ವಾಲ್ಮೀಕಿ ನಿಗಮದ ಹಗರಣ: ಸಿಐಡಿ ಕ್ಲೀನ್ ಚಿಟ್ ಕೊಟ್ಟರೂ ನಾಗೆಂದ್ರಗೆ ತಪ್ಪದ ಸಂಕಷ್ಟ
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಆದಾಗ್ಯೂ, ಇಡಿ ಮತ್ತು ಸಿಬಿಐ ತನಿಖೆ ಬಾಕಿಯಿರುವುದರಿಂದ ಅವರಿಗೆ ಸಂಕಷ್ಟ ತಪ್ಪಿಲ್ಲ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಿಚಾರಣೆಗಾಗಿ CBI ನೋಟೀಸ್ ನೀಡುತ್ತಲೇ ಬಂದಿದೆ. ಹೀಗಾಗಿ ನಾಗೇಂದ್ರಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗೋದು ತಿಳಿದುಕೊಂಡಂತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಬಳ್ಳಾರಿ, ನವೆಂಬರ್ 26: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್ ನೀಡಿದೆ. ಹೀಗಿದ್ದರೂ ಪ್ರಕರಣ ಸಂಬಂಧ ನಾಗೇಂದ್ರಗೆ ಸಂಕಷ್ಟ ಮಾತ್ರ ತಪ್ಪಿಲ್ಲ. ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ತನಿಖೆ ನಡೆಯುತ್ತಿದ್ದು, ಅವು ಇನ್ನೂ ಕ್ಲೀನ್ ಚಿಟ್ ನೀಡಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಿಚಾರಣೆಗಾಗಿ CBI ನೋಟೀಸ್ ನೀಡುತ್ತಲೇ ಬಂದಿದೆ. ಹೀಗಾಗಿ ನಾಗೇಂದ್ರಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗೋದು ಅಷ್ಟು ಸುಲಭವಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಹಗರಣದ ಆರೋಪ ಹೊತ್ತಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಬಸವರಾಜ್ ದದ್ದಲ್ ಅವರನ್ನು ಈ ಪ್ರಕರಣದ ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ನಿಗಮದ ಎಂಡಿ ಪರುಶರಾಮ್, ನೆಕ್ಕುಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮ ಹಗರಣದ ಪ್ರಮುಖ ಆರೋಪಿಗಳಾಗಿದ್ದು, ನಿಗಮದ ಹಣವನ್ನು ನಾಗೇಂದ್ರ ಎಲ್ಲೂ ದುರುಪಯೋಗ ಮಾಡಿಕೊಂಡಿಲ್ಲ. ಎಂಡಿ ಜೊತೆ ನೆಕ್ಕುಂಟಿ ನಾಗರಾಜ್ ಡೀಲ್ ಮಾಡಿದ್ದ. ದುಪ್ಪಟ್ಟು ಮಾಡಿಕೊಡೊದಾಗಿ ಹಣ ಪಡೆದಿದ್ದ. ಇದ್ಯಾವುದೂ ಸಚಿವರಾಗಿದ್ದ ನಾಗೇಂದ್ರ ಗಮನಕ್ಕೆ ಬಂದಿಲ್ಲ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ CID ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ ಕೇಸ್ : ಮಾಜಿ ಸಚಿವ ನಾಗೇಂದ್ರಗೆ ಸಿಐಡಿ ಕ್ಲೀನ್ ಚಿಟ್
ಪ್ರಕರಣದ ಹಿನ್ನೆಲೆ
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಪತ್ತೆಯಾಗಿದ್ದ ಅವರ ಡೆತ್ ನೋಟ್ನಲ್ಲಿ ಬಹುಕೋಟಿ ಹಗರಣದ ವಿಚಾರ ಉಲ್ಲೇಖವಾಗಿರುವುದು ಕಂಡುಬಂದಿತ್ತು. ಈ ಬೆನ್ನಲ್ಲೇ ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್, ಮೆಸೇಜ್ ಬಂದಿಲ್ಲ. ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಿಗಮದ ಹಣ ದುರ್ಬಳಕೆ ಮತ್ತು ಚುನಾವಣಾ ಉದ್ದೇಶಕ್ಕೆ ಬಳಕೆ ಆರೋಪಗಳ ನಡುವೆ ವಿರೋಧ ಪಕ್ಷಗಳಿಂದ ತೀವ್ರ ಪ್ರತಿಭಟನೆಗಳು ನಡೆದು, ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ನೀಡಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:23 am, Thu, 26 November 26