ನಾನೇನು ಮಾಡಿಲ್ಲ.. ನನಗೇನು ಗೊತ್ತಿಲ್ಲ.. ಮಾಡಿದ ತಪ್ಪಿಗೆ ಜೈಲು ಸೇರಿದ ಉನ್ನತ ಹುದ್ದೆ ಅಲಂಕರಿಸಿದ್ದ ಆ ಒಬ್ಬ ಅಧಿಕಾರಿಯ ಕಥೆ ಇದು.. ಅಧಿಕಾರದಲ್ಲಿದ್ದಾಗ FC ನಡೆಸಿದ್ದಾರೆ ಎನ್ನಲಾದ ಭ್ರಷ್ಟಾಚಾರ ಸಾಕ್ಷಿ ಸಮೇತ ಸಾಬೀತಾದಾಗ ಬಂಧಿಸಲಾಗಿತ್ತು.. ಈಗ ಸಾಹೇಬರು ಜೈಲಿನಲ್ಲಿದ್ದಾರೆ.. ಈ ವೇಳೆ ಆ ಅಧಿಕಾರಿ ಮಾಡಿದ ತಪ್ಪಿನ ಲೆಕ್ಕಾಚಾರದಲ್ಲಿ ಉಲ್ಟಾ ಹೊಡೆದಿದ್ದು, ನಾನೊಬ್ಬ ಈ ಪ್ರಕರಣದಲ್ಲಿ ಅಮಾಯಕ.. ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನಗೇನೂ ಗೊತ್ತಿಲ್ಲ.. ಮೇಲಾಗಿ ಎಲ್ಲಾ ಅವರೇ ಮಾಡಿರೋದು ಅನ್ನೊ ಮಾತು ಹೇಳುತಿದ್ದಾರೆ.. ಇಷ್ಟಕ್ಕೂ ಈ ಮಾತು ಹೇಳುತ್ತಿರುವ ಆ ವ್ಯಕ್ತಿ ಯಾರು ಅಂದ್ರೆ, ದೇಶದ ಉನ್ನತ ಹುದ್ದೆಗಳಲ್ಲಿ ಒಂದಾದ ಐಪಿಎಸ್ ಸೇವೆಯಲ್ಲಿದ್ದು ಪಿಎಸ್ ಐ ಅಕ್ರಮದಲ್ಲಿ ಜೈಲು ಸೇರಿದ ಎಡಿಜಿಪಿ ಅಮೃತ್ ಪೌಲ್ ಕಥೆ ಇದು.. (ವರದಿ : ಕಿರಣ್ HV )
ಇಡಿ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆ ಸಿಐಡಿಯಿಂದ ಚುರುಕಾಗಿ ನಡೆಯುತ್ತಿದೆ.. ಪ್ರಕರಣದಲ್ಲಿ ಪ್ರಾಥಮಿಕ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿದೆ.. ಆದ್ರೆ ಎಡಿಜಿಪಿ ಅಮೃತ್ ಪೌಲ್ ವಿರುದ್ಧದ ಚಾರ್ಜ್ ಶೀಟ್ ಗೆ ಸಿದ್ಧತೆ ಮಾಡಿಕೊಂಡಿರುವ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಶೇಖರ್, ಪ್ರಕರಣದ ಸಂಬಂಧ ಹಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ.. ಜೊತೆಗೆ ಪ್ರಕರಣದಲ್ಲಿ ಈವರೆಗೂ ಬಂಧಿಸಲ್ಪಟ್ಟ ಹಾಗೂ ಬಂಧಿಸುತ್ತಿರುವ ಆರೋಪಿಗಳಿಂದ ಅಮೃತ್ ಪೌಲ್ ಸಂಬಂಧ ಸಹ ವಿಚಾರಣೆ ನಡೆಸುತಿದ್ದು, ಈ ವೇಳೆ ಕಾಣದ ಹಲವು ಸಂಗತಿ ಬಯಲಾಗುತ್ತಿವೆ.. ಇವೆಲ್ಲವನ್ನೂ ತನಿಖಾಧಿಕಾರಿ ಸಂಗ್ರಹಿಸೊದ್ರಲ್ಲಿ ಬ್ಯುಸಿ ಇದ್ರೆ, ಜೈಲಿನಲ್ಲಿರೋ ಎಡಿಜಿಪಿ ಅಮೃತ್ ಪೌಲ್ ರವರ ಕಥೆ ಬೇರೆಯದ್ದೇ ಆಗಿದೆಯಂತೆ..
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಡಿಜಿಪಿ ಅಮೃತ್ ಪೌಲ್ ಒಳಗೊಳಗೆ ಭಾರಿ ಕಸರತ್ತು ನಡೆಸುತ್ತಿರೊ ಸಂಗತಿ ಹೊರ ಬಂದಿದೆ.. ಒಂದಲ್ಲ ಒಂದು ರೀತಿ ಹರಸಾಹಸ ಮಾಡುತ್ತಿರುವ ಅಮೃತ್ ಪೌಲ್, ಒಂದು ಕಡೆ ಬೇಲ್ ಗೆ ತಂತ್ರ ಹೆಣೆದರೆ ಮತ್ತೊಂದು ಕಡೆ ಆರೋಗ್ಯ ಸಮಸ್ಯೆಯ ನೆಪ ಒಡ್ಡಿದ್ದಾರೆ.. ಜೈಲಿನಲ್ಲಿರಲಾಗುತ್ತಿಲ್ಲ. ನನಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎನ್ನುತ್ತಿರುವ ಅವರು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಕೂಗಾಡುತಿದ್ದಾರೆಂತೆ.. ಕಂಡ ಕಂಡವರನ್ನು ಬೈಯೋದು, ಚಿಕಿತ್ಸೆ ಅಗತ್ಯ ಇದೆ ಅಂತ ಹೇಳೊದು ಮಾಡುತಿದ್ದಾರಂತೆ..
ಇನ್ನು ಇದಕ್ಕೂ ಮೀರಿ ತಾನು ಮಾನಸಿಕ ಅಸ್ವಸ್ಥನಾಗಿದ್ದೇನೆ ಎಂಬಂತೆ ನಾಟಕವಾಡಲು ಶುರು ಮಾಡಿದ್ದಾರೆ ಎನ್ನಲಾಗಿದೆ.. ಇನ್ನು ಇವರ ಈ ಹೈಡ್ರಾಮಾಕೆ ಥಂಢ ಹೊಡೆದ ಅಧಿಕಾರಿಗಳು ಜೈಲಿನಲ್ಲೇ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದಾರೆ.. ಆದ್ರೆ ಈ ನಡುವೆ ಜೈಲಿನಿಂದ ಹೊರ ಬರುವ ತವಕದಲ್ಲಿರುವ ಅಮೃತ್ ಪೌಲ್ ಎಲ್ಲಿಲ್ಲದ ಪರದಾಟ ನಡೆಸುತಿದ್ದಾರೆ.. ಅಷ್ಟೇ ಅಲ್ಲ, ಕೆಲವೊಮ್ಮ ಪಿತ್ತ ನೆತ್ತಿಗೇರಿಸಿಕೊಳ್ಳುವ ಅವರು, ನನಗೆ ಕೆಲವರಿಂದ ಈ ಪರಿಸ್ಥಿತಿ ಬಂದಿದೆ.. ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದವರು.. ಅವರೇ ಈ ಪ್ರಕರಣದ ಸೂತ್ರಧಾರರು ಎನ್ನುತ್ತಾರೆ.. ಆದ್ರೆ ಅವರ್ಯಾರು ಅಂತ ಸಿಐಡಿ ಪ್ರಶ್ನೆ ಮಾಡಿದರೇ ಅಮೃತ್ ಪೌಲ್ ಫುಲ್ ಸೈಲೆಂಟ್..!
ಮತ್ತೊಂದು ಕಡೆ ಪ್ರಕರಣದ ಬೆನ್ನುಬಿದ್ದ ಸಿಐಡಿ ಅಧಿಕಾರಿಗಳು ಮೊದಲಿಗೆ ಅಮೃತ್ ಪೌಲ್ ನೋಟಿಸ್ ನೀಡಿ ಹಲವು ಬಾರಿ ವಿಚಾರಣೆ ನಡೆಸಿದ್ದರು.. ನಂತರ ಪ್ರಕರಣದಲ್ಲಿ ಪಾತ್ರ ಸಾಬೀತಾಗುತಿದ್ದಂತೆ ಅವರನ್ನು ಬಂಧಿಸಿದ್ದರು.. ಬಂಧನ ಬಳಿಕವೂ ಅವರನ್ನು ಎರಡು ಬಾರಿ (ಒಮ್ಮೆ 12 ದಿನಗಳ ಕಾಲ, ಮತ್ತೊಮ್ಮೆ 8 ದಿನಗಳ ಕಾಲ) ವಶಕ್ಕೆ ಪಡೆದು ಪ್ರಕರಣದ ಹಲವು ಆಯಾಮದ ವಿಚಾರಣೆ ನಡೆಸಿದ್ದಾರೆ.. ಈಗಾಗಲೇ ಪ್ರಕರಣದಲ್ಲಿ ಅಮೃತ್ ಪೌಲ್ ಪಾತ್ರ ಸಾಕ್ಷಿ ಸಮೇತ ಸ್ಪಷ್ಟವಾಗಿದ್ದು, ಕಾಣದ ಕೈಯಾಗಿ ಬೇರೆಯವರಿಂದ ಕೆಲಸ ಮಾಡಿಸಿರೊ ಬಗ್ಗೆ ಸಹ ಸಾಕ್ಷಿ ಲಭ್ಯವಾಗಿದೆ.. ಮೇಲಾಗಿ ಪೊಲೀಸ್ ಇಲಾಖೆಯ ನೇಮಕಾತಿಯ ಉನ್ನತ ಹುದ್ದೆ ಅಲಂಕರಿಸಿದ್ದ ಸಾಹೇಬರಿಗೆ ಅಕ್ರಮದಿಂದ ಐದು ಕೋಟಿ ಸಂದಾಯವಾದ ಬಗ್ಗೆ ಸಹ ಸಿಐಡಿ ಬಳಿ ಸಾಕ್ಷಿ ಸಿಕ್ಕಿದೆ..
ಪಿಎಸ್ ಐ ನೇಮಕಾತಿಯ ಅಕ್ರಮದ ಕೈನಲ್ಲಿ ಹೆಬ್ಬೆಟ್ಟು ಅಮೃತ್ ಪೌಲ್ ಆದ್ರೆ ಉಳಿದ ನಾಲ್ಕು ಬೆರಳುಗಳು ಶಾಂತಕುಮಾರ್, ಶ್ರೀನಿವಾಸ್, ಶ್ರೀಧರ್ ಹಾಗೂ ಹರ್ಷ.. ಎಲ್ಲವೂ ಸರಿಯಾಗಿದೆ ಎಂಬಂತೆ ಅಮೃತ್ ಪೌಲ್ ಇದ್ರೆ, ಕಾಣದಂತೆ ಶಾಂತಕುಮಾರ್ ತನ್ನ ಇತರ ಸಹಚರರೊಂದಿಗೆ ನೇಮಕಾರಿ ಅಕ್ರಮದ ಕೂಟವಾಗಿ ಕೆಲಸ ಮಾಡಿದ್ದ.. ಇನ್ನು ಈ ವೇಳೆ ಸಂದಾಯವಾಗುತಿದ್ದ ಹಣದಲ್ಲಿ ಕೆಲವು ಶಾಂತಕುಮಾರ್ ಮೂಲಕ ಸಂದಾಯವಾಗಿದ್ರೆ, ಮತ್ತೂ ಕೆಲವು ಅಭ್ಯರ್ಥಿಗಳು ನೇರವಾಗಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಗೆ ನೀಡಿರೊದು ಸಹ ಪತ್ತೆಯಾಗಿದೆ.. ಸ್ಟ್ರಾಂಗ್ ರೂಮ್ ವಿಚಾರದಲ್ಲಿ ಪಾಲನೆಯಾಗಬೇಕಾಗಿದ್ದ ನಿಯಮ ಗಾಳಿಗೆ ತೂರಿ ಸಂಪೂರ್ಣ ಉಸ್ತುವಾರಿ ಶಾಂತಕುಮಾರ್ ಕೈಗಿಟ್ಟ ಅಮೃತ್ ಪೌಲ್ ಸುಧೀರ್ಘ ರಜೆಯಲ್ಲಿ ತೆರಳಿದ್ದಾರೆ.. ಇನ್ನು ಯಾರು ಇಲ್ಲದ ವೇಳೆ ಪ್ರವೇಶವಿಲ್ಲದ ಸ್ಟ್ರಾಂಗ್ ರೂಂನ್ನೇ ಅಕ್ರಮದ ಅಡ್ಡೆ ಮಾಡಿಕೊಂಡ ಆರೋಪಿಗಳು ಸಾಹೇಬರ ರಜೆ ವೇಳೆ ಒಎಂಆರ್ ತಿದ್ದುವ ಕೆಲಸ ಮಾಡಿರೊದು ಸಹ ಉಲ್ಲೇಖವಾಗಿದೆ..
ಪಿಐಎಸ್ ಆಗೊಕೆ ಹಣ ಕೊಡಲು ಬಂದ ಪ್ರತಿಯೊಬ್ಬ ಅಭ್ಯರ್ಥಿಗೂ ವಿವಿಧ ಮಾದರಿಯಲ್ಲಿ ರೇಟ್ ಫಿಕ್ಸ್ ಆಗಿದ್ದು, ಒಬ್ಬೊಬ್ಬರಿಂದಲೂ 30 ರಿಂದ 60 ಲಕ್ಷದಷ್ಟು ಹಣ ಪಡೆದಿರೊದು ಸಾಕ್ಷಿ ಸಮೇತ ಪತ್ತೆಯಾಗಿದೆ.. ಇನ್ನು ಈ ಲೆಕ್ಕಾಚಾರದಿಂದ ದೂರ ಉಳಿದ ಎಡಿಜಿಪಿ ಅಮೃತ್ ಪೌಲ್, ಶಾಂತಕುಮಾರ್ ಅಂಡ್ ಟೀಮ್ ಗೆ ನೀವೇನಾದರೂ ಮಾಡಿಕೊಳ್ಳಿ, ನನಗೆ ಐದು ಕೋಟಿ ಕೊಡಿ ಅನ್ನೊ ಮಾತು ಹೇಳಿದ ಬಗ್ಗೆ ಸಹ ಸಿಐಡಿ ಬಳಿ ಸಾಕ್ಷಿ ಲಭ್ಯವಾಗಿದೆ.. ಇನ್ನು ಎಡಿಜಿಪಿ ಸಾಹೇಬರು ಹಣ ಪಡೆಯಲು ತಮ್ಮ ನಿವಾಸದ ಬಳಿಯ ದೇವರ ಸನ್ನಿದಿಯನ್ನೇ ಆರಿಸಿಕೊಂಡಿದ್ದು, ಸಹಕಾರನಗರದ ಮುನೇಶ್ವರ ದೇವಸ್ಥಾನದ ಬಳಿ ಅಭ್ಯರ್ಥಿಗಳಿಂದ ಪಡೆದು ತಂದ 1.35 ಕೋಟಿ ಹಣವನ್ನು ಶಾಂತಕುಮಾರ್ ನಿಂದ ಪಡೆದ ಬಗ್ಗೆ ಸಾಕ್ಷಿ ಸಹ ಲಭ್ಯವಾಗಿದೆ.. ಒಂದು ಕಡೆ ಇಷ್ಟೆಲ್ಲಾ ಸಾಕ್ಷಿ ಸಂಗ್ರಹಿಸಿ ಪ್ರಕರಣದಲ್ಲಿನ ಪಾತ್ರ ಸಿಐಡಿ ಬಯಲು ಮಾಡಿದ್ರೆ, ಜೈಲಿನಲ್ಲಿರೋ ಸಾಹೇಬರು ನಾನೇನು ಮಾಡಿಲ್ಲ.. ನನಗೇನು ಗೊತ್ತಿಲ್ಲ.. ಎಲ್ಲವನ್ನೂ ಮಾಡಿದರವೂ ಇವರೇ ಅಂತ ಉಳಿದ ಆರೋಪಿಗಳ ಮೇಲೆ ಬೊಟ್ಟು ಮಾಡಿದ್ದಾರೆ..