ಧರ್ಮಸ್ಥಳ, ಫೆಬ್ರವರಿ 19: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ (Dharmasthala) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್ ಕಳ್ಳತನ (Bike Stolen) ಮಾಡಲಾಗಿದೆ. ಫೆಬ್ರವರಿ 14 ರಂದು ಬುಧವಾರ ರಾತ್ರಿ ಮೂರು ಬೈಕ್‌ಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಧರ್ಮಸ್ಥಳ ದೇಗುಲಕ್ಕೆ (Dharmasthala Temple) ಯಾತ್ರಾರ್ಥಿಯಾಗ ಬಂದ ಕೊಪ್ಪಳದ ವ್ಯಕ್ತಿಯೊಬ್ಬರ ಬೈಕ್ ಸಹ ಸೇರಿದೆ. ಇದು ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಸಹ ಆತಂಕಕ್ಕೆ ಕಾರಣವಾಗಿದೆ. ಜತೆಗೆ, ಧರ್ಮಸ್ಥಳ ಸುತ್ತಮುತ್ತಲ ನಿವಾಸಿಗಳಲ್ಲಿ ಕೂಡ ಭೀತಿಗೆ ಕಾರಣವಾಗಿದೆ.
ಮೊದಲ ಘಟನೆಯಲ್ಲಿ ಧರ್ಮಸ್ಥಳ ಗ್ರಾಮದ ನಿವಾಸಿ ಬೇಬಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೇಬಿ ಅವರು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಕಾಣೆಯಾಗಿತ್ತು.
ಎರಡನೇ ಘಟನೆಯಲ್ಲಿ, ಸುಳ್ಯದ ನಿವಾಸಿ ಅಖಿಲೇಶ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಗಡಿಭಾಗದ ಕಲ್ಮಂಜ ಗ್ರಾಮದ ಮದ್ಮಾಳ್ ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಬಂಧಿಕರ ಮನೆ ಬಳಿ ಬೈಕ್ ನಿಲ್ಲಿಸಿದ್ದರು. ಆದರೆ, ಬೆಳಗ್ಗೆ ಪರಿಶೀಲಿಸಿದಾಗ ಕಾಣೆಯಾಗಿದೆ. ಬೈಕಿನ ಮೌಲ್ಯ 65,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಕೊಪ್ಪಳದಿಂದ ಧರ್ಮಸ್ಥಳಕ್ಕೆ ಆಗಮಿಸಿದ್ದ ಯಾತ್ರಾರ್ಥಿ ಬಸವರಾಜ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಿಯೋಸ್ಕ್ ಬಳಿ ಬೈಕ್ ನಿಲ್ಲಿಸಿ ಪಕ್ಕದಲ್ಲೇ ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಒಂದೇ ಕಳ್ಳರ ತಂಡವೇ ದಾಳಿ ಮಾಡಿರಬೇಕು ಮತ್ತು ಮೂರು ಬೈಕ್‌ಗಳನ್ನು ಪ್ರತ್ಯೇಕ ಘಟನೆಗಳಲ್ಲಿ ಕಳ್ಳತನ ಮಾಡಿರಬೇಕು ಎಂದು ಪೊಲೀಸರು ಶಂಕಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ: ಮಂಗಳೂರು: ಹರೇಕಳದಲ್ಲಿ ಹಾಕಿದ ಟಿಪ್ಪು ಸುಲ್ತಾನ್ ಕಟೌಟ್ ತೆರವಿಗೆ ಪೊಲೀಸರಿಂದ ನೋಟಿಸ್
ಬೆಂಗಳೂರಿನ ಹೋಟೇಲೊಂದರ ಮಾಲೀಕರು ಕ್ಯಾಷ್ ಕೌಂಟರ್ನಲ್ಲಿಟ್ಟದ್ದ 1 ಲಕ್ಷ ರೂಪಾಯಿ ನಗದು ಕಳವು ಪ್ರಕರಣದ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಹೋಟೆಲ್ ಕ್ಯಾಷಿಯರ್ ಆಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೇ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಕ್ಯಾಷಿಯರ್ ರವಿಕುಮಾರ್ ಎಂಬಾತನೇ ಕೃತ್ಯ ಎಸಗಿದ್ದಾನೆ. ಆರೋಪಿಯು ಕ್ಯಾಷ್ ಕೌಂಟರ್ನಲ್ಲಿ ಕುಳಿತುಕೊಂಡೇ ಹಣವನ್ನು ಪ್ಯಾಂಟ್ ಜೇಬಿಗಿಳಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ