ಭೋಪಾಲ್: ಮಧ್ಯಪ್ರದೇಶದ (Madhya Pradesh) ಮೊರೆನಾದಲ್ಲಿ (Morena) ಜಮೀನು ವಿವಾದ ಹಿಂಸಾಚಾರಕ್ಕೆ ತಿರುಗಿದ್ದು ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಆರು ಸದಸ್ಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮತ್ತಿಬ್ಬರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು ಹಲವಾರು ಜನರು ರೈಫಲ್‌ಗಳಿಂದ ಗುಂಪಿನ ಮೇಲೆ ಗುಂಡು ಹಾರಿಸುವುದನ್ನು ತೋರಿಸಿದೆ. ಇದಲ್ಲದೆ ಮರದ ಕೋಲುಗಳಿಂದ ಥಳಿಸುತ್ತಿರುವುದೂ ವಿಡಿಯೊದಲ್ಲಿದೆ. ಜಿಲ್ಲಾ ಕೇಂದ್ರದಿಂದ 50 ರಿಂದ 60 ಕಿಮೀ ದೂರದಲ್ಲಿರುವ ಲೇಪಾ ಗ್ರಾಮದಲ್ಲಿ ಧೀರ್ ಸಿಂಗ್ ತೋಮರ್ ಮತ್ತು ಗಜೇಂದ್ರ ಸಿಂಗ್ ತೋಮರ್ ಕುಟುಂಬಗಳ ನಡುವೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಜಗಳ ನಡೆದಿದೆ.
2013ರಲ್ಲಿ ತ್ಯಾಜ್ಯ ಸುರಿಯುವ ವಿಚಾರದಲ್ಲಿ ಎರಡು ಕುಟುಂಬಗಳು ಜಗಳವಾಡಿದ್ದವು. ಆಗ ಧೀರ್ ಸಿಂಗ್ ತೋಮರ್ ಕುಟುಂಬದ ಇಬ್ಬರು ಸಾವನ್ನಪ್ಪಿದ್ದರು. ಆನಂತರ ಗಜೇಂದ್ರ ಸಿಂಗ್ ತೋಮರ್ ಕುಟುಂಬವು ಗ್ರಾಮದಿಂದ ಪಲಾಯನ ಮಾಡಿತ್ತು.
ಎರಡು ಕುಟುಂಬಗಳು ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಂಡಿದ್ದು, ನಂತರದ ಕುಟುಂಬ ಇಂದು ಗ್ರಾಮಕ್ಕೆ ಮರಳಿದೆ. ಧೀರ್ ಸಿಂಗ್ ತೋಮರ್ ಅವರ ಕುಟುಂಬವು ಪೂರ್ವಯೋಜಿತ ದಾಳಿ ನಡೆಸಿ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕಲಬುರಗಿ: ಗುಂಡು ಹಾರಿಸಿಕೊಂಡು ಕಾನ್ಸ್ಟೇಬಲ್ ಆತ್ಮಹತ್ಯೆ
ಹತ್ಯೆಯಾದ ಆರು ಮಂದಿಯಲ್ಲಿ ಗಜೇಂದ್ರ ಸಿಂಗ್ ತೋಮರ್ ಮತ್ತು ಅವರ ಇಬ್ಬರು ಪುತ್ರರು ಸೇರಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಕೇಳಿದಾಗ, ಎರಡು ಗುಂಪುಗಳ ನಡುವೆ ಹಳೆಯ ದ್ವೇಷವಿದೆ ಎಂದು ಹೇಳಿದರು.
ಹಳೇ ದ್ವೇಷ ಕೊಲೆಯಲ್ಲಿ ಕೊನೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹತ್ಯೆಯಲ್ಲಿ ಭಾಗಿಯಾಗಿರುವ ಎಂಟು ಮಂದಿಯನ್ನು ಪೊಲೀಸರು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ