ಶಬರಿಮಲೆಯಲ್ಲಿ ರಹಸ್ಯವಾಗಿ ವಿಡಿಯೋ ಮಾಡಿದರೆ ಜೈಲು ಗ್ಯಾರಂಟಿ! ಗರ್ಭಗುಡಿ, ಪತಿನೆಟ್ಟಂಪಡಿ ದೃಶ್ಯ ಸೆರೆಹಿಡಿದರೆ ಕಠಿಣ ಕ್ರಮ
ಶಬರಿಮಲೆ ದೇವಾಲಯದಲ್ಲಿ ಫೋಟೋ, ವಿಡಿಯೋ ಸೆರೆಹಿಡಿಯುವವರ ವಿರುದ್ಧ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಕಠಿಣ ಕಾನೂನು ಕ್ರಮ ಮತ್ತು ಮೊಬೈಲ್ ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ. ಯೂಟ್ಯೂಬರ್‌ಗಳು ನಿಷೇಧ ಉಲ್ಲಂಘಿಸಿ ವಿಡಿಯೋ ಮಾಡುತ್ತಿದ್ದಾರೆ. ಈ ಭದ್ರತಾ ಆತಂಕದ ಮಧ್ಯೆ, ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಇದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

ಶಬರಿಮಲೆ, ನವೆಂಬರ್ 26: ಕೇರಳದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಮಾಳಿಗಪುರಂ ದೇವಿಯ ವಿಗ್ರಹಗಳ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ಈ ವರದಿಯ ಆಧಾರದ ಮೇಲೆ ದೇವಸ್ವಂ ವಿಜಿಲೆನ್ಸ್ (ಭ್ರಷ್ಟಾಚಾರ ನಿಗಾ ಸಮಿತಿ) ತನಿಖೆ ನಡೆಸಿ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ನಿಷೇಧವನ್ನು ಉಲ್ಲಂಘಿಸಿ ದೇವಾಲಯದ ಒಳಭಾಗದಲ್ಲಿ ಫೋಟೋ ಅಥವಾ ವಿಡಿಯೋ ತೆಗೆಯುವವರ ವಿರುದ್ಧ ಬಂಧನ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮತ್ತು ಅವರ ಮೊಬೈಲ್ ಫೋನ್ ಹಾಗೂ ಕ್ಯಾಮೆರಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಕೇರಳ ಹೈಕೋರ್ಟ್ ಆದೇಶ ಮತ್ತು ಯೂಟ್ಯೂಬರ್‌ಗಳ ಕಳ್ಳಾಟ:
ಶಬರಿಮಲೆ ದೇವಾಲಯದ ಒಳಗಿನ ಅಯ್ಯಪ್ಪನ ವಿಗ್ರಹ, ಪವಿತ್ರ ಹದಿನೆಂಟು ಮೆಟ್ಟಿಲುಗಳು (ಪತಿನೆಟ್ಟಂಪಾಡಿ), ಮೇಲ್ತಿರುಮುಟ್ಟಂ ಮತ್ತು ಮಾಳಿಗಪುರಂ ಸನ್ನಿಧಿಯ ದೃಶ್ಯಗಳನ್ನು ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡುವುದನ್ನು ಕೇರಳ ಹೈಕೋರ್ಟ್ ಈಗಾಗಲೇ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದಾಗ್ಯೂ, ಕೆಲವು ಯೂಟ್ಯೂಬರ್‌ಗಳು ಮತ್ತು ವ್ಲಾಗರ್‌ಗಳು ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಲು ತಮ್ಮ ಮೊಬೈಲ್ ಫೋನ್‌ಗಳನ್ನು ಶರ್ಟ್ ಕಿಸೆ, ಬ್ಯಾಗ್ ಅಥವಾ ಹೇರ್ ಬ್ಯಾಂಡ್‌ಗಳಲ್ಲಿ ಬಚ್ಚಿಟ್ಟುಕೊಂಡು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ. ಬಳಿಕ ಈ ದೃಶ್ಯಗಳನ್ನು ಸಾಮಾನ್ಯ ದೃಶ್ಯಗಳೊಂದಿಗೆ ಎಡಿಟ್ ಮಾಡಿ, ಲೈಕ್ಸ್ ಮತ್ತು ಶೇರ್‌ಗಳಿಗಾಗಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ಹರಿಬಿಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಭದ್ರತಾ ದೃಷ್ಟಿಯಿಂದ ಆತಂಕ ವ್ಯಕ್ತಪಡಿಸಿದ ಗುಪ್ತಚರ ಇಲಾಖೆ:
ದೇವಾಲಯದ ಸೂಕ್ಷ್ಮ ಪ್ರದೇಶಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಭದ್ರತಾ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಇಂತಹ ರಹಸ್ಯ ವಿಡಿಯೋಗಳನ್ನು ಸಮಾಜವಿರೋಧಿ ಮತ್ತು ಉಗ್ರಗಾಮಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಈ ಕಾರಣದಿಂದ ಸನ್ನಿಧಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಅನುಮಾನಾಸ್ಪದವಾಗಿ ಮೊಬೈಲ್ ಬಳಸುವವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಇಳಿಕೆ:
ಇನ್ನೊಂದೆಡೆ, ಈ ಬಾರಿ ಶಬರಿಮಲೆಗೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ತಿರುವಾಂಕೂರು ದೇವಸ್ವಂ ಮಂಡಳಿಗೆ (TDB) ಚಿಂತೆ ತಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಏಕೆ ಕಡಿಮೆಯಾಗಿದೆ ಎಂಬುದಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು, ವಿಜಿಲೆನ್ಸ್ ಮತ್ತು ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರ್ಚುವಲ್ ಕ್ಯೂ ಬುಕಿಂಗ್ ನಿರ್ವಹಿಸುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಸಂಸ್ಥೆಯಿಂದಲೂ ಪಂಪಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ನಿನ್ನೆಯ ಅಂಕಿಅಂಶಗಳ ಪ್ರಕಾರ, ಪಂಪಾ ಮೂಲಕ 59,601 ಭಕ್ತರು ದರ್ಶನಕ್ಕೆ ಆಗಮಿಸಿದ್ದು, ವರ್ಚುವಲ್ ಕ್ಯೂ ಬುಕ್ ಮಾಡಿದ್ದವರಲ್ಲಿ ಸುಮಾರು 47,000 ಮಂದಿ ಮಾತ್ರ ಬಂದಿದ್ದಾರೆ; ಉಳಿದ 23,000 ಭಕ್ತರು ಬುಕಿಂಗ್ ಮಾಡಿದ್ದರೂ ದರ್ಶನಕ್ಕೆ ಗೈರಾಗಿದ್ದಾರೆ.
ನಿರ್ಬಂಧಗಳನ್ನು ಸಡಿಲಿಸಲು ದೇವಸ್ವಂ ನೌಕರರ ಒತ್ತಾಯ:
ಭಕ್ತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅನಗತ್ಯ ನಿರ್ಬಂಧಗಳನ್ನು ತೆಗೆದುಹಾಕುವಂತೆ ತಿರುವಾಂಕೂರು ದೇವಸ್ವಂ ನೌಕರರ ಸಂಘಟನೆ ಶಿಫಾರಸು ಮಾಡಿದೆ. ಶಬರಿಮಲೆ ಯಾತ್ರೆಗೆ ಬರುವ ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಸುಗಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಸನ್ನಿಧಾನದಲ್ಲಿ ಗರಿಷ್ಠ ಮೂಲಭೂತ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Thu, 26 November 26




