
ಭಾರತದಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸುವ ಮತ್ತು ಸ್ವಂತ ವ್ಯವಹಾರಗಳನ್ನು ಹೊಂದುವ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಯುವಕರು ಇನ್ನು ಮುಂದೆ ಕೇವಲ ಸರ್ಕಾರಿ ಉದ್ಯೋಗಗಳು ಅಥವಾ ದೊಡ್ಡ ಕಂಪನಿಗಳ ಕೆಲಸಕ್ಕೆ ಸೀಮಿತವಾಗಿರಲು ಬಯಸುತ್ತಿಲ್ಲ; ಬದಲಾಗಿ ತಮ್ಮ ಸ್ವಂತ ಉದ್ಯಮಗಳ ಮೂಲಕ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಐಐಟಿ ಮಂಡಿಯ GUESSS ಇಂಡಿಯಾ 2025 ವರದಿಯ ಪ್ರಕಾರ, ದೇಶದಲ್ಲಿ ಶೇ. 22ರಷ್ಟು ಕಾಲೇಜು ವಿದ್ಯಾರ್ಥಿಗಳು ಈಗಾಗಲೇ ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಿದ್ದರೆ, ಶೇ.43ರಷ್ಟು ಜನರು ಭವಿಷ್ಯದಲ್ಲಿ ಉದ್ಯಮಿಗಳಾಗುವ ಕನಸು ಹೊಂದಿದ್ದಾರೆ.
ಐಐಟಿ ಮತ್ತು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಾದ GUESSS ಇಂಡಿಯಾ 2025 ಸಮೀಕ್ಷೆಯಲ್ಲಿ 34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 1,200ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ 25,783 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವರದಿಯ ಪ್ರಕಾರ, ಶೇ. 22ರಷ್ಟು ವಿದ್ಯಾರ್ಥಿಗಳು ಈಗಾಗಲೇ ವ್ಯವಹಾರಗಳನ್ನು ನಡೆಸುತ್ತಿದ್ದು, ಇದು ಜಾಗತಿಕ ಸರಾಸರಿಯಾದ ಶೇ. 23 ಕ್ಕೆ ಅತ್ಯಂತ ಹತ್ತಿರದಲ್ಲಿದೆ. ಇದರಲ್ಲಿ ಶೇ. 35.5 ರಷ್ಟು ವಿದ್ಯಾರ್ಥಿ ಉದ್ಯಮಿಗಳು ನಿರಂತರ ಮಾರಾಟದ ಮೂಲಕ ಆದಾಯ ಗಳಿಸುತ್ತಿದ್ದಾರೆ. ಅಂದರೆ, ಇವು ಕೇವಲ ಕಾಗದದ ಮೇಲಿರುವ ಕಲ್ಪನೆಗಳಲ್ಲ, ನಿಜವಾದ ವ್ಯವಹಾರಗಳಾಗಿ ಬದಲಾಗಿವೆ.
ವರದಿಯ ಪ್ರಕಾರ, ಅಧ್ಯಯನ ಮುಗಿದ ತಕ್ಷಣ ಸ್ವಂತ ವ್ಯವಹಾರ ಪ್ರಾರಂಭಿಸಲು ಬಯಸುವ ವಿದ್ಯಾರ್ಥಿಗಳ ಪ್ರಮಾಣವು 2023 ರಲ್ಲಿ ಶೇ. 14 ರಷ್ಟಿದ್ದು, 2025 ರ ವೇಳೆಗೆ ಶೇ. 16.2 ಕ್ಕೆ ಏರಿಕೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸರ್ಕಾರಿ ಉದ್ಯೋಗಗಳನ್ನು ಬಯಸುವವರ ಸಂಖ್ಯೆ ಶೇ. 12.7 ರಿಂದ ಶೇ. 10.1 ಕ್ಕೆ ಕುಸಿದಿದೆ. ಹಾಗೆಯೇ, ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಲು ಬಯಸುವವರ ಪ್ರಮಾಣವೂ ಶೇ. 31.3 ರಿಂದ ಶೇ. 27.4 ಕ್ಕೆ ಇಳಿಕೆಯಾಗಿದೆ. ಈ ಅಂಕಿಅಂಶಗಳು ಯುವಜನರು ಹೊಸ ಮಾದರಿಯ ವೃತ್ತಿ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ.
ವಿದ್ಯಾರ್ಥಿ ಉದ್ಯಮಿಗಳು ಹೆಚ್ಚಾಗಿ ಮಾಹಿತಿ ತಂತ್ರಜ್ಞಾನ (IT), ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ಸೇವೆಗಳ ಕ್ಷೇತ್ರಗಳಲ್ಲಿ ತಮಗಾಗಿ ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ. 2025 ರಲ್ಲಿ ಪ್ರಾರಂಭವಾದ ಶೇ. 31 ರಷ್ಟು ವಿದ್ಯಾರ್ಥಿ ಉದ್ಯಮಗಳು ನಿಯಮಿತ ಮಾರಾಟವನ್ನು ಹೊಂದಿವೆ. ಗಮನಾರ್ಹವೆಂದರೆ, ಈ ವಿದ್ಯಾರ್ಥಿಗಳಲ್ಲಿ ಶೇ. 42 ರಷ್ಟು ಜನರು ಎರಡಕ್ಕಿಂತ ಹೆಚ್ಚು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಶೇ. 41 ರಷ್ಟು ಯಶಸ್ವಿ ಉದ್ಯಮಿಗಳು ಮೊದಲಿನ ವ್ಯವಹಾರದಲ್ಲಿ ಸೋತರೂ, ಹಿಂಜರಿಯದೆ ಹೊಸ ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿದ್ದಾರೆ.
ಇದನ್ನೂ ಓದಿ: 68ರ ವಯಸ್ಸಿನಲ್ಲೂ ಕಲಿಕೆಯ ಉತ್ಸಾಹ; ನಿವೃತ್ತ ಅಧಿಕಾರಿ ಈಗ ಸೈಕಾಲಜಿ ಸ್ಟೂಡೆಂಟ್!
ಉದ್ಯಮಶೀಲತೆಯ ಹಿನ್ನೆಲೆಯಿರುವ ಕುಟುಂಬ, ಸ್ನೇಹಿತರು ಅಥವಾ ಶಿಕ್ಷಕರನ್ನು ಹೊಂದಿರುವ ವಿದ್ಯಾರ್ಥಿಗಳು ವ್ಯವಹಾರ ಪ್ರಾರಂಭಿಸುವ ಸಾಧ್ಯತೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದು ಸಮೀಕ್ಷೆ ಹೇಳುತ್ತದೆ. ಆದಾಗ್ಯೂ, ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ಯಮಿಗಳ ಪರಿಚಯವಿಲ್ಲ. ಅಲ್ಲದೆ, ಪುರುಷ ವಿದ್ಯಾರ್ಥಿಗಳಿಗೆ (53%) ಹೋಲಿಸಿದರೆ ಮಹಿಳಾ ವಿದ್ಯಾರ್ಥಿಗಳಲ್ಲಿ (45%) ಉದ್ಯಮ ಪ್ರಾರಂಭಿಸುವ ಪ್ರಮಾಣ ಕೊಂಚ ಕಡಿಮೆಯಿದೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು, ಇನ್ಕ್ಯುಬೇಟರ್‌ಗಳು ಹಾಗೂ ಸರ್ಕಾರವು ವಿದ್ಯಾರ್ಥಿಗಳನ್ನು ಅನುಭವಿ ಉದ್ಯಮಿಗಳೊಂದಿಗೆ ಸಂಪರ್ಕಿಸಬೇಕು. ವಿದ್ಯಾರ್ಥಿಗಳ ಬಿಜಿನೆಸ್ ಐಡಿಯಾಗಳನ್ನು ನಿಜವಾದ ಉದ್ಯಮಗಳಾಗಿ ಪರಿವರ್ತಿಸಲು ಸೂಕ್ತ ಮಾರ್ಗದರ್ಶನ, ಮೂಲಮಾದರಿ ಅಭಿವೃದ್ಧಿ ಮತ್ತು ನೋಂದಣಿ ಪ್ರಕ್ರಿಯೆಗಳಲ್ಲಿ ಬೆಂಬಲ ನೀಡುವುದು ತುರ್ತು ಅಗತ್ಯವಾಗಿದೆ.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Fri, 23 October 26