AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : 200 ಹೊಸ ಮಿನಿ ಬಸ್ ಖರೀದಿಗೆ ಬಿಎಂಟಿಸಿ ಟೆಂಡರ್; ಕಂಡಕ್ಟರ್‌ಲೆಸ್ ವ್ಯವಸ್ಥೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 200 ಹೊಸ ಮಿನಿ ಬಸ್‌ಗಳನ್ನು ಖರೀದಿಸುತ್ತಿದೆ. ಈ ಬಸ್‌ಗಳು ನಗರದ ಕಿರಿದಾದ ರಸ್ತೆಗಳಲ್ಲಿ ಸಂಚರಿಸಿ, ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಲಿವೆ. ಕಂಡಕ್ಟರ್ ರಹಿತ ಈ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಸೌಲಭ್ಯವಿದ್ದು, ಪ್ರಯಾಣಿಕರಿಗೆ ಸುಲಭ ಮತ್ತು ವೇಗದ ಪ್ರಯಾಣಕ್ಕೆ ಅನುಕೂಲವಾಗಲಿದೆ. ಇದು ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡಲಿದೆ.

ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್ : 200 ಹೊಸ ಮಿನಿ ಬಸ್ ಖರೀದಿಗೆ ಬಿಎಂಟಿಸಿ ಟೆಂಡರ್; ಕಂಡಕ್ಟರ್‌ಲೆಸ್ ವ್ಯವಸ್ಥೆ
ಸಾಂದರ್ಭಿಕ ಚಿತ್ರ Image Credit source: Google
ಕಿರಣ್​ ಸೂರ್ಯ
| Edited By: |

Updated on: Nov 26, 2026 | 9:29 AM

Share

ಬೆಂಗಳೂರು, ನ.26: ಬೆಂಗಳೂರು ಮಹಾನಗರದ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿಸುದ್ದಿ ನೀಡಿದ್ದು, 200 ಹೊಸ ಮಿನಿ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿದೆ. ನಗರದ ಕಿರಿದಾದ ರಸ್ತೆಗಳು, ಜನನಿಬಿಡ ಬಡಾವಣೆಗಳಲ್ಲಿ ಸಂಚಾರ ಸುಗಮಗೊಳಿಸುವುದು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಲ್ಪಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

7 ಮೀಟರ್ ಮತ್ತು 11 ಮೀಟರ್‌ನ 200 BS-VI ಬಸ್‌ಗಳು; ಕಂಡಕ್ಟರ್‌ಲೆಸ್ ವ್ಯವಸ್ಥೆ:

ಒಟ್ಟು 200 ನಾನ್-ಎಸಿ BS-VI ಡೀಸೆಲ್ ಮಿನಿ ಬಸ್‌ಗಳ ಖರೀದಿಗೆ ಬಿಎಂಟಿಸಿ ಬಿಡ್ಡಿಂಗ್ ಆಹ್ವಾನಿಸಿದೆ. ಇದರಲ್ಲಿ ಕಿರಿದಾದ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ 7 ಮೀಟರ್ ಉದ್ದದ 100 ಮಿನಿ ಬಸ್‌ಗಳು ಹಾಗೂ 11 ಮೀಟರ್ ಉದ್ದದ 100 ಬಸ್‌ಗಳು ಸೇರಿವೆ. ಟೆಂಡರ್ ಪ್ರಕ್ರಿಯೆಯಲ್ಲಿ ಬಸ್‌ಗಳ ವಿನ್ಯಾಸ, ಆಸನ ವ್ಯವಸ್ಥೆ, ಟೈರ್ ವಿನ್ಯಾಸ ಹಾಗೂ ಬಾಗಿಲುಗಳನ್ನು ಎಲ್ಲಿ ಅಳವಡಿಸಬೇಕು ಎಂಬುದರ ಕುರಿತು ವಿನ್ಯಾಸ ಕೋರಲಾಗಿದೆ. ವಿನ್ಯಾಸವನ್ನು ಪರಿಶೀಲಿಸಿ ಅಂತಿಮಗೊಳಿಸಿದ ನಂತರ ಟೆಂಡರ್ ಖరಾರಾಗಲಿದೆ. ಎಲ್ಲಾ 200 ಬಸ್‌ಗಳು ಕಂಡಕ್ಟರ್ ರಹಿತ (Conductor-less) ಹಾಗೂ ನಾನ್-ಎಸಿ ವ್ಯವಸ್ಥೆಯನ್ನು ಹೊಂದಿರಲಿವೆ.

ಮೆಟ್ರೋ ಫೀಡರ್ ಸೇವೆ; ಬಾಗಿಲ ಬಳಿಯೇ ‘ಟ್ಯಾಪ್ ಟು ಪೇ’ ಡಿಜಿಟಲ್ ಪಾವತಿ:

ಈ ಮಿನಿ ಬಸ್‌ಗಳನ್ನು ಪ್ರಮುಖವಾಗಿ ಮೆಟ್ರೋ ಫೀಡರ್‌ಗಳಾಗಿ ಬಳಸಲು ನಿರ್ಧರಿಸಲಾಗಿದೆ. ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರ ಪಿಕ್ ಅಪ್ ಮತ್ತು ಡ್ರಾಪ್‌ಗೆ ಅನುಕೂಲ ಕಲ್ಪಿಸುವುದರ ಜೊತೆಗೆ, ಮೆಟ್ರೋ ಕೊನೆಯ ನಿಲ್ದಾಣಗಳಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ. ಸಾಮಾನ್ಯ ದೊಡ್ಡ ಬಿಎಂಟಿಸಿ ಬಸ್‌ಗಳು ಸಂಚರಿಸದ ಚಿಕ್ಕ ರಸ್ತೆಗಳು ಮತ್ತು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಇವು ಕಾರ್ಯನಿರ್ವಹಿಸಲಿವೆ.

ಕಂಡಕ್ಟರ್‌ಲೆಸ್ ಬಸ್‌ಗಳಲ್ಲಿ ಡಿಜಿಟಲ್ ಟಿಕೆಟ್ ಪರಿಶೀಲನಾ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಪ್ರಯಾಣಿಕರು ಬಸ್‌ನ ಬಾಗಿಲಿನ ಬಳಿಯೇ ಇರುವ ಟ್ಯಾಪ್ ಟು ಪೇ ಯಂತ್ರಗಳ ಮೂಲಕ ಗೂಗಲ್ ಪೇ , ಫೋನ್ ಪೇ , ಪೇಟಿಎಂ ಹಾಗೂ NCMC ಕಾರ್ಡ್ ಬಳಸಿ ಸುಲಭವಾಗಿ ಪ್ರಯಾಣ ದರ ಪಾವತಿಸಲು ಅವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಹೊಸ ಮಿನಿ ಬಸ್‌ಗಳ ತಾಂತ್ರಿಕ ಮತ್ತು ವಿನ್ಯಾಸ ಹೇಗಿದೆ?

ನಗರದ ಕಿರಿದಾದ ರಸ್ತೆಗಳು, ಹಳೆಯ ಬಡಾವಣೆಗಳು ಮತ್ತು ತಿರುವುಗಳು ಹೆಚ್ಚಿರುವ ಮಾರ್ಗಗಳಲ್ಲಿ 7 ಮೀಟರ್ ಮಿನಿ ಬಸ್‌ಗಳು ಸುಲಭವಾಗಿ ಸಂಚರಿಸಲು ನೆರವಾಗುತ್ತವೆ. ಸ್ವಲ್ಪ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಇರುವ ಮೆಟ್ರೋ ಫೀಡರ್ ಮಾರ್ಗಗಳು ಮತ್ತು ಮಧ್ಯಮ ಗಾತ್ರದ ರಸ್ತೆಗಳಿಗೆ 11 ಮೀಟರ್ ಬಸ್‌ಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಕಂಡಕ್ಟರ್ ರಹಿತ ಬಸ್‌ಗಳಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ಸುಗಮವಾಗಿರಬೇಕು. ಹೀಗಾಗಿ ಬಾಗಿಲಿನ ಸ್ಥಳ, ಮೆಟ್ಟಿಲುಗಳ ಎತ್ತರ, ಆಸನಗಳ ನಡುವಿನ ಜಾಗ ಮತ್ತು ನಿಂತು ಪ್ರಯಾಣಿಸುವವರಿಗೆ ಹಿಡಿಕೆಗಳ ವಿನ್ಯಾಸವನ್ನು ಪ್ರಯಾಣಿಕರ ಸುರಕ್ಷತೆ ಹಾಗೂ ವೇಗದ ಬೋರ್ಡಿಂಗ್ ಆಧಾರದ ಮೇಲೆ ಅಂತಿಮಗೊಳಿಸಲಾಗುತ್ತದೆ. ನಿರ್ವಹಣಾ ವೆಚ್ಚ, ದೈನಂದಿನ ಕಾರ್ಯಾಚರಣೆಯ ವಿಶ್ವಾಸಾರ್ಹತೆ ಮತ್ತು ಕಡಿಮೆ ದರದ ಟಿಕೆಟ್ ನಿಗದಿಗೆ ಪೂರಕವಾಗಿ ನಾನ್-ಎಸಿ BS-VI ಡೀಸೆಲ್ ಮಾದರಿಗೆ ಒತ್ತು ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರದಿಂದ ಆಶಾ ಕಾರ್ಯಕರ್ತೆಯರಿಗೆ ಗುಡ್​​​​ ನ್ಯೂಸ್​​​ ಸಿಗುವ ಸಾಧ್ಯತೆ: ಗೌರವ ಧನ ಹೆಚ್ಚಳಕ್ಕೆ ಪ್ರಸ್ತಾವನೆ

ಬೆಂಗಳೂರಿನ ಲಾಸ್ಟ್ ಮೈಲ್ ಕನೆಕ್ಟಿವಿಟಿಗೆ ಇದರ ಮಹತ್ವವೇನು?

ನಮ್ಮ ಮೆಟ್ರೋದ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಆರಂಭವಾಗುತ್ತಿರುವ ಮಾರ್ಗಗಳ ನಿಲ್ದಾಣಗಳಿಂದ ಐಟಿ ಪಾರ್ಕ್‌ಗಳು, ವಸತಿ ಬಡಾವಣೆಗಳು, ಮಾರುಕಟ್ಟೆ ಮತ್ತು ಆಸ್ಪತ್ರೆಗಳಿಗೆ ನೇರ ಸಂಪರ್ಕ ಕಲ್ಪಿಸಲು ಮಿನಿ ಬಸ್‌ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಮೆಟ್ರೋ ಇಳಿದ ಬಳಿಕ ಮನೆ ಅಥವಾ ಕಚೇರಿಗೆ ಹೋಗಲು ಆಟೋ ಅಥವಾ ಸ್ವಂತ ದ್ವಿಚಕ್ರ/ಕಾರು ಬಳಸುವವರ ಸಂಖ್ಯೆಯನ್ನು ಕಡಿಮೆ ಮಾಡಲು ವಿಶ್ವಾಸಾರ್ಹ, ಕಡಿಮೆ ದರದ ಫೀಡರ್ ಬಸ್ ಸೇವೆ ಅತ್ಯಗತ್ಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More