ಬೆಂಗಳೂರು: ಚಿನ್ನಾಭರಣ ಎಗರಿಸಲು ಕಳ್ಳರಿಗೆ ಪೊಲೀಸರೇ ಸಹಾಯ ಮಾಡಿರುವ ಘಟನೆ ನಡೆದಿದೆ. ದಾಳಿ ಹೆಸರಿನಲ್ಲಿ ಕಳ್ಳರಿಗೆ ಸಾಥ್ ನೀಡ್ತಿದ್ದ ಕಾನ್ಸ್‌ಟೇಬಲ್ ಸೇರಿ 7 ಜನರನ್ನ ಅರೆಸ್ಟ್ ಮಾಡಲಾಗಿದೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.
ಪರವಾನಗಿ ಇಲ್ಲದೆ ವ್ಯಕ್ತಿ ಅಂಗಡಿ ನಡೆಸುತ್ತಿದ್ದ ಮಾಹಿತಿ ಸಿಕ್ಕುತ್ತಿದ್ದಂತೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದ ಆರೋಪಿಗಳು ದಾಳಿ ಹೆಸರಿನಲ್ಲಿ ಚಿನ್ನಾಭರಣ ಎಗರಿಸಲು ಪ್ಲ್ಯಾನ್ ಮಾಡಿಕೊಂಡಿದ್ರು. ಅಂಗಡಿ ಹಿಂದಿನ ಕಟ್ಟಡದ ಮಾಲೀಕ ಜೀತು ಎಂಬ ಖದೀಮರು ಈ ಪ್ಲ್ಯಾನ್ ರೂಪಿಸಿದ್ದ. ಇದಕ್ಕೆ ಆತ ಪೊಲೀಸರ ಜತೆಯೂ ಮಾತನಾಡಿದ್ದ. ಕಾಡುಗೋಡಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್‌ಗಳಾದ ಅಶೋಕ್ ಮತ್ತು ಚೌಡೇಗೌಡ ಜತೆ ಚರ್ಚೆ ನಡೆಸಿದ್ದ. ದಾಳಿಗೆ ಸಹಕರಿಸಿದರೆ ಪಾಲು ನೀಡುವುದಾಗಿ ಪೊಲೀಸ್ ಮತ್ತು ಜೀತುವಿನ ನಡುವೆ ಡೀಲಿಂಗ್ ನಡೆದಿತ್ತು. ಹೀಗಾಗಿ ಪೊಲೀಸರ ಜತೆ ಸೇರಿ ನಕಲಿ ದಾಳಿ ಮಾಡಿದ್ದರು.
ನವೆಂಬರ್ 11ರಂದು ಬೆಂಗಳೂರಿನ ನಗರ್ತಪೇಟೆಯಲ್ಲಿರುವ ಆಭರಣದ ಅಂಗಡಿ ಮೇಲೆ ಇಬ್ಬರು ಪೊಲೀಸರ ಜತೆ ಸೇರಿ ಒಟ್ಟು 8 ಜನ ದಾಳಿ ನಡೆಸಿದ್ದರು. ಈ ವೇಳೆ 8 ಜನ ದಾಳಿ ಮಾಡಿ ಚಿನ್ನಾಭರಣ ಎಗರಿಸಿ ಹಂಚಿಕೊಂಡಿದ್ದರು. 2 ದಿನಗಳ ಬಳಿಕ ಅಂಗಡಿ ಮಾಲೀಕ ಠಾಣೆಗೆ ದೂರು ನೀಡಿದ್ದ. ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಅಂಗಡಿಗೆ ತೆರಳಿ ಪರಿಶೀಲನೆ ಮಾಡಿದ್ದರು. ಬಳಿಕ ಸಿಸಿ ಕ್ಯಾಮರಾದಲ್ಲಿ ನಕಲಿ ದಾಳಿ ದುಷ್ಕೃತ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳ್ಳರಿಗೆ ಸಹಕಾರ ನೀಡಿದ್ದ ಪೊಲೀಸ್ ಚೌಡೇಗೌಡ ಎಸ್ಕೇಪ್ ಆಗಿದ್ದಾರೆ.