ಮಂಗಳೂರು: ವಂಚನೆ ಪ್ರಕರಣದಲ್ಲಿ ಐದು ವರ್ಷಗಳಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಮಹಿಳೆಯೊಬ್ಬರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು (Vitla Police Station) ಕೇರಳದ ಕಣ್ಣೂರಿನ ಪಯ್ಯನೂರಿನ ಪಣಚೇರಿಯ ನಿವಾಸಿ 42 ವರ್ಷದ ಸುಜಾತಾರನ್ನು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸುಜಾತಾ 5 ವರ್ಷಗಳ ಹಿಂದೆ ಕೋರ್ಟ್ಗೆ ಹಾಜರಾಗಲು ವಿಫಲರಾಗಿದ್ದರು. ಅವರಿಗೆ ಲುಕೌಟ್ ನೋಟೀಸ್ ನೀಡಲಾಗಿತ್ತು.
ವಿಟ್ಲ ಪೊಲೀಸ್ ಠಾಣೆಯಲ್ಲಿ ಸುಜಾತಾ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ವಿಚಾರಣೆ ಹಾಜರಾಗದೇ ಹೋದ್ದರಿಂದ ಲುಕೌಟ್ ನೋಟೀಸ್ ಜಾರಿ ಮಾಡಲಾಗಿತ್ತು. ಮೊನ್ನೆ ಬುಧವಾರದಂದು ಸುಜಾತಾ ಕೇರಳದ ಕೋಳಿಕೋಡ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲಲ್ಇ ಇರುವ ಬಗ್ಗೆ ವಲಸೆ ಅಧಿಕಾರಿಗಳಿಂದ ವಿಟ್ಲ ಠಾಣೆಗೆ ಮಾಹಿತಿ ಬಂದಿತು. ವಲಸೆ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ವಿಟ್ಲ ಪೊಲೀಸರ ತಂಡವೊಂದು ಕೋಳಿಕೋಡ್ಗೆ ಹೋಗಿ ಸುಜಾತಾರನ್ನು ಕರೆ ತಂದಿದೆ. ನಂತರ ನಿನ್ನೆ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಮಂಗಳೂರು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು 6 ಲಕ್ಷ ನಗದು, ಚಿನ್ನದ ಬಿಸ್ಕತ್ ದರೋಡೆ ಮಾಡಿದ ಗ್ಯಾಂಗ್
2013ರಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಈಕೆಯ ಮೇಲೆ ಪೊಲೀಸರು ವಂಚನೆ ಪ್ರಕರಣವೊಂದನ್ನು ದಾಖಲಿಸಲಾಗಿತ್ತು. ಆ ಸಂಬಂಧ ಕೋರ್ಟ್ ವಿಚಾರಣೆ ನಡೆದಿತ್ತು. ಕಳೆದ ಐದು ವರ್ಷಗಳಿಂದಲೂ ಈಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ವಿದೇಶವೊಂದಕ್ಕೆ ಈಕೆ ತಪ್ಪಿಸಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ. ಈಗ ತವರುನಾಡಿಗೆ ಕಾಲಿಟ್ಟು ಜೈಲುಪಾಲಾಗಿದ್ದಾರೆ.