AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Milk Day 2026: ಹೈನುಗಾರಿಯಿಂದ ಉತ್ತಮ ಆದಾಯ ಗಳಿಸಬಹುದು; ಈ ಉದ್ಯಮದಲ್ಲಿ ಲಾಭಗಳಿಸಲು ಈ ಟಿಪ್ಸ್‌ ಪಾಲಿಸಿ

Dairy Farming Tips: ಹೈನುಗಾರಿಕೆ ಗ್ರಾಮೀಣ ಜನರ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಅದೆಷ್ಟೋ ಜನರಿಗೆ ಹೈನುಗಾರಿಕೆ ಜೀವನಾಧಾರವಾಗಿದೆ. ನೀವು ಕೂಡ ಡೈರಿ ಫಾರ್ಮ್‌ ಆರಂಭಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಈ ಉದ್ಯಮದಲ್ಲಿ ಲಾಭ ಗಳಿಸಲು ಈ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

National Milk Day 2026: ಹೈನುಗಾರಿಯಿಂದ ಉತ್ತಮ ಆದಾಯ ಗಳಿಸಬಹುದು; ಈ ಉದ್ಯಮದಲ್ಲಿ ಲಾಭಗಳಿಸಲು ಈ ಟಿಪ್ಸ್‌ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on:Nov 26, 2026 | 12:06 PM

Share

ಹೈನುಗಾರಿಕೆ (Dairy farming) ಗ್ರಾಮೀಣ ಪ್ರದೇಶದ ಆರ್ಥಿಕತೆಯ ಬೆನ್ನೆಲುಬು ಅಂತಾನೇ ಹೇಳಬಹುದು. ಇದು ಲಕ್ಷಾಂತರ ರೈತ ಕುಟುಂಬಗಳಿಗೆ ಆದಾಯ ನೀಡುವ ಪ್ರಮುಖ ಜೀವನಾಧಾರವಾಗಿದೆ. ಅದೆಷ್ಟೋ ಜನರು ಹೈನುಗಾರಿಕೆಯಿಂದಲೇ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣಕರ್ತರು ಶ್ವೇತಕ್ರಾಂತಿಯ ಹರಿಕಾರ ಡಾ. ವರ್ಗೀಸ್‌ ಕುರಿಯನ್‌ ಅವರು. ಹಾಲು ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಲು, ರೈತರ ಜೀವನಮಟ್ಟವನ್ನು ಸುಧಾರಿಸಲು ಶ್ರಮಿಸಿದ ಇವರು ಭಾರತವನ್ನು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವನ್ನಾಗಿ ಮಾಡಿದರು. ಇವರ ಜನ್ಮಜಯಂತಿಯ ಅಂಗವಾಗಿ ಪ್ರತಿವರ್ಷ ನವೆಂಬರ್‌ 26 ರಂದು ರಾಷ್ಟ್ರೀಯ ಕ್ಷೀರ ದಿನವನ್ನು ಆಚರಿಸಲಾಗುತ್ತದೆ. ಈ  ಸುದಿನದಂದು ಹೈನುಗಾರಿಕೆಯನ್ನು ಪ್ರಾರಂಭಿಸುವುದು ಹೇಗೆ, ಹೈನುಗಾರಿಕೆಯಿಂದ ಉತ್ತಮ ಲಾಭವನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಡೈರಿ ಫಾರ್ಮ್‌ ಆರಂಭಿಸಲು ಬಯಸುವವರು ಈ ವಿಷಯಗಳ ಬಗ್ಗೆ ತಿಳಿಯಲೇಬೇಕು:

ಹಸು ಸಾಕಾಣಿಕೆ, ಸಮತೋಲಿತ ಆಹಾರ, ಸಕಾಲಿಕ ಲಸಿಕೆಗಳು ಮತ್ತು ಸರಿಯಾದ ಆರೈಕೆಯ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಾಲು ಉತ್ಪಾದನೆಯನ್ನು ಹೆಚ್ಚಿಸಬಹುದು. ಇದಲ್ಲದೆ, ಹಾಲಿನೊಂದಿಗೆ ಹಸುವಿನ ಸಗಣಿಯಿಂದ ಸಾವಯವ ಗೊಬ್ಬರವನ್ನು ಉತ್ಪಾದಿಸುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚುವರಿ ಆದಾಯವನ್ನು ಗಳಿಸಬಹುದು.

ಉತ್ತಮ ತಳಿಯ ಹಸು, ಎಮ್ಮೆಯನ್ನು ಆರಿಸಬೇಕು:

ಹೈನುಗಾರಿಯನ್ನು ಆರಂಭಿಸುವಾಗ ಎಮ್ಮೆ ಮತ್ತು ಹಸುಗಳ ತಳಿ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಮರೆಯದಿರಿ. ಉತ್ತಮ ತಳಿಯ ಹಸು, ಎಮ್ಮೆಗಳನ್ನೇ ಆಯ್ಕೆ ಮಾಡಿ. ಅನಾರೋಗ್ಯ ಅಥವಾ ಸೋಂಕಿತ ಪ್ರಾಣಿಗಳನ್ನು ಸಾಕುವುದನ್ನು ತಪ್ಪಿಸಿ. ಹಸು ಸಾಕಲು ಬಯಸುವವರು ಗಿರ್ ಅಥವಾ ಸಹಿವಾಲ್ ತಳಿಯನ್ನು ಆರಿಸಿಕೊಳ್ಳಬೇಕು. ಎಮ್ಮೆ ಸಾಕಲು ಬಯಸುವವರು ಮುರ್ರಾ, ಸುರತಿ, ಮೆಹ್ಸಾನಾ ಅಥವಾ ಜಾಫರಾಬಾದಿಯಂತಹ ತಳಿಗಳನ್ನು ಆಯ್ಕೆ ಮಾಡಬಹುದು. ಅವುಗಳನ್ನು ಖರೀದಿಸುವಾಗ, ಅವು ಗಾಯಗಳು ಅಥವಾ ಸೋಂಕಿನ ಚಿಹ್ನೆಗಳಿಂದ ಮುಕ್ತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.

ಡೈರಿ ಫಾರ್ಮ್‌ನ ಆರಂಭಿಕ ಸಿದ್ಧತೆ ಹೀಗಿರಲಿ:

ನೀವು ಸಾಕುವ ಹಸು, ಎಮ್ಮೆಗಳಿಗೆ ಸ್ವಚ್ಛ, ವಿಶಾಲವಾದ, ಗಾಳಿ ಬೀಸುವ ಮತ್ತು ಚೆನ್ನಾಗಿ ಬೆಳಕು ಬೀಳುವ  ಶೆಡ್ ನಿರ್ಮಿಸಿ. ಅವುಗಳಿಗೆ ಶುದ್ಧ ನೀರು ಲಭ್ಯವುರುವಂತೆ ನೋಡಿಕೊಳ್ಳಿ. ಮುಖ್ಯವಾಗಿ ಅನಾರೋಗ್ಯ ಅಥವಾ ಸೋಂಕನ್ನು ತಡೆಗಟ್ಟಲು ಶೆಡ್ ಆವರಣವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.

ಹೈನುಗಾರಿಕೆಗೆ ಹೂಡಿಕೆ ಎಷ್ಟು ಮಾಡಬೇಕು?

ಕೇವಲ ₹3 ಲಕ್ಷದಿಂದ ಹೈನುಗಾರಿಕೆಯನ್ನು ಪ್ರಾರಂಭಿಸಬಹುದು. ₹3 ಲಕ್ಷದಲ್ಲಿ ಧಾರಾಳವಾಗಿ ಎರಡು ಹಸು ಅಥವಾ ಎಮ್ಮೆ ಖರೀದಿಸಬಹುದು ಮತ್ತು ಉತ್ತಮ ಶೆಡ್‌ ನಿರ್ಮಾಣ ಮಾಡಬಹುದು.ಕ್ರಮೇಣ, ನೀವು ಲಾಭ ಹೆಚ್ಚಿಸಲು ಹೆಚ್ಚು ಹಸುಗಳನ್ನು ಸಾಕಬಹುದು.  ಅಲ್ಲದೆ ಹೈನುಗಾರಿಕೆಗೆ ಸರ್ಕಾರದ ವತಿಯಿಂದ ಸಬ್ಸಿಡಿ, ಸಹಾಯಧನಗಳು ಕೂಡ ದೊರೆಯುತ್ತವೆ.

ಗಳಿಕೆಯನ್ನು ಹೇಗೆ ಮಾಡಬಹುದು?

ಉತ್ತಮ ತಳಿಯ ಹಸುಗಳು ಮತ್ತು ಎಮ್ಮೆಗಳು ಪ್ರತಿದಿನ 10 ಲೀಟರ್ ಹಾಲು ಉತ್ಪಾದಿಸುತ್ತವೆ. ಮೂರು ಹಸುಗಳು ಏಕಕಾಲದಲ್ಲಿ ಹಾಲು ನೀಡಿದರೆ, ನೀವು ಪ್ರತಿದಿನ 30-35 ಲೀಟರ್ ಹಾಲು ಮಾರಾಟ ಮಾಡಬಹುದು. ಇದರಿಂದ ದಿನಕ್ಕೆ ಸರಾಸರಿ 2,000 ರೂ. ಗಳಿಸಬಹುದು. ಮತ್ತು ಮಾಸಿಕ 60,000 ರೂ. ಆದಾಯ ಗಳಿಸಬಹುದು.

ಹೈನುಗಾರಿಕೆಯಲ್ಲಿ ಲಾಭ ಗಳಿಸುವುದು ಹೇಗೆ?

ಹೈನುಗಾರಿಕೆಯ ಆದಾಯವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ, ಕೇವಲ ಹಾಲು ಮಾರಾಟ ಮಾಡಿದರೆ ಸಾಲದು. ಹಾಲಿನಿಂದ ಸಂಸ್ಕರಿಸಿ ತುಪ್ಪ, ಮಜ್ಜಿಗೆ, ಬೆಣ್ಣೆ ಮತ್ತು ಖೋಯಾ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡಿ. ಇತ್ತೀಚಿನ ದಿನಗಳಲ್ಲಿ ಡೈರಿ ಉತ್ಪನ್ನಗಳು ಹೆಚ್ಚಾಗಿ ಕಲಬೆರಕೆಯಾಗುತ್ತಿವೆ. ಹೀಗಿರುವಾಗ ನೀವು ಶುದ್ಧ, ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಿರಿ. ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನೀವು ಸಾಮಾಜಿಕ ಜಾಲತಾಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು.

ಅಲ್ಲದೆ ಹಸುವಿನ ಸಗಣಿಯಿಂದ ಸಾವಯವ ಗೊಬ್ಬರವನ್ನು ತಯಾರಿಸಬಹುದು. ಇದನ್ನು ಮಾರುಕಟ್ಟೆಯಲ್ಲೂ ಮಾರಾಟ ಮಾಡಬಹುದು. ಅನೇಕ ಪ್ರದೇಶಗಳಲ್ಲಿ ಹಸುವಿನ ಸಗಣಿಗಳಿಗೆ ಉತ್ತಮ ಬೇಡಿಕೆಯಿದೆ. ನೀವು ಹಸುವಿನ ಗೊಬ್ಬರವನ್ನು ಮಾರಾಟ ಮಾಡುವ ಮೂಲಕವು ಉತ್ತಮ ಆದಾಯವನ್ನು ಗಳಿಸಬಹುದು.

ಇದನ್ನೂ ಓದಿ: ದಾಸವಾಳ ಹೂವಿನಿಂದ ತಯಾರಿಸಿದ ಈ ನ್ಯಾಚುರಲ್‌ ಶಾಂಪೂ ಕೂದಲಿನ ಹೊಳಪನ್ನು ಹೆಚ್ಚಿಸಲು ಸಹಕಾರಿ

ಈ ವಿಷಯಗಳ ಬಗ್ಗೆಯೂ ಗಮನ ಹರಿಸಿ:

  • ಹಾಲುಣಿಸುವ ಹಸು, ಚಿಕ್ಕ ಕರುಗಳು ಮತ್ತು ದುರ್ಬಲ ಪ್ರಾಣಿಗಳಿಗೆ ವಿಭಿನ್ನ ಅಗತ್ಯತೆಗಳಿರುತ್ತವೆ. ಆದ್ದರಿಂದ, ಎಲ್ಲಾ ಹಸುಗಳಿಗೆ ಒಂದೇ ಪ್ರಮಾಣದ ಆಹಾರವನ್ನು ಒದಗಿಸುವುದು ಸೂಕ್ತವಲ್ಲ. ಅವುಗಳ ವಯಸ್ಸು, ತೂಕ ಮತ್ತು ಹಾಲಿನ ಉತ್ಪಾದನೆಯ ಆಧಾರದ ಮೇಲೆ ಅವುಗಳ ಆಹಾರವನ್ನು ನಿರ್ಧರಿಸಬೇಕು. ಹಸಿರು ಮೇವು, ಒಣ ಮೇವು ಮತ್ತು ಅಗತ್ಯ ಪೋಷಕಾಂಶಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಸಾಕಷ್ಟು ಪ್ರಮಾಣದ ಶುದ್ಧ ನೀರನ್ನು ಸಹ ನೀಡಬೇಕು.
  • ಕೊಟ್ಟಿಗೆ ಆವರಣಗಳು ನಿರಂತರವಾಗಿ ನೀರು ಮತ್ತು ಕೊಳಕಿನಿಂದ ತುಂಬಿರುತ್ತವೆ. ನಿಯಮಿತವಾಗಿ ಸ್ವಚ್ಛಗೊಳಿಸಿದ ನಂತರವೂ, ವಿವಿಧ ಕಾಲೋಚಿತ ಮತ್ತು ಸಾಂಕ್ರಾಮಿಕ ರೋಗಗಳ ಅಪಾಯವಿರುತ್ತದೆ. ಈ ರೋಗಗಳನ್ನು ತಡೆಗಟ್ಟಲು ಹಾಗೂ ಕಾಲು ಬಾಯಿ ರೋಗ ಮತ್ತು ಆಂಥ್ರಾಕ್ಸ್‌ನಂತಹ ಸೋಂಕುಗಳನ್ನು ತಡೆಗಟ್ಟಲು ಕಾಲ ಕಾಲಕ್ಕೆ ಹಸು, ಎಮ್ಮೆಗಳಿಗೆ ಲಸಿಕೆ ಹಾಕಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Thu, 26 November 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More