ಪಂಜಾಬ್‌ನಲ್ಲಿ ಎಎಪಿ ರ‍್ಯಾಲಿ ಸ್ಥಳದಲ್ಲಿ ಸ್ಫೋಟ, ಕಾರ್ಮಿಕ ಸಾವು
ಪಂಜಾಬ್‌ನ ಮೊಗಾದಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ರ‍್ಯಾಲಿ ಸಿದ್ಧತೆ ವೇಳೆ ದುರಂತ ಸಂಭವಿಸಿದೆ. ಮಾಧ್ಯಮದವರ ಟೆಂಟ್‌ನಲ್ಲಿ ಕಾಫಿ ಯಂತ್ರ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ರ‍್ಯಾಲಿಗೆ ಕೇಜ್ರಿವಾಲ್, ಭಗವಂತ್ ಮಾನ್ ಆಗಮಿಸುವ ಮುನ್ನವೇ ಈ ಘಟನೆ ನಡೆದಿದೆ. 2027ರ ವಿಧಾನಸಭಾ ಚುನಾವಣೆಗೆ ಮಹತ್ವದ ರಾಜಕೀಯ ಕಾರ್ಯಕ್ರಮ ಎನ್ನಲಾಗಿತ್ತು.

ಅಮೃತಸರ, ನವೆಂಬರ್ 26: ಪಂಜಾಬ್‌ನ ಮೋಗಾದಲ್ಲಿ ಆಮ್ ಆದ್ಮಿ ಪಕ್ಷದ ಬೃಹತ್ ರ‍್ಯಾಲಿಯ ಸಿದ್ಧತೆಗಳ ನಡುವೆ ದುರಂತ ಸಂಭವಿಸಿದೆ. ರ‍್ಯಾಲಿ ಸ್ಥಳದಲ್ಲಿ ಅಳವಡಿಸಲಾಗಿದ್ದ ಕಾಫಿ ಯಂತ್ರ ಏಕಾಏಕಿ ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ಯಂತ್ರದ ತುಂಡುಗಳು ಹಾರಿಹೋಗಿವೆ. ಈ ವೇಳೆ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ತಲೆಗೆ ಯಂತ್ರದ ತುಂಡು ಬಡಿದು ಆತ ಮೃತಪಟ್ಟಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಾಧ್ಯಮದವರಿಗೆ ಊಟದ ವ್ಯವಸ್ಥೆ ಮಾಡಿದ್ದ ಟೆಂಟ್‌ನಲ್ಲಿ ಘಟನೆ
ಮೋಗಾ-ಲೂಧಿಯಾನ ರಾಷ್ಟ್ರೀಯ ಹೆದ್ದಾರಿಯ ನಾಥುವಾಲಾ ಜದೀದ್ ಗ್ರಾಮದ ಬಳಿ ಎಎಪಿಯ ‘ಖುಷ್ಹಾಲ್ ಪಂಜಾಬ್’ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಗೆ ಆಗಮಿಸುವ ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಊಟದ ವ್ಯವಸ್ಥೆ ಮಾಡಲು ಪ್ರತ್ಯೇಕ ಟೆಂಟ್ ನಿರ್ಮಿಸಲಾಗಿತ್ತು. ಇದೇ ಟೆಂಟ್‌ನಲ್ಲಿ ಕಾಫಿ ತಯಾರಿಸಲು ಯಂತ್ರವನ್ನು ಅಳವಡಿಸಲಾಗಿತ್ತು. ಗುರುವಾರ ಬೆಳಗ್ಗೆ ಯಂತ್ರ ಸ್ಫೋಟಗೊಂಡ ಪರಿಣಾಮ ಅಲ್ಲಿದ್ದ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ.
ಯಂತ್ರದ ತುಂಡು ತಲೆಗೆ ಬಡಿದು ಸಾವು ಆರಂಭಿಕ ವರದಿಗಳ ಪ್ರಕಾರ, ಕಾಫಿ ಯಂತ್ರದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿದ್ದೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಸ್ಫೋಟದ ರಭಸಕ್ಕೆ ಯಂತ್ರದ ಒಂದು ಭಾಗ ಕಳಚಿಕೊಂಡು ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕನ ತಲೆಗೆ ಬಡಿದಿದೆ. ಗಂಭೀರ ಗಾಯಗಳಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಮೃತ ಕಾರ್ಮಿಕನ ಗುರುತು ಸೇರಿದಂತೆ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ
ಕೇಜ್ರಿವಾಲ್, ಭಗವಂತ್ ಮಾನ್ ಆಗಮನಕ್ಕೂ ಮುನ್ನ ಅವಘಡ ಎಎಪಿ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಮೋಗಾದಲ್ಲಿ ಈ ರಾಜ್ಯಮಟ್ಟದ ರ‍್ಯಾಲಿ ಆಯೋಜಿಸಲಾಗಿತ್ತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು. ನಾಯಕರು ಸ್ಥಳಕ್ಕೆ ಆಗಮಿಸುವ ಮುನ್ನವೇ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಯಮುನಾ ನದಿಯಲ್ಲಿ ಮೀನುಗಳ ಸಾವು, ಛತ್ ಪೂಜೆಗೂ ಮುನ್ನ ದೆಹಲಿಯಲ್ಲಿ ರಾಜಕೀಯ ಕಾವು, ಬಿಜೆಪಿ–ಎಎಪಿ ನಡುವೆ ವಾಕ್ಸಮರ
2027ರ ಚುನಾವಣೆಗೆ ಸಿದ್ಧತೆ? ‘ಖುಷ್ಹಾಲ್ ಪಂಜಾಬ್’ ಹೆಸರಿನಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ರ‍್ಯಾಲಿಯನ್ನು 2027ರ ಪಂಜಾಬ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವದ ರಾಜಕೀಯ ಕಾರ್ಯಕ್ರಮವೆಂದು ಪರಿಗಣಿಸಲಾಗಿದೆ. ರ‍್ಯಾಲಿಗಾಗಿ ಮೋಗಾದಲ್ಲಿ ಸುಮಾರು 116 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪಕ್ಷದ ನಾಯಕರು ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುವುದು ಮತ್ತು ಮುಂದಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಮಾತನಾಡುವ ನಿರೀಕ್ಷೆಯಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Thu, 26 November 26




