ಬೆಂಗಳೂರು : ವಿದ್ಯಾರ್ಥಿಗಳು, ಶಿಕ್ಷಣ ತಜ್ಞರಿಗಾಗಿ ಸ್ಟಡಿ ಆಸ್ಟ್ರೇಲಿಯಾ (Australia) ಪ್ರದರ್ಶನವೊಂದು ಬೆಂಗಳೂರಿನಲ್ಲಿ ನಡೆಯಿತು. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆ ಆಯೋಗವು, ಭಾರತದ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಪ್ರದರ್ಶನವು 2023ರ ಫೆಬ್ರುವರಿ 17 ರಂದು ಬೆಂಗಳೂರಿನ ರೇವಾ (REVA) ವಿಶ್ವವಿದ್ಯಾಲಯದೊಂದಿಗೆ ಪ್ರಾರಂಭವಾಯಿತು. . ಮುಂದಿನ ಪ್ರದರ್ಶನವು ಕೊಯಮತ್ತೂರು (ಫೆಬ್ರವರಿ 20) ಮತ್ತು ವಿಶಾಖಪಟ್ಟಣದಲ್ಲಿ (ಫೆಬ್ರುವರಿ 22) ರಂದು ನಡೆಯಲಿದೆ.
ಡಿಪ್ಲೊಮಾ ಅಥವಾ ವ್ಯಾಪಾರ ಅರ್ಹತೆಯೊಂದಿಗೆ ಪದವಿ ಪಡೆಯುವ ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾದಲ್ಲಿ 18 ತಿಂಗಳವರೆಗೆ ಉಳಿಯಲು ಮತ್ತು ಕೆಲಸ ಮಾಡುವುದಕ್ಕೆ ಅವಕಾಶ ಒದಗಿಸುತ್ತದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕ್ರಮವಾಗಿ 2 ಹಾಗೂ 3 ವರ್ಷಗಳವರೆಗೆ ಆಸ್ಟ್ರೇಲಿಯಾದಲ್ಲಿ ಉಳಿಯಲು ಅವಕಾಶ ಇದೆ. ಇದಕ್ಕಾಗಿಯೇ ಭಾರತದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಒಟ್ಟು 1,000 ವೀಸಾಗಳನ್ನು ಕಾಯ್ದಿರಿಸಲಾಗಿರುತ್ತದೆ. ವೀಸಾ ಪಡೆದವರಿಗೆ ಆಸ್ಟ್ರೇಲಿಯಾದಲ್ಲಿ ನಾಲ್ಕು ತಿಂಗಳವರೆಗೆ ಅಧ್ಯಯನ ಮಾಡಲು ಅಥವಾ ತರಬೇತಿ ಪಡೆಯಲು ಅವಕಾಶ ಇರಲಿದೆ.
ಡಾಕ್ಟರೇಟ್ ಪದವಿ ಪಡೆಯುವ ಭಾರತದ ವಿದ್ಯಾರ್ಥಿಗಳಿಗೆ ಅಧ್ಯಯನ ಪೂರ್ಣಗೊಂಡ ನಂತರ ನಾಲ್ಕು ವರ್ಷಗಳ ಕೆಲಸದ ಹಕ್ಕು ನೀಡಲಾಗುವುದು. ಎಸ್‌ಟಿಇಎಂ (STEM) ಅಥವಾ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಭಾರತದ ವಿದ್ಯಾರ್ಥಿಗಳಿಗೆ ವಿಶೇಷ ಭತ್ಯೆ ನೀಡುವ ಸೌಲಭ್ಯವೂ ಇರಲಿದೆ. ಇಂತಹ ವಿದ್ಯಾರ್ಥಿಗಳಿಗೆ ಮೂರು ವರ್ಷಗಳವರೆಗೆ ಆಸ್ಟ್ರೇಲಿಯಾದಲ್ಲಿ ಉಳಿಯಲು ಮತ್ತು ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ.
ಭಾರತದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹೊಸ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆಯ ಬೆಂಗಳೂರು ಆಯುಕ್ತೆ ಡೆನಿಸ್ ಈಟನ್ ಅವರು ವಿವರಗಳನ್ನು ನೀಡಿದ್ದು, ಇದಕ್ಕೆ ಮುಖ್ಯ ಕಾರಣ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಇಸಿಟಿಎ) ಎಂದಿದ್ದಾರೆ.
ಆಸ್ಟ್ರೇಲಿಯ ತಮ್ಮ ಕ್ಯಾಂಪಸ್ ಶಾಖೆಗಳನ್ನು ಭಾರತದ ವಿಶ್ವ ವಿದ್ಯಾಲಯಗಳಲ್ಲಿ ಸ್ಥಾಪಿಸುವುದಕ್ಕೆ ಭಾರತದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಇತ್ತೀಚೆಗೆ ವಿದೇಶಿ ವಿಶ್ವವಿದ್ಯಾಲಯಗಳಿಗೆ ಕರಡು ಮಾರ್ಗಸೂಚಿಗಳನ್ನು ಪ್ರಕಟಿಸಿತು. ಆಸ್ಟ್ರೇಲಿಯಾದ ಶಿಕ್ಷಣವನ್ನು ಭಾರತದ ವಿದ್ಯಾರ್ಥಿಗಳ ಕೈಗೆಟಕಲು ಇಟ್ಟ ಮತ್ತೊಂದು ಹೆಜ್ಜೆ ಇದಾಗಿದೆ.
‘ಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನವು, ಆಸ್ಟ್ರೇಲಿಯಾ ಮತ್ತು ಭಾರತದ ನಡುವಣ ಗಟ್ಟಿ ಸಂಬಂಧ ತೋರಿಸುವ ಮತ್ತೊಂದು ಹೆಜ್ಜೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಭಾರತದ ವಿದ್ಯಾರ್ಥಿಗಳ ಜೊತೆ ನಿಕಟವಾಗಿ ಕೆಲಸ ಮಾಡುತ್ತೇವೆ. ಸ್ಟಡಿ ಆಸ್ಟ್ರೇಲಿಯಾ ರೋಡ್‌ಷೋ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಲಹೆಗಾರರು ಮತ್ತು ಸಂಸ್ಥೆಗಳ ಮುಖ್ಯಸ್ಥರಿಗೆ ನವೀಕರಿಸಿದ, ವಿಶ್ವಾಸಾರ್ಹ ಮತ್ತು ಹೆಚ್ಚು ಪ್ರಸ್ತುತವಾಗಿರುವ ಮಾಹಿತಿ ಒದಗಿಸುತ್ತದೆ’ ಎಂದು ಈಟನ್ ಹೇಳಿದರು.
ಇದನ್ನೂ ಓದಿ: ನೆಟ್ ಎಕ್ಸಾಮ್ ಪ್ರವೇಶ ಪತ್ರ ಬಿಡುಗಡೆ, ಡೌನ್‌ಲೋಡ್ ಮಾಡುವ ವಿಧಾನ ಹೀಗಿ
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ