ಬೆಂಗಳೂರು: ಅಕ್ರಮ ಗಣಿಗಾರಿಕೆ (Illegal Mining) ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಎಸ್.ಬಿ.ಮಿನರಲ್ಸ್ (SB Minarals) ಒಡೆತನದ ಎರಡು ಗಣಿ ಕಂಪನಿಗೆ ಸೇರಿದ 5 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು (Enforcement Directorate) ಜಪ್ತಿ ಮಾಡಿದೆ. ಬಿ.ಪಿ.ಆನಂದ್ ಕುಮಾರ್, ಪಾಂಡುರಂಗ ಸಿಂಗ್, ಗೋಪಾಲ್ ಸಿಂಗ್ ಪಾಲುದಾರಿಕೆಯ ಎಸ್ಬಿ ಮಿನರಲ್ಸ್ ಒಡೆತನದ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ 5.21 ಕೋಟಿ ಮೌಲ್ಯದ ಒಟ್ಟು ಆರು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಎರಡು ಕಂಪನಿಗಳು ಕಬ್ಬಿಣದ ಅದಿರನ್ನು ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದವು. ಪ್ರಕರಣ ಸಂಬಂಧ ಎಸ್ಬಿ ಮಿನರಲ್ ಎಂಟರ್‌ಪ್ರೈಸಸ್ ಲಿಮಿಟೆಡ್, ಸರ್ಕಾರಿ ನೌಕರರು ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಲೋಕಾಯುಕ್ತ ಎಸ್ಐಟಿ ದೂರು ದಾಖಲಿಸಿತ್ತು. ದೂರಿನ ಅನ್ವಯ ಕಂಪನಿಗಳ ವಿರುದ್ಧ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.
ಇದನ್ನೂ ಓದಿ: Manish Sisodia: ಮನೀಶ್ ಸಿಸೋಡಿಯಾರ ಇಡಿ ಕಸ್ಟಡಿ 5 ದಿನಗಳವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ
ಅಲ್ಲದೆ, ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ಕೇಂದ್ರ ಸಶಕ್ತ ಸಮಿತಿ ರಚಿಸಿತ್ತು. ಅದರಂತೆ ನಡೆದ ತನಿಖೆ ವೇಳೆ ನಾಲ್ಕು ಗಣಿಗಳು ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ಸದ್ಯ ದಿನೇಶ್ ಕುಮಾರ್ ಪಾಲುದಾರಿಕೆಯ ಭಾರತ್ ಮಿನರಲ್ಸ್ ಮೈನ್ಸ್ ಹಾಗೂ ಶಾಂತಲಕ್ಷ್ಮಿ ಮತ್ತು ಜೆ.ಮಿಥಿಲೇಶ್ವರ್ ಗಣಿಗೆ ಸೇರಿದ ಒಟ್ಟು 5.21 ಕೋಟಿ ಮೌಲ್ಯದ 6 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Sun, 19 March 23