AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ

ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರಿಂದ 121 ಕೆಜಿ ತೂಕದ ಚಿನ್ನಾಭರಣಗಳ ಬೃಹತ್ ಕಾಣಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನಗಳು (TTD) ಸ್ವೀಕರಿಸಿದೆ. 9 ಸೆಟ್‌ಗಳಲ್ಲಿ ಜೋಡಿಸಲಾದ 45 ಆಭರಣಗಳನ್ನು ಒಳಗೊಂಡಿರುವ ಈ ದೇಣಿಗೆಯ ಮೌಲ್ಯ 160 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಇದು ತಿರುಪತಿ ದೇವಾಲಯಕ್ಕೆ ಇದುವರೆಗೆ ನೀಡಲಾದ ಅತಿದೊಡ್ಡ ವೈಯಕ್ತಿಕ ಕಾಣಿಕೆಯಾಗಿದೆ ಎಂದು ಸರ್ಕಾರಿ ಮತ್ತು ಟಿಟಿಡಿ ಮೂಲಗಳು ತಿಳಿಸಿವೆ. ಇಂದು ತಿರುಮಲದಲ್ಲಿ ದೇವಾಲಯದ ಅಧಿಕಾರಿಗಳಿಗೆ ಈ ಆಭರಣಗಳನ್ನು ಹಸ್ತಾಂತರಿಸಲಾಯಿತು.

ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ
ತಿರುಮಲ ದೇವಸ್ಥಾನಕ್ಕೆ 121 ಕೆಜಿ ಚಿನ್ನಾಭರಣ ನೀಡಿದ ವರ್ಧಮಾನ್ ಜೈನ್ ಕುಟುಂಬ
ಸುಷ್ಮಾ ಚಕ್ರೆ
|

Updated on: Nov 26, 2026 | 3:23 PM

Share

ತಿರುಮಲ, ನವೆಂಬರ್ 26: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಇಂದು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್ ಎಂಬುವವರು 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲೇ ಮೊದಲ ಬಾರಿಗೆ ಭಕ್ತರೊಬ್ಬರು ದೇವರಿಗೆ 40 ವಿವಿಧ ಬಗೆಯ ಚಿನ್ನಾಭರಣಗಳನ್ನು ಸಮರ್ಪಿಸುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಅಭಿಷೇಕದ ನಂತರ, ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ನೂತನ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುವುದು.

9 ಸೆಟ್‌ಗಳಲ್ಲಿ ಜೋಡಿಸಲಾದ 45 ಚಿನ್ನಾಭರಣಗಳನ್ನು ಈ ದೇಣಿಗೆ ಒಳಗೊಂಡಿದ್ದು, ಇದರ ಅಂದಾಜು ಮೌಲ್ಯ 160 ಕೋಟಿ ರೂ.  ಎಂದು ಸರ್ಕಾರಿ ಮೂಲವೊಂದು ಪಿಟಿಐಗೆ ತಿಳಿಸಿದೆ. ಟಿಟಿಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕಾಣಿಕೆಯ ವಿವರಗಳನ್ನು ಹಂಚಿಕೊಂಡಿದ್ದು, ಚಿನ್ನಾಭರಣಗಳ ತೂಕ 121 ಕೆಜಿ ಇರುವುದನ್ನು ದೃಢಪಡಿಸಿದೆ. ದೇವರನ್ನು ಶಿರದಿಂದ ಪಾದದವರೆಗೆ ಅಲಂಕರಿಸಲು ವಿಶೇಷವಾಗಿ ತಯಾರಿಸಲಾದ ಆಭರಣಗಳಿವು ಎಂದು ದೇವಸ್ಥಾನದ ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಈ ದೇಣಿಗೆಯು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ನೀಡಲಾದ ಅತಿದೊಡ್ಡ ವೈಯಕ್ತಿಕ ಕಾಣಿಕೆ ಎಂದು ಟಿಟಿಡಿ ಮೂಲಗಳು ಬಣ್ಣಿಸಿವೆ.

ಇದನ್ನೂ ಓದಿ: 500 ವರ್ಷಗಳ ಹಿಂದೆಯೇ ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಕಿರೀಟ ಅರ್ಪಿಸಿದ್ದ ಅರಸ; ಯಾರು ಈ ಮಹಾಭಕ್ತ?

ವಿಶೇಷ ತಂಡವೊಂದು ಈ ಚಿನ್ನಾಭರಣಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು 160 ಕೋಟಿ ರೂ. ಎಂದು ಹೇಳಲಾಗಿದೆ. ಈ ಆಭರಣಗಳನ್ನು ತಿರುಮಲದ ರಂಗನಾಯಕುಲ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ವರದಿಗಳ ಪ್ರಕಾರ, ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಳಿ ಈಗಾಗಲೇ ಸುಮಾರು 10 ಟನ್‌ಗಳಷ್ಟು ಚಿನ್ನದ ಸಂಗ್ರಹವಿದೆ.

ಈ ಬೃಹತ್ ಉಡುಗೊರೆಯಲ್ಲಿ ಒಟ್ಟು 47 ಬಗೆಯ ಚಿನ್ನದ ಆಭರಣಗಳಿವೆ. ಇವುಗಳನ್ನು ವಿಶೇಷವಾಗಿ 9 ಸೆಟ್‌ಗಳಾಗಿ ಮಾಡಲಾಗಿದೆ. ಇವುಗಳಲ್ಲಿ ಕಿರೀಟ, ವಡ್ಡನ, ಭುಜದ ಆಭರಣಗಳು, ಶಂಖ ಚಿಪ್ಪುಗಳು ಮತ್ತು ಅಭಯ ಹಸ್ತ ಸೇರಿವೆ. ಇವುಗಳನ್ನು ಆಗಮ ಶಾಸ್ತ್ರ ಮತ್ತು ಟಿಟಿಡಿ ಸಂಪ್ರದಾಯಗಳ ನಿಯಮಗಳಿಗೆ ಅನುಸಾರವಾಗಿ ಸುಂದರವಾಗಿ ರಚಿಸಲಾಗಿದೆ.

ಇದನ್ನೂ ಓದಿ: ಓಪನ್ ಹಾರ್ಟ್ ಸರ್ಜರಿ ಆದ್ರೂ 491 ಬಾರಿ ಮೆಟ್ಟಿಲುಗಳ ಮೂಲಕ ತಿರುಮಲ ಬೆಟ್ಟ ಹತ್ತಿದ ಮಹಾನ್ ಭಕ್ತ!

ವರ್ಧಮಾನ್ ಜೈನ್ ಕುಟುಂಬವು ಶ್ರೀವರಿಗೆ ಈ ರೀತಿ ದಾನ ನೀಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷ ಮೇ 16 ರಂದು ಅವರು ಟಿಟಿಡಿಗೆ ಎಲೆಕ್ಟ್ರಿಕ್ ಬಸ್ ಅನ್ನು ಸಹ ದಾನ ಮಾಡಿದರು. ಈಗ, ಅವರು 121 ಕೆಜಿ ಚಿನ್ನದ ಆಭರಣಗಳನ್ನು ದಾನ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

ಆಂಧ್ರಪ್ರದೇಶದ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವು ದೇಶದಲ್ಲಿಯೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಹಿಂದೂ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಭಗವಾನ್ ವಿಷ್ಣುವಿನ ಅವತಾರವಾದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿತವಾಗಿರುವ ಈ ದೇವಾಲಯವು ವರ್ಷಪೂರ್ತಿ ಭಾರತ ಮತ್ತು ವಿದೇಶಗಳಿಂದ ಬರುವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಭಕ್ತರು ತಮ್ಮ ಧಾರ್ಮಿಕ ಹರಕೆ ಮತ್ತು ಭಕ್ತಿಯ ಭಾಗವಾಗಿ ನಗದು, ಚಿನ್ನ, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ದೇವಾಲಯ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಇಂತಹ ದೇಣಿಗೆಗಳನ್ನು ಸ್ವೀಕರಿಸಿ ನಿರ್ವಹಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More