ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ: ತೋಟದಲ್ಲೇ ಕುಳಿತು ರೈತ ಕಣ್ಣೀರು
ಹಾಸನದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಸ್ಥಳಾಂತರ ವಿರೋಧಿಸಿ ತೀವ್ರ ಪ್ರತಿಭಟನೆ, ಆಕ್ರೋಶದ ನಡುವೆಯೇ ಕಾಫಿನಾಡಿನಲ್ಲಿ ಆನೆಗಳು ಮತ್ತಷ್ಟು ಆತಂಕ ಸೃಷ್ಟಿಸಿವೆ. ಚಿಕ್ಕಮಗಳೂರು ಜಿಲ್ಲೆಯ ಜನವಸತಿ ಪ್ರದೇಶ ಮತ್ತು ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, 50ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಾಫಿ ತೋಟಗಳನ್ನು ನಾಶ ಮಾಡುತ್ತಿದ್ದು, ರೈತರು ಕಣ್ಣೀರಿಟ್ಟಿದ್ದಾರೆ.

ಚಿಕ್ಕಮಗಳೂರು, ನವೆಂಬರ್ 26: ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಒಂದೆಡೆ ಜನ ಜೀವ ಬಲಿ ಪಡೆಯುತ್ತಿದ್ದರೆ, ಮತ್ತೊಂದೆಡೆ ರೈತರ ಬೆಳೆಗಳನ್ನು ಹಾಳು ಮಾಡುತ್ತಿದ್ದು, ಇದರಿಂದ ಜನರು ರೋಸಿ ಹೋಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮೂಡಿಗೆರೆ ತಾಲೂಕಿನ ಕಾರ್ಗಲ್ ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಕಾಫಿ ತೋಟಕ್ಕೆ ನುಗ್ಗಿ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಇದರಿಂದ ತೋಟದ ಮಾಲೀಕ ಪ್ರಹ್ಲಾದ್ ಕಂಗಾಲಾಗಿದ್ದು, ಮಕ್ಕಳಂತೆ ಬೆಳೆಸಿದ ತೋಟ ಹೋಯ್ತು, ನನ್ನನ್ನೂ ಆನೆಗಳು ತುಳಿದು ಸಾಯಿಸಲಿ. ನಾನು, ನನ್ನ ಹೆಂಡತಿ ಎಲ್ಲಿಗೂ ಬರುವುದಿಲ್ಲ, ಇಲ್ಲೇ ಇರುತ್ತೇವೆ ಎಂದು ತೋಟದಲ್ಲೇ ಕುಳಿತ್ತಿದ್ದಾರೆ.
ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಮೂರು ಎಕರೆ ಕಾಫಿ ತೋಟವನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆವು. ಈಗ ಬೇಲೂರಿನಿಂದ ಬಂದ ಆನೆಗಳು ತೋಟದ ಮೇಲೆ ದಾಳಿ ಮಾಡಿ, ಹಾನಿ ಮಾಡಿವೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಹಾಗೂ ಅರಣ್ಯ ಅಧಿಕಾರಿಗಳ ಭೇಟಿ ನೀಡಿ, ರೈತನ ಮನವೊಲಿಕೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಮಂದಿಗೆ ತಪ್ಪದ ಕಾಡಾನೆ ಕಾಟ: ಜನವಸತಿ ಪ್ರದೇಶದಲ್ಲೇ ಕಾಣಿಸಿಕೊಂಡ ಗಜಪಡೆ
ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಬಳಿಯ ನಾಗಲಾಪುರದ ಸುಪ್ರೀತ್ ಎಂಬವರ 3 ಎಕರೆ ಗದ್ದೆ, ತೋಟದ ಮೇಲೂ ಕಾಡಾನೆಗಳು ದಾಳಿ ಮಾಡಿ ಅಪಾರ ಹಾನಿ ಮಾಡಿವೆ. ಈ ಗದ್ದೆ ಸ್ಥಿತಿ ನೋಡಿದರೆ ಹೊಟ್ಟೆಗೆ ಬೆಂಕಿ ಬಿದ್ದಂತಾಗುತ್ತದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಒಟ್ಟು 39 ಕಾಡಾನೆಗಳ ಹಿಂಡು
ಒಂದೇ ಕಡೆ ಗುಂಪಾಗಿ ಸೇರಿದ್ದ ಬೀಟಮ್ಮ, ಭುವನೇಶ್ವರಿ ,ಓಲ್ಡ್ ಬೆಲ್ಟ್ ಒಟ್ಟು 39 ಕಾಡಾನೆಗಳ ಹಿಂಡು ನಾಲ್ಕು ಗುಂಪುಗಳಾಗಿ ಚದುರಿದ್ದು, ತೋಟಗಳನ್ನ ನಾಶ ಮಾಡುತ್ತಿವೆ. ಒಂದನೇ ಗುಂಪು ಮಾಕೋನಹಳ್ಳಿ ಗ್ರಾಮದ ಬಳಿ ಬೀಡುಬಿಟ್ಟಿದ್ದರೆ, ಕಾರ್ ಬೈಲು ಗ್ರಾಮದ ಬಳಿ ಇರುವ ಎರಡನೇ ಗುಂಪಿದೆ. ಇನ್ನು ಕಸ್ಕೆಬೈಲು ಗ್ರಾಮದಲ್ಲಿ ಮೂರನೇ ಗುಂಪು ಇದ್ದರೆ, ನಾಲ್ಕನೇ ಹಿಂಡು ಕಲ್ಲುಗುಡ್ಡ ಗ್ರಾಮದಲ್ಲಿ ಬೀಡುಬಿಟ್ಟಿದೆ. ಈ ಕಾಡಾನೆಗಳ ಹಿಂಡು ಸಿಕ್ಕ ಸಿಕ್ಕಲ್ಲಿ ಓಡಾಟ ನಡೆಸಿದ್ದು, ಇದರಿಂದ 50ಕ್ಕೂ ಅಧಿಕ ಗ್ರಾಮದ ಜನರು ಆತಂಕದಲ್ಲಿದ್ದಾರೆ.
ಕಾಫಿ ಕೊಯ್ಲು ಸಮಯದಲ್ಲೇ ಕಾಡಾನೆಗಳ ಸಂಚಾರದಿಂದ ಎಚ್ಚರದಿಂದ ಇರುವಂತೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕಾಫಿತೋಟಕ್ಕೆ ತೆರಳದಂತೆ ಜನರಿಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಆದ್ರೆ, ರೈತರು, ಮಕ್ಕಳಂತೆ ಬೆಳೆಸಿರುವ ತೋಟವನ್ನು ಕಾಡಾನೆಗಳು ನಾಶ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಸಲಗ ಸೆರೆಗೆ ಆದೇಶ
ಕಾಡಾನೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಪಟಳ ಹೆಚ್ಚಾಗಿದೆ. ಇನ್ನು ಒಂಟಿ ಸಲಗ ಹಾಸನ ಭಾಗದಿಂದ ಚಿಕ್ಕಮಗಳೂರು ನಗರ ಕಡೆ ಬಂದಿದ್ದು, ಇದನ್ನು ಸೆರೆ ಹಿಡಿಯಲು ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗ್ಗೆಯಿಂದಲೇ ಗುಂಪಿನಿಂದ ಬೇರ್ಪಟ್ಟು ಓಡಾಡುತ್ತಿರುವ ಸಲಗ ಸೆರೆಗೆ ಕಾರ್ಯಾಚರಣೆ ನಡೆದಿದೆ. ಬೇಲೂರು ಕ್ಯಾಂಪ್ನಲ್ಲಿರುವ 6 ಕುಮ್ಕಿ ಆನೆಗಳನ್ನು ಬಳಸಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Thu, 26 November 26




