ಬೆಂಗಳೂರು: ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಆರೋಪದ ಮೇಲೆ ಇಂಡಿಯನ್ ಮನಿ ಫ್ರೀಡಂ ಆ್ಯಪ್ (IndianMoney Ffreedom App) ಸಿಇಒ ಸುಧೀರ್ ಸೇರಿದಂತೆ ಇಬ್ಬರನ್ನು ನಗರದ ಬನಶಂಕರಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಸುದೀರ್ ವಿರುದ್ಧ ಬಳಿಕ ದಕ್ಷಿಣ ವಿಭಾಗದ ಠಾಣೆಯೊಂದರಲ್ಲಿ ಹಾಗೂ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮತ್ತೆ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಅದರಂತೆ ವಿಚಾರಣೆಗೆ ಹಾಜರಾಗುವಂತೆ ಸುಧೀರ್ಗೆ ಬನಶಂಕರಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಸದ್ಯ ಸುಧೀರ್ ಮತ್ತು ರಘು ಎಂಬವರನ್ನು ಬಂಧಿಸಲಾಗಿದೆ. ಸದ್ಯ ಸುಧೀರ್ ಅವರನ್ನು ಕೋರ್ಟ್ಗೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಇದೇ ವೇಳೆ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ.
ಏನಿದು ಪ್ರಕರಣ?: ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಸುಧೀರ್ ಮತ್ತವರ ತಂಡದ ವಿರುದ್ಧ ನಯನಾ ಎಂಬ ಮಹಿಳೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಿರುವ ಸುಧೀರ್ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ, ಜಾಮೀನು ನೀಡುವ ವೇಳೆ, ವಿಚಾರಣೆಗಾಗಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: Bengaluru: RBI ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂ. ವಂಚನೆ: ಎಂಟು ಜನರ ಗ್ಯಾಂಗ್ ಅರೆಸ್ಟ್ ಮಾಡಿದ ಸಿಸಿಬಿ
ಅದರಂತೆ ಬಂಧನದ ಭೀತಿಯಿಂದ ಬಚಾವಾಗುತ್ತಿದ್ದಂತೆ ಸುಧೀರ್ ಮತ್ತು ತಂಡದ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾದವು. ಮಾಹಿತಿ ಪ್ರಕರಣ ಸುಧೀರ್ ವಿರುದ್ಧ ಒಟ್ಟು 21 ಮಂದಿ ದೂರು ನೀಡಿದ್ದಾರೆ. ಸುಧೀರ್ ಹಾಗೂ ಇತರರು, ವಂಚಿಸುವ ಉದ್ದೇಶದಿಂದ ಸಂಚು ರೂಪಿಸಿ ಆ್ಯಪ್ ಅಭಿವೃದ್ಧಿಪಡಿಸಿದ್ದರು. ಆ್ಯಪ್ ಪ್ರಚಾರಕ್ಕಾಗಿ ಅಮಾಯಕ ಯುವ ಯುವತಿಯರನ್ನು ಬಳಸಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Wed, 12 April 23