ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ! ಹಳೆಯ ನೇಮಕಾತಿ ಆಯ್ಕೆಪಟ್ಟಿ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ಕರ್ನಾಟಕ ಹೈಕೋರ್ಟ್ ಸರ್ಕಾರಿ ಹುದ್ದೆಗಳ ಆಯ್ಕೆಪಟ್ಟಿ ಮತ್ತು ವೃಂದ ಹಂಚಿಕೆ ಮರುಪರಿಶೀಲಿಸುವಂತೆ ಆದೇಶಿಸಿದೆ. 2023ರ ಫೆಬ್ರವರಿ 1ರ ಸುತ್ತೋಲೆ ಹಳೆಯ ನೇಮಕಾತಿಗಳಿಗೆ ಅನ್ವಯಿಸುವುದು ಕಾನೂನುಬಾಹಿರ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. 371J ಮೀಸಲಾತಿ ನಿಯಮ ಬದಲಾವಣೆ ಹಿನ್ನೆಲೆಯಲ್ಲಿ ಈ ಆದೇಶ ಬಂದಿದ್ದು, ಅಭ್ಯರ್ಥಿಗಳ ಅರ್ಹತೆ ಪರಿಶೀಲಿಸುವಂತಿಲ್ಲ ಎಂದು ಸೂಚಿಸಿದೆ.

ಮುಖ್ಯಾಂಶಗಳು
- ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ವಿಚಾರ
- 2023ರ ಫೆ.1ರ ಸರ್ಕಾರದ ಸುತ್ತೋಲೆ ಅನ್ವಯಿಸಿದ ಆಯ್ಕೆಪಟ್ಟಿ ಮರುಪರಿಶೀಲಿಸಿ
- ವೃಂದಗಳ ಹಂಚಿಕೆಗೆ ಸಂಬಂಧಿಸಿದಂತೆ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ಬೆಂಗಳೂರು, ಅಕ್ಟೋಬರ್ 17: ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ಆದೇಶಿಸಿದೆ. 2023ರ ಫೆಬ್ರವರಿ 1ರಂದು ಹೊರಡಿಸಲಾದ ಸರ್ಕಾರಿ ಸುತ್ತೋಲೆಯನ್ನು ಅನ್ವಯಿಸಿ ವೃಂದಗಳ ಹಂಚಿಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸುವಂತೆ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರಿದ್ದ ಪೀಠ ಶನಿವಾರ ಆದೇಶ ಹೊರಡಿಸಿದೆ.
ಸಹಾಯಕ ಇಂಜಿನಿಯರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ
ಸಹಾಯಕ ಇಂಜಿನಿಯರ್, ವಿಶೇಷ ಮೀಸಲುಪಡೆಯ ಸಬ್ ಇನ್ಸ್ಪೆಕ್ಟರ್, ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರವು 2023ರ ಫೆಬ್ರವರಿ 1ರ ಸುತ್ತೋಲೆಯಲ್ಲಿ ನೇಮಕಾತಿ ನಿಯಮಗಳನ್ನು ಬದಲಾಯಿಸಿತ್ತು. ಕಲ್ಯಾಣ ಕರ್ನಾಟಕದ 371ಜೆ ಮೀಸಲಾತಿ ನಿಯಮಗಳಲ್ಲಿಯೂ ಬದಲಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಕೆಪಿಎಸ್ಸಿ ನೇಮಕಾತಿ ಅಕ್ರಮ: ಎಸ್ಐಟಿ ರಚನೆಯ ಹೈಕೋರ್ಟ್ ಆದೇಶಕ್ಕೆ ಸರ್ಕಾರ ಠಕ್ಕರ್, ಸುಪ್ರೀಂನಲ್ಲಿ ಪ್ರಶ್ನಿಸಲು ತೀರ್ಮಾನ
ಹಳೆಯ ನೇಮಕಾತಿಗಳಿಗೆ 2023ರ ಫೆಬ್ರವರಿ 1ರ ಸುತ್ತೋಲೆಯನ್ನು ಅನ್ವಯಿಸಿರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ತಿಳಿಸಿದೆ. ನೇಮಕಾತಿ ನಡೆದ ಸಂದರ್ಭದಲ್ಲಿ ಜಾರಿಯಲ್ಲಿದ್ದ ನಿಯಮಗಳ ಅನ್ವಯವೇ ವೃಂದಗಳ ಹಂಚಿಕೆಯನ್ನು ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗ 2026: 10ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗದ ಅವಕಾಶ
ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ವೃಂದಗಳ ಹಂಚಿಕೆಯನ್ನು ಮರುಪರಿಶೀಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ಅಭ್ಯರ್ಥಿಗಳ ಅರ್ಹತೆ ಹಾಗೂ ಅಂಕಪಟ್ಟಿಗಳನ್ನು ಮರುಪರಿಶೀಲಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ನೇಮಕಾತಿ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳ ಆಧಾರದ ಮೇಲೆ ವೃಂದಗಳ ಹಂಚಿಕೆಯನ್ನು ಮರುಪರಿಶೀಲಿಸಿ ಆಯ್ಕೆ ಪಟ್ಟಿಗೆ ಸಂಬಂಧಿಸಿದ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:00 pm, Sat, 17 October 26




