ಜೈಪುರ: ರಾಜಸ್ಥಾನದ ಕೋಟಾದಲ್ಲಿ 18 ವರ್ಷದ ಕೋಚಿಂಗ್ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೊಠಡಿಯ ಸ್ನಾನಗೃಹದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾನೆ. ಹಾಸ್ಟೆಲ್ನ ಉಸ್ತುವಾರಿಯಿಂದ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ. ಆದರೆ, ಆ ಬಾಲಕನ ಪೋಷಕರ ಕೋರಿಕೆಯ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ಕೂಡ ನಿರಾಕರಿಸಿದ್ದಾರೆ. ಅವರ ಇಚ್ಛೆಯ ಮೇರೆಗೆ ಮೃತದೇಹವನ್ನು ಅಂತಿಮ ವಿಧಿವಿಧಾನಕ್ಕಾಗಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿ ಕುಶಾಗ್ರಾ ರಸ್ತೋಗಿ ಎಂದು ಗುರುತಿಸಲಾಗಿದ್ದು, ಸೋಮವಾರದಂದು ಆತನ ಶವ ಪತ್ತೆಯಾಗಿರುವ ಜವಾಹರ್ ನಗರ ಪ್ರದೇಶದ ಹಾಸ್ಟೆಲ್ನಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷದ ಏಪ್ರಿಲ್ನಲ್ಲಿ ಇಂಜಿನಿಯರಿಂಗ್ ಕೋರ್ಸ್ಗೆ ಪ್ರವೇಶಕ್ಕಾಗಿ ಕೋಟಾದ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಕುಶಾಗ್ರಾ ರಸ್ತೋಗಿ ದಾಖಲಾಗಿದ್ದರು ಮತ್ತು ಹಾಸ್ಟೆಲ್ನಲ್ಲಿ ವಾಸಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.
ಇದನ್ನೂ ಓದಿ: Shocking News: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಸ್ತನ, ಗುಪ್ತಾಂಗ ಕತ್ತರಿಸಿ ಬರ್ಬರ ಹತ್ಯೆ
ಸೋಮವಾರ ಬೆಳಿಗ್ಗೆ ಆತ ಎಂದಿನಂತೆ ಎದ್ದ ನಂತರ ಫ್ರೆಶ್ ಆಗಲು ಸ್ನಾನಗೃಹಕ್ಕೆ ಹೋಗಿದ್ದ. ಅಲ್ಲೇ ಆತನ ಶವ ಪತ್ತೆಯಾಗಿದೆ ಎಂದು ಡಿಎಸ್ಪಿ ರಾಜೇಶ್ ಟೇಲರ್ ತಿಳಿಸಿದ್ದಾರೆ. 15-20 ನಿಮಿಷಗಳ ನಂತರವೂ ಹುಡುಗ ಹೊರಗೆ ಬರದಿದ್ದಾಗ, ಅಲ್ಲಿದ್ದವರು ಸ್ನಾನಗೃಹದ ಬಾಗಿಲನ್ನು ಬಡಿದರು. ಆದರೂ ಲಾಕ್ ತೆರೆಯದ ಕಾರಣ ಬಾಗಿಲನ್ನು ಒಡೆಯಲಾಗಿತ್ತು. ಆಗ ಆತ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರಿಗೆ ಸಿಪಿಆರ್ ನೀಡಿದರು ಆದರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ. ಬಳಿಕ ಮೃತನ ಪೋಷಕರು ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿದರು, ಆದ್ದರಿಂದ ಈ ವಿಷಯದಲ್ಲಿ ಯಾವುದೇ ಪ್ರಕರಣವನ್ನು ದಾಖಲಿಸದೆ ದೇಹವನ್ನು ಅವರಿಗೆ ಹಸ್ತಾಂತರಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ