ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಂದು ತುಂಡು ತುಂಡಾಗಿ ಮೃತದೇಹ ಕತ್ತರಿಸಿ ಎಸೆದ ದುರುಳರು!
ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಬರ್ಬರವಾಗಿ ಕೊಂದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕೆರೆ, ಕಾಲುವೆಗೆ ಎಸೆದಿರುವ ಘಟನೆ ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಕಾಣೆಯಾಗಿರುವ ಬಗ್ಗೆ ಅಕ್ಟೋಬರ್ 29ರಂದು ತೆಕ್ಕಲಕೋಟೆ ಪೊಲೀಸ ಠಾಣೆಗೆ ಮೃತನ ಪತ್ನಿ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರಿಂದ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ.

ಬಳ್ಳಾರಿ/ತುಮಕೂರು, ನವೆಂಬರ್ 26: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೋರ್ವನನ್ನು ಆತನ ಸ್ನೇಹಿತರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ನಡೆದಿದೆ. ಹನುಮಂತಪ್ಪ (38) ಮೃತ ವ್ಯಕ್ತಿಯಾಗಿದ್ದು, ಉಪೇಂದ್ರ, ಶಶಿಕುಮಾರ್, ಮಲ್ಲಿಕಾರ್ಜುನ ಹಾಗೂ ಗಂಗಾಧರ ಆರೋಪಿಗಳಾಗಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಪತಿ ಹನುಂತಪ್ಪ ಕಾಣೆಯಾಗಿರುವ ಬಗ್ಗೆ ಅಕ್ಟೋಬರ್ 29ರಂದು ತೆಕ್ಕಲಕೋಟೆ ಪೊಲೀಸ ಠಾಣೆಗೆ ಪತ್ನಿ ಎಸ್. ಲಕ್ಷ್ಮೀ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರಿಂದ ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಒಂದು ಲಕ್ಷ ಹಣದ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹನುಮಂತಪ್ಪ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿಗಳು, ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೃತದೇಹ ಸುಟ್ಟು, ಅರೆ ಬೆಂದ ಮೃತ ದೇಹವನ್ನ ತುಂಡು ತುಂಡು ಕತ್ತರಿಸಿ ಕೆರೆ ಮತ್ತು ಕಾಲುವೆಗೆ ಎಸೆದಿರೋದು ಗೊತ್ತಾಗಿದೆ. ಮೃತ ದೇಹ ಸುಡಲು ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ತೆಗೆದುಕೊಂಡು ಹೋಗುತ್ತಿರುವ ಸಿಸಿ ಕ್ಯಾಮರಾ ದೃಶ್ಯ ಕೂಡ ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿದೆ. ಇನ್ನು ಆರೋಪಿಗಳು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿರುವ ಹನುಮಂತಪ್ಪ ಮೃತದೇಹಕ್ಕಾಗಿ ಶೋಧ ಮುಂದುವರಿದೆ. ಹನುಮಂತಪ್ಪನ ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಲಕ್ಷ್ಮೀ ಪೂಜೆ ಲೈಂಗಿಕ ದೌರ್ಜನ್ಯ ಪ್ರಕರಣ: ಶ್ರೀಶೈಲಂನಲ್ಲಿ ಕಿಂಗ್‌ಪಿನ್ ಅರೆಸ್ಟ್!
ಗಲಾಟೆ ವೇಳೆ ಹಲ್ಲೆ: ವ್ಯಕ್ತಿ ಸಾವು
ಹಣದ ವಿಚಾರಕ್ಕೆ ನಡೆದ ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮಾಕುವಳ್ಳಿಯಲ್ಲಿ ನಡೆದಿದೆ. ರವಿಕುಮಾರ್ (45) ಮೃತ ವ್ಯಕ್ತಿಯಾಗಿದ್ದು, ಇವರ ಚಿಕ್ಕಪ್ಪನ ಮಗ ಭಾಸ್ಕರ್ ಅಲಿಯಾಸ್ ಅಂಕಿತ್ (23) ಹಲ್ಲೆ ನಡೆಸಿದ್ದ ಆರೋಪಿಯಾಗಿದ್ದಾನೆ. ಹುಣಸೆಕಾಯಿ ಮಾರಾಟದಿಂದ ಬಂದ ಹಣದ ವಿಚಾರವಾಗಿ ಇವರಿಬ್ಬರ ನಡುವೆ ನವೆಂಬರ್ 24ರಂದು ಜಗಳ ನಡೆದಿತ್ತು. ಈ ವೇಳೆ ರವಿಕುಮಾರ್ ತಲೆಗೆ ಭಾಸ್ಕರ್ ದೊಣ್ಣೆಯಿಂದ ಹಲ್ಲೆ ನಡೆಸಿದ್ದ. ಗಲಾಟೆ ನೋಡಿದ್ದ ಸ್ಥಳೀಯ ಮಹಿಳೆ ಇಬ್ಬರನ್ನು ಬಿಡಿಸಿ ಕಳುಹಿಸಿದ್ದಳು. ಬಳಿಕ ರಾತ್ರಿ ಮಲಗುವಾಗ ಕಿವಿ ನೋವೆಂದು ಮಲಗಿದ್ದ ರವಿಕುಮಾರ್ ಬೆಳಗಾಗುವುದರೊಳಗೆ ಮೃತಪಟ್ಟಿದ್ದಾರೆ. ಈ ಸಾವಿಗೆ ಭಾಸ್ಕರ್ ಕಾರಣ ಎಂದು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ಮೃತನ ಪತ್ನಿ ದೂರು ನೀಡಿದ್ದು, ಘಟನೆ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Thu, 26 November 26



