ಬೆಂಗಳೂರು: ಜಮೀನುದಾರರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರೆವಿನ್ಯೂಇನ್ಸ್ ಪೆಕ್ಟರ್ ಹಾಗೂ ಚಿಕ್ಕಜಾಲ ಹೆಡ್ ಕಾನ್ಸ್ಟೇಬಲ್ ರಾಜು ಎಂಬುವವರನ್ನ ಎಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ನಗರದ ಚಿಕ್ಕಜಾಲದಲ್ಲಿ ಈ ಪ್ರಕರಣ ನಡೆದಿದ್ದು, ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ವ್ಯಾಜ್ಯ ಪ್ರಕರಣದಲ್ಲಿ ಸಿಲುಕಿದ್ದರು. ಇದನ್ನು ಇತ್ಯರ್ಥಪಡಿಸಲು RI ಪುಟ್ಟಹನುಮಯ್ಯ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೊತೆಗೆ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ರಕ್ಷಣೆ ನೀಡಲು ಹೆಡ್ ಕಾನ್ಸ್ಟೇಬಲ್ ರಾಜು 6 ಲಕ್ಷ ಹಣದ ಬೇಡಿಕೆ ಇಟ್ಟಿದ್ದರು.
ಆದರೆ ಇದಕ್ಕೆ ಬಗ್ಗದ ಸದರಿ ಜಮೀನು ಮಾಲೀಕ, ಎಸಿಬಿಗೆ ದೂರು ನೀಡಿದ್ದರು. ದೂರುದಾರ ಕೊಟ್ಟ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ದಾಳಿ ವೇಳೆ ಲಂಚ ಕೇಳಿದ್ದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡಿದ್ದಾರೆ. ಈ ಮಧ್ಯೆ, ಹೆಡ್ ಕಾನ್ಸ್ಟೇಬಲ್ ರಾಜುಗೆ ಹಣ ಪಡೆಯುವಂತೆ ಇನ್ಸ್ಪೆಕ್ಟರ್ ಸೂಚಿಸಿದ್ದರು ಎಂದು ಚಿಕ್ಕಜಾಲ ಇನ್ಸ್ಪೆಕ್ಟರ್ ಯಶವಂತ್ ವಿರುದ್ಧವೂ ಆರೋಪ ಕೇಳಿಬಂದಿದೆ.
ಈ ಮಧ್ಯೆ, ಹಣ ಪಡೆಯುವಂತೆ ಸೂಚಿಸಿದ್ದ ಆರೋಪ ಹೊತ್ತಿರುವ ಇನ್ಸ್ಪೆಕ್ಟರ್ ಯಶವಂತ್ ಠಾಣೆಯಿಂದ ಪರಾರಿಯಾಗಿದ್ದಾರೆ. ಎಸಿಬಿ ದಾಳಿ ವೇಳೆ ಎಸ್ಕೇಪ್ ಆಗಿರುವ ಇನ್ಸ್ಪೆಕ್ಟರ್ ಯಶವಂತ್ಗಾಗಿ ಹುಡುಕಾಟ ಶುರುವಾಗಿದೆ. ಹೆಡ್ ಕಾನ್ಸ್ಟೇಬಲ್ ರಾಜು ಹಾಗೂ ಆರ್ ಐ ಹನುಮಯ್ಯರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
Published On - 12:53 pm, Fri, 8 January 21