕ್ ಎಂಬಲ್ಲಿ. ತಾಳಿ ಕಟ್ಟಲು ಒಂದು ಗಂಟೆ ಇರುವಾಗ ವರ ಮತ್ತು ವಧುವಿನ ನಡುವೆ ಸೀರೆ ಹಾಗೂ ಹಣದ ವಿಚಾರಕ್ಕೆ ಜಗಳವಾಗಿದೆ. ಆ ವೇಳೆ, ಸೋನಿ ರಾಥೋಡ್ಳನ್ನು ಸಾಜನ್ ಕೊಂದಿದ್ದಾನೆ ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ನೋಯ್ಡಾ: ಬಸ್ಸಿನೊಳಗೆ ಪ್ರೇಯಸಿಯ ಶಿರಚ್ಛೇದ ಮಾಡಿದ್ದ ಪ್ರಿಯಕರ ಹೇಳಿದ್ದೇನು?
ಸೋನಿ ಹಿಮ್ಮತ್ ರಾಥೋಡ್ ಮತ್ತು ಸಾಜನ್ ಬರೈಯ ಇಬ್ಬರೂ ಕೂಡ ಒಂದೂವರೆ ವರ್ಷಗಳಿಂದ ವಿಲಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದರು. ವಿವಾಹದ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು. ಸೀರೆ ಹಾಗೂ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪದ ಭರದಲ್ಲಿ ಆರೋಪಿಯು ಕಬ್ಬಿಣದ ರಾಡ್ನಿಂದ ಸೋನಿಗೆ ಬಡಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿದ್ದಾನೆ.
ಇಬ್ಬರೂ ವಾಸಿಸುತ್ತಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿಯೇ ಇಬ್ಬರ ವಿವಾಹ ಜರುಗುವುದಿತ್ತು. ಇಬ್ಬರೂ ಕೂಡ ತಮ್ಮ ಕುಟುಂಬಗಳ ವಿರೋಧ ಲೆಕ್ಕಿಸದೆ ಪ್ರೀತಿಸಿ, ಒಟ್ಟಿಗೆ ವಾಸವಿದ್ದರು. ಆರೋಪಿ ಸಾಜನ್ ತನ್ನ ಪ್ರಿಯತಮೆಯನ್ನು ಕೊಂದಿದ್ದು ಮಾತ್ರವಲ್ಲ, ನೆರೆಮನೆಯರೊಬ್ಬರ ಮೇಲೆಯೂ ಹಲ್ಲೆ ಮಾಡಿರುವ ಆರೋಪ ಇದೆ. ಎರಡೂ ಘಟನೆಗಳ ಸಂಬಂಧ ಆತನ ಮೇಲೆ ಪ್ರತ್ಯೇಕ ದೂರುಗಳು ದಾಖಲಾಗಿವೆ.
ಇದನ್ನೂ ಓದಿ: ಧೂಮ್ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್: ಬೆಳಗಾವಿಯಲ್ಲೊಬ್ಬ ಖತರ್ನಾಕ್ ಕಳ್ಳ
ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ