ಶಿವಮೊಗ್ಗದಲ್ಲಿ ಬಾಲ ಬಿಚ್ಚಿದ ರೌಡಿಗಳು, ಪೊಲೀಸರ ಮೇಲೆ ರೌಡಿಯಿಸಂ, ಟ್ರಾಫಿಕ್ ಪೊಲೀಸರಿಗೇ ಕೊಲೆ ಬೆದರಿಕೆ – ವಿಡಿಯೋ ವೈರಲ್

| Updated By: ಸಾಧು ಶ್ರೀನಾಥ್​

Updated on: Feb 02, 2024 | 10:32 AM

shivamogga traffic police : ಸಾರ್ವಜನಿಕವಾಗಿ ರೌಡಿ ಪಟಾಲಂಗಳು ಶಿವಮೊಗ್ಗದಲ್ಲಿ ಮತ್ತೆ ಗರಿಬಿಚ್ಚಿದ್ದು, ಹಾಡಹಗಲೇ, ಅದರಲ್ಲೂ ಪೊಲೀಸ್ ಸಿಬ್ಭಂದಿ ಮೇಲೆ ಮರ್ಡರ್ ಬೆದರಿಕೆ, ಅವಾಚ್ಯವಾಗಿ ಬೈದು ಧಮ್ಕಿ ಹಾಕಿರುವ ಘಟನೆ ಸದ್ಯ ಮಲೆನಾಡಿನಲ್ಲಿ ಸಂಚಲನ ಮೂಡಿಸಿದೆ. ಮಲೆನಾಡಿನಲ್ಲಿ ರೌಡಿ ಮತ್ತು ಪುಡಿ ರೌಡಿಗಳಿಗೆ ಖಾಕಿ ತನ್ನ ಖದರ್ ತೋರಿಸಬೇಕಿದೆ.

ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರಿಗೇ ಅವಾಜ್ ಹಾಕಲಾಗಿದೆ. ನಟೋರಿಯಸ್ ಹಿನ್ನೆಲೆಯುಳ್ಳ ಪುಡಾರಿಗಳು, ಟ್ರಾಫಿಕ್ ಪೊಲೀಸರು ಹಿಡಿಯುತ್ತಾರೆ ಅಂತಾ ತಾವೇ ಬೈಕಿನಲ್ಲಿ ಬಿದ್ದು, ತಾವೇ ವಿಡಿಯೋ ಮಾಡಿ ತಗಲಾಕಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಸಿಬ್ಭಂಧಿಗೆ ಪ್ರಾಣ ಬೆದರಿಕೆ ಒಡ್ಡಿರುವ ರೌಡಿ ಶೀಟರ್ ಗಳು, ತಮ್ಮ ಹುಡುಗರನ್ನು ಕರೆಸಿ, ಹಲ್ಲೆ ಮಾಡಲು ಕೂಡ ಮುಂದಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಹೀಗೆ ಪೊಲೀಸರಿಗೆ ಆವಾಜ್ ಹಾಕಿರುವ ನಟೋರಿಯಸ್ ಗಳಿಗೆ ಪೊಲೀಸರು ಹೆಡೆಮುರಿ ಕಟ್ಟಿದ್ದು, ಇದೀಗ ಅಂದರ್ ಆಗಿದ್ದಾರೆ.. ಪೊಲೀಸರ ಮೇಲೆ ರೌಡಿಸಂ ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗದಲ್ಲಿ ರೌಡಿ ಎಲಿಮೆಂಟ್ ಗಳ ಚಟುವಟಿಕೆ ಇಂದು ನಿನ್ನೆಯದಲ್ಲ. ಆದ್ರೆ, ಕಳೆದ ಹಲವಾರು ವರ್ಷಗಳಿಂದ ಕೊಂಚ ತಣ್ಣಗಾಗಿದ್ದ ರೌಡಿ ಶೀಟರ್ ಗಳು ಮತ್ತೆ ಬಾಲ ಬಿಚ್ಚತೊಡಗಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ಮೇಲೆಯೇ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಅಂದಹಾಗೆ, ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿ, ರೌಡಿ ಶೀಟರ್ ಗಳು, ಬೈಕ್ ನಲ್ಲಿ ಬಂದು, ಎಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುತ್ತೇವೆಯೋ ಎಂಬ ಭಯದಲ್ಲಿ/ ಭರದಲ್ಲಿ ಬೈಕ್ ನಿಂದ ಬಿದ್ದು, ಡ್ರಾಮ ಮಾಡಿ ತಗಲಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿ, ಟ್ರಾಫಿಕ್ ಪೊಲೀಸ್ ಸಿಬ್ಭಂದಿಗೆ ಆವಾಜ್ ಹಾಕಿ ನಿನಗೆ ಮರ್ಡರ್ ಮಾಡುತ್ತೇವೆಂದು ಕೂಡ ಪ್ರಾಣ ಬೆದರಿಕೆ ಒಡ್ಡಿದ್ದಾರೆ.

ಟ್ರಾಫಿಕ್ ಪೊಲೀಸ್ ಪ್ರಭು ಎಂಬುವವರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಕೂಡ ಮಾಡಿದ್ದು, ಸ್ವತಃ ಅವರೇ ವಿಡಿಯೋ ಮಾಡಿ ವೈರಲ್ ಮಾಡಿ ಇದೀಗ ಅಂದರ್ ಆಗಿದ್ದಾರೆ. ಅಂದಹಾಗೆ, ಕಳೆದ ಜ. 30 ರಂದು ರಸ್ತೆಯಲ್ಲಿ ಗಸ್ತು ನಿಂತಿದ್ದ ಟ್ರಾಫಿಕ್ ಪೊಲೀಸರನ್ನ ನೋಡಿ ಬೈಕ್ ತಿರುಗಿಸುವ ವೇಳೆ ಬಿದ್ದ ರೌಡಿ ಶೀಟರ್, ಯಾಸೀನ್ ಖುರೇಶಿ ಎಂಬಾತ, ಬಿದ್ದು, ಬಳಿಕ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ, ಪೊಲೀಸರೇ ಹೊಡೆದು ಸಾಯಿಸಿದರೆಂದು, ಕೂಗಾಡಿದ್ದಾರೆ. ಅಲ್ಲದೇ, ಈ ವೇಳೆ ಸ್ಥಳಕ್ಕೆ ಬಂದ ಮತ್ತೊಬ್ಬ ರೌಡಿ ಶೀಟರ್ ವಾಸೀಂ ಎಂಬಾತ ಕೂಡ ಕೂಗಾಡಿದ್ದು, ನೀನೆ ಸಾಯಿಸಿದ್ದು ಎಂದು ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾನೆ. ಸಮವಸ್ತ್ರದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮರ್ಡರ್ ಮಾಡುವ ಜೀವ ಬೆದರಿಕೆ ಹಾಕಿದ ರೌಡಿ ಶೀಟರ್ ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಇದೀಗ ಅಂದರ್ ಆಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿ ಶೀಟರ್ ಗಳಾದ ಕಡೆಕಲ್ ಹಬೀದ್ ಹಾಗೂ ವಾಸೀಂ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರ ಮೇಲೆ 504, 506, 189, 342, 353, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ಪೊಲೀಸ್ ಕಾನ್ಸಟೇಬಲ್ ಗಳು ಕರ್ತವ್ಯದಲ್ಲಿದ್ದಾಗ ರೌಡಿಸಂ ತೋರಿಸಿದ್ದರು. ಇಂತಹ ವರ್ತನೆ ತೋರಿರುವ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿದ್ದ ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ. ಸದ್ಯ ಅವರಿಬ್ಬರ ಬಲೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮಲೆನಾಡಿನಲ್ಲಿ ಮೊದಲೇ ರೌಡಿಗಳ ತವರು ಎನ್ನುವ ಕುಖ್ಯಾತಿ ಪಡೆದಿದೆ. ದಶಕಗಳಿಂದ ಮಲೆನಾಡಿಗೆ ಇದೊಂದು ಕೆಟ್ಟ ಹೆಸರು ಅಂಟಿಕೊಂಡಿದೆ. ಅದರಂತೆ ಮಲೆನಾಡಿನಲ್ಲಿ ರೌಡಿಸಂ ಚಟುವಟಿಕೆಗಳು ಮತ್ತು ಅವರ ಅಟ್ಟಹಾಸಗಳು ಮುಂದುವರೆದಿವೆ. ಸದ್ಯ ಎಸ್ಪಿ ಮಿಥುನ್ ಕುಮಾರ್ ಅವರು ಈ ಎಲ್ಲ ರೌಡಿಸಂ ಗಳಿಗೆ ಕಡಿವಾಣ ಹಾಕಬೇಕಿದೆ. ಪೊಲೀಸರ ಮೇಲೆ ಅವಾಜ್ ಹಾಕಿರುವ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮಲೆನಾಡಿನಲ್ಲಿ ರೌಡಿ ಮತ್ತು ಪುಡಿರೌಡಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದೆ. ಪೊಲೀಸರಿಗೆ ಅವಾಜ್ ಹಾಕಿದ ರೌಡಿಗಳು ಇನ್ನೂ ಜನ ಸಾಮಾನ್ಯರನ್ನು ಬಿಡುವುದಿಲ್ಲ. ಕರ್ತವ್ಯದಲ್ಲಿರುವ ಪೊಲೀಸರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಈ ಪ್ರಕರಣವು ಒಂದು ದೊಡ್ಡ ಚಾಲೆಂಜ್ ಆಗಿದೆ.

Published On - 10:29 am, Fri, 2 February 24