AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಕ್ಯಾಬ್, ರ್ಯಾಪಿಡೋ ಚಾಲಕರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ 4 ಜನರ ಗ್ಯಾಂಗ್ ಲಾಕ್

ಬೆಂಗಳೂರಿನಲ್ಲಿ ಕ್ಯಾಬ್, ರಾಪಿಡೋ ಚಾಲಕರನ್ನು ಗುರಿಯಾಗಿಸಿ ರಾತ್ರಿ ವೇಳೆ ಸುಲಿಗೆ ಮಾಡುತ್ತಿದ್ದ ಮಾದಕ ವ್ಯಸನಿಗಳ ಗ್ಯಾಂಗ್ ಅನ್ನು ವೈಟ್‌ಫೀಲ್ಡ್ ಪೊಲೀಸರು ಸಿನಿಮೀಯವಾಗಿ ಬಂಧಿಸಿದ್ದಾರೆ. 3 ತಿಂಗಳಲ್ಲಿ 30ಕ್ಕೂ ಹೆಚ್ಚು ಸುಲಿಗೆ ನಡೆಸಿದ್ದ ಈ ನಾಲ್ವರು ಆರೋಪಿಗಳು ಡ್ರಗ್ಸ್ ಖರೀದಿಗೆ ಹಣ ಹೊಂದಿಸಲು ಕೃತ್ಯ ಎಸಗಿದ್ದರು. ಬಾಡಿಗೆ ಕಾರು ಬೆನ್ನಟ್ಟಿ ತಾಂತ್ರಿಕವಾಗಿ ನಿಲ್ಲಿಸಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದರು. ಇನ್ನೊಂದು ಪ್ರತ್ಯೇಕ ಘಟನೆ ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ. ಮಹಿಳೆಯ ಮೊಬೈಲ್​​​ ಕಳ್ಳತನ ಮಾಡಲು ಯತ್ನ ಮಾಡಿರುವ ಘಟನೆ.

ಬೆಂಗಳೂರಿನಲ್ಲಿ ಕ್ಯಾಬ್, ರ್ಯಾಪಿಡೋ ಚಾಲಕರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ 4 ಜನರ ಗ್ಯಾಂಗ್ ಲಾಕ್
ನಾಲ್ವರು ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು Image Credit source: Tv9 kannada
ಶಿವಪ್ರಸಾದ್​ ಬಿ.
| Edited By: |

Updated on: Nov 26, 2026 | 11:36 AM

Share

ಬೆಂಗಳೂರು, ನ.26: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕ್ಯಾಬ್ ಹಾಗೂ ರ್ಯಾಪಿಡೋ ಬೈಕ್ ಚಾಲಕರನ್ನೇ ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳ ಗ್ಯಾಂಗ್ ಅನ್ನು ವೈಟ್‌ಫೀಲ್ಡ್ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನ ಗಾಂಧಿಪುರ ಹಾಗೂ ವಿಜಯನಗರ ನಿವಾಸಿಗಳಾದ ಮನೋಜ್, ಪ್ರೀತಮ್ ಪ್ರಕಾಶ್, ಸಯ್ಯದ್ ಶಫಿ ಮತ್ತು ಅಖಿಲೇಶ್ ಬಂಧಿತ ಆರೋಪಿಗಳು.

ಪೊಲೀಸರು ಆರೋಪಿಗಳನ್ನು ಲಾಕ್​​ ಮಾಡಿದ್ದೇ ರೋಚಕ:

ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ನಿರ್ಜನ ಪ್ರದೇಶದಲ್ಲಿ ಸಾಗುತ್ತಿದ್ದ ಮೊಹಮ್ಮದ್ ನಿಸಾರ್ ಎಂಬ ರ್ಯಾಪಿಡೋ ಬೈಕ್ ಚಾಲಕನನ್ನು ವ್ಯಾಗನರ್ ಕಾರಿನಲ್ಲಿ ಬಂದ ಆರೋಪಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಬಳಿಕ ಚಾಲಕನ ಮೊಬೈಲ್‌ನಿಂದ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದರು. ಈ ಕುರಿತು ದೂರು ದಾಖಲಾಗುತ್ತಿದ್ದಂತೆಯೇ ವೈಟ್‌ಫೀಲ್ಡ್ ಡಿಸಿಪಿ ಹರಿಬಾಬು ನೇತೃತ್ವದಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದರು.

ಆರೋಪಿಗಳು ಬಳಸಿದ್ದ ರೆಂಟಲ್ ಅಗ್ರಿಗೇಟರ್ ಕಾರಿನ ಮಾಹಿತಿ ಕಲೆಹಾಕಿದ ಪೊಲೀಸರು, ಸುಮಾರು 2 ರಿಂದ 3 ಕಿಲೋಮೀಟರ್ ದೂರ ಕಾರನ್ನು ಬೆನ್ನಟ್ಟಿದರು. ಆರೋಪಿಗಳು ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ರೆಂಟಲ್ ಕಂಪನಿಯ ನೆರವಿನಿಂದ ತಾಂತ್ರಿಕವಾಗಿ ಕಾರಿನ ಎಂಜಿನ್ ಆಫ್ ಮಾಡಿಸಿದರು. ಕಾರು ನಿಂತ ತಕ್ಷಣ ಎಂಜಿನ್ ಸರಿಪಡಿಸಲು ಆರೋಪಿಗಳು ಕೆಳಗಿಳಿದಾಗ ಪೊಲೀಸರು ಸುತ್ತುವರಿದು ಮೂವರನ್ನು ಸ್ಥಳದಲ್ಲೇ ಬಂಧಿಸಿದರು. ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನೂ ಬಳಿಕ ಬಂಧಿಸಲಾಗಿದೆ.

ಬಿಕಾಂ ಪದವೀಧರ, ಟ್ಯಾಟೂ ಆರ್ಟಿಸ್ಟ್ ಗ್ಯಾಂಗ್; 3 ತಿಂಗಳಲ್ಲಿ 30 ಸುಲಿಗೆ

ಬಂಧಿತ ನಾಲ್ವರೂ ಮಾದಕ ವ್ಯಸನಿಗಳಾಗಿದ್ದು, ಡ್ರಗ್ಸ್ ಖರೀದಿಸಲು ಹಣ ಹೊಂದಿಸಲು ಈ ಕೃತ್ಯ ಎಸಗುತ್ತಿದ್ದರು. ಸುಲಿಗೆ ಮಾಡಿದ ಹಣವನ್ನು ನೇರವಾಗಿ ಶಂಕಿತ ಡ್ರಗ್ ಪೆಡ್ಲರ್ ಖಾತೆಗೆ ವರ್ಗಾವಣೆ ಮಾಡಿಸುತ್ತಿದ್ದ ಆಘಾತಕಾರಿ ಅಂಶ ತನಿಖೆಯಲ್ಲಿ ಬಯಲಾಗಿದೆ. ಪ್ರಮುಖ ಆರೋಪಿ ಮನೋಜ್ ಯಾವ ಚಾಲಕರನ್ನು ಟಾರ್ಗೆಟ್ ಮಾಡಬೇಕು ಮತ್ತು ಎಷ್ಟು ಹಣ ಸುಲಿಗೆ ಮಾಡಬೇಕು ಎಂದು ಸ್ಕೆಚ್ ಹಾಕುತ್ತಿದ್ದ. ಪ್ರೀತಮ್ ಪ್ರಕಾಶ್ ಬಿಕಾಂ ಪದವೀಧರನಾಗಿದ್ದು ಮನೋಜ್ ಸಹಚರನಾಗಿದ್ದರೆ, ಸಯ್ಯದ್ ಶಫಿ ಕ್ಯಾಬ್ ಡ್ರೈವರ್ ಹಾಗೂ ಅಖಿಲೇಶ್ ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಆಟೋದಲ್ಲಿ ಸುಲಿಗೆ ಮಾಡುತ್ತಿದ್ದ ಇವರು, ಬಳಿಕ ಬಾಡಿಗೆ ವ್ಯಾಗನರ್ ಕಾರು ಬಳಸತೊಡಗಿದ್ದರು. ಕಳೆದ ಮೂರು ತಿಂಗಳಲ್ಲಿ ಸುಮಾರು 30 ಸುಲಿಗೆ ನಡೆಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದು, ಪೊಲೀಸರು ಈಗಾಗಲೇ 11 ಘಟನೆಗಳನ್ನು ಪತ್ತೆಹಚ್ಚಿ ತಾಳೆ ಹಾಕಿದ್ದಾರೆ. ಚಿಕ್ಕ ಮೊತ್ತ ಕಳೆದುಕೊಂಡವರು ದೂರು ನೀಡಲು ಹಿಂದೇಟು ಹಾಕಿದ್ದರಿಂದ ಸಂತ್ರಸ್ತರನ್ನು ಹುಡುಕಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: 26/11 ಮಾತ್ರವಲ್ಲ, ಮುಂಬೈ ಕಂಡ ಭೀಕರ ಉಗ್ರ ದಾಳಿಗಳಿವು

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ನಗರ ಪೂರ್ವ ವಲಯ ಕಮಿಷನರ್ ಡಾ. ಹರ್ಷ ಪಿ.ಎಸ್ ಮಹತ್ವದ ಹೇಳಿಕೆ ನೀಡಿದ್ದಾರೆ. “ಬೆಂಗಳೂರಿನಲ್ಲಿ ಸಂಘಟಿತ ಅಪರಾಧಗಳನ್ನು ಮಟ್ಟಹಾಕಲು ಮುಖ್ಯ ಆಯುಕ್ತರು ಸ್ಪಷ್ಟ ಸೂಚನೆ ನೀಡಿದ್ದಾರೆ. ಪೂರ್ವ ವಲಯದ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಗಂಭೀರ ಹಲ್ಲೆ ಮಾಡದೆ ಸಣ್ಣಮೊತ್ತದ ಸುಲಿಗೆ ನಡೆಸುವ ಗ್ಯಾಂಗ್‌ಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ವೈಜ್ಞಾನಿಕ ಸಾಕ್ಷ್ಯಗಳೊಂದಿಗೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಹಾಗೂ ಡ್ರಗ್ ಪೆಡ್ಲರ್ ಜಾಲವನ್ನು ಭೇದಿಸಲು ಕಾರ್ಯಾಚರಣೆ ಮುಂದುವರಿದಿದೆ. ಸುಲಿಗೆಗೆ ಒಳಗಾದ ಸಂತ್ರಸ್ತರು ಭಯಪಡದೆ ನೇರವಾಗಿ ಠಾಣೆಗೆ ಬಂದು ದೂರು ನೀಡಬೇಕು; ಅವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು.” ಎಂದು ಹೇಳಿದ್ದಾರೆ.

ಒಂಟಿ ಮಹಿಳೆ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಮೊಬೈಲ್ ಸುಲಿಗೆಗೆ ಯತ್ನ: ಪ್ರತ್ಯೇಕ ಘಟನೆ

ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಬಳಿಯ ಸ್ಕೈವಾಕ್ ಹತ್ತಿರ ಒಂಟಿ ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಮೊಬೈಲ್ ಸುಲಿಗೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಕೆ.ಆರ್. ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಬು ಬಂಧಿತ ಆರೋಪಿಯಾಗಿದ್ದಾನೆ. ಓಲ್ಡ್ ಮದ್ರಾಸ್ ರಸ್ತೆಯ ಮೇಡಹಳ್ಳಿ ಬ್ರಿಡ್ಜ್ ಸಮೀಪದ ಸ್ಕೈವಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿದ ಆರೋಪಿ ಬಾಬು, ಆಕೆಯ ಕೈಯಲ್ಲಿದ್ದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದರಿಂದ ಆಕ್ರೋಶಗೊಂಡ ಆರೋಪಿ, ಕೈಗೆ ಸಿಕ್ಕ ಕಲ್ಲಿನಿಂದ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ತಕ್ಷಣ ಸ್ಥಳದಲ್ಲಿದ್ದ ಇಬ್ಬರು ಯುವಕರು ತಕ್ಷಣವೇ ಧಾವಿಸಿ ಬಂದು ಮಹಿಳೆಗೆ ನೆರವಾಗಿದ್ದಾರೆ. ಘಟನೆ ಸಂಬಂಧ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕೆ.ಆರ್. ಪುರ ಪೊಲೀಸರು ಆರೋಪಿ ಬಾಬುನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More