ಚಿಕ್ಕಮಗಳೂರು ಮಂದಿಗೆ ತಪ್ಪದ ಕಾಡಾನೆ ಕಾಟ: ಜನವಸತಿ ಪ್ರದೇಶದಲ್ಲೇ ಕಾಣಿಸಿಕೊಂಡ ಗಜಪಡೆ
ಚಿಕ್ಕಮಗಳೂರು ಜಿಲ್ಲೆಯ ಜನವಸತಿ ಪ್ರದೇಶ ಮತ್ತು ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, 50ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇತ್ತ ಚಾಮರಾಜನಗರದ ಗುಂಡ್ಲುಪೇಟೆಯಲ್ಲೂ ಒಂಟಿ ಸಲಗದ ದಾಳಿಗೆ ಬೆಳೆ ಸಂಪೂರ್ಣ ನಾಶವಾಗಿದೆ. ಕಾಡಾನೆ ದಾಳಿಯಿಂದ ಜೀವ ಹಾನಿಯಾದ್ರೆ ಅರಣ್ಯ ಸಿಬ್ಬಂದಿಯೆ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು/ಚಾಮರಾಜನಗರ, ನವೆಂಬರ್ 26: ಹಾಸನದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಸ್ಥಳಾಂತರ ವಿರೋಧಿಸಿ ತೀವ್ರ ಪ್ರತಿಭಟನೆ, ಆಕ್ರೋಶದ ನಡುವೆಯೇ ಕಾಫಿನಾಡಿನಲ್ಲಿ ಆನೆಗಳು ಮತ್ತಷ್ಟು ಆತಂಕ ಸೃಷ್ಟಿಸಿವೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ರಾವೂರು ಗ್ರಾಮದ ಬಳಿ ಗಜಪಡೆ ಕಾಣಿಸಿಕೊಂಡಿದ್ದು, ಭದ್ರಾ ಅಭಯಾರಣ್ಯ ಸಮೀಪದ ಜನವಸತಿ ಪ್ರದೇಶದ ಸಮೀಪದಲ್ಲೇ ಕಾಣಿಸಿಕೊಂಡ ಕಾಡಾನೆ ಹಿಂಡು ಪ್ರತ್ಯಕ್ಷ್ಯವಾಗಿದ್ದು, ಅವನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಕಾಫಿತೋಟದಲ್ಲಿ ಬೀಡುಬಿಟ್ಟ 39 ಕಾಡಾನೆಗಳಿ
ಮತ್ತೊಂದೆಡೆ ಬೀಟಮ್ಮ, ಭುವನೇಶ್ವರಿ, ಓಲ್ಡ್ ಬೆಲ್ಟ್ ಕಾಡಾನೆಗಳ ಗ್ಯಾಂಗ್ ಕೂಡ ಕಾಣಿಸಿಕೊಂಡಿದ್ದು, ನಾಲ್ಕು ಗುಂಪುಗಳಾಗಿ ಹಿಂಡು ಚದುರಿವೆ. ಮಾಕೋನಹಳ್ಳಿ ಬಳಿ ಒಂದನೇ ಗುಂಪು ಬೀಡುಬಿಟ್ಟಿದ್ದರೆ, ಎರಡನೇ ಹಿಂಡು ಕಾರ್ ಬೈಲು ಗ್ರಾಮದ ಬಳಿ ಓಡಾಟ ನಡೆಸಿವೆ. ಕಸ್ಕೆಬೈಲು ಗ್ರಾಮದ ಬಳಿ 3ನೇ ಕಾಡಾನೆ ಹಿಂಡು ಇದ್ದರೆ, 4ನೇ ಕಾಡಾನೆ ಹಿಂಡು ಕಲ್ಲುಗುಡ್ಡ ಗ್ರಾಮದ ಬಳಿ ಬೀಡುಬಿಟ್ಟಿವೆ. ಈ ನಾಲ್ಕೂ ಹಿಂಡುಗಳಲ್ಲಿ ಒಟ್ಟು 39 ಕಾಡಾನೆಗಳಿವೆ ಎನ್ನಲಾಗಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಇವುಗಳಿಂದ 50ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿವೆ. 4 ದಿನಗಳಿಂದ ಸಿಕ್ಕ ಸಿಕ್ಕ ಕಡೆ ಗಜಪಡೆ ಸಂಚಾರ ಮಾಡುತ್ತಿದ್ದು, ಕಾಫಿ ಕೊಯ್ಲು ಸಮಯದಲ್ಲೇ ಕಾಡಾನೆಗಳ ಸಂಚಾರ ಮತ್ತಷ್ಟು ಭೀತಿ ಸೃಷ್ಟಿಸಿದೆ. ಹೀಗಾಗಿ ಕಾಫಿತೋಟಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ: ಹಾಸನ-ಚಿಕ್ಕಮಗಳೂರು ಕಾಡಾನೆ ರಾಜಕೀಯ:ಸಚಿವ ಸ್ಥಾನ ಬಿಟ್ಟುಕೊಡ್ತೇನೆ ಎಂದ ರಾಮಲಿಂಗಾರೆಡ್ಡಿ
ಒಂಟಿ ಸಲಗದ ಆಟಾಟೋಪಕ್ಕೆ ಬೆಳೆ ಸರ್ವನಾಶ
ಇತ್ತ ಚಾಮರಾಜನಗರ ಜಿಲ್ಲೆಯಲ್ಲಿಯೂ ಮಾನವ-ಕಾಡುಪ್ರಾಣಿ ಸಂಘರ್ಷ ತೀವ್ರಗೊಂಡಿದೆ. ಗುಂಡ್ಲುಪೇಟೆ ತಾಲೂಕಿನ ಬರ್ಗಿ ಮುಕ್ತಿ ಕಾಲೋನಿಯ ಸಿದ್ದ ಶೆಟ್ಟಿ ಎಂಬವರ ಜಮೀನಿಗೆ ನುಗ್ಗಿದ ಒಂಟಿ ಸಲಗ, ಬೆಳೆಯನ್ನು ಸಂಪೂರ್ಣ ಹಾಳು ಮಾಡಿದೆ. ಕಾಡಾನೆಯನ್ನು ಓಡಿಸಲು ಅನ್ನದಾತರು ಹರಸಾಹಸಪಟ್ಟಿದ್ದು, ಸರಿಯಾದ ಟ್ರಂಚ್ ವ್ಯವಸ್ಥೆ ಹಾಗೂ ಸೋಲಾರ್ ಫೆನ್ಸಿಂಗ್ ಇಲ್ಲದೆ ಇರೋದೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ದಿನ ನಿತ್ಯ ಜೀವ ಕೈಯಲ್ಲಿ ಹಿಡಿದು ಬೆಳೆ ಕಾಪಾಡಿಕೊಳ್ಳಲು ಹೋರಾಟ ನಡೆಸಬೇಕಿದೆ. ಕಾಡಾನೆ ದಾಳಿಯಿಂದ ಜೀವ ಹಾನಿಯಾದ್ರೆ ಬಂಡೀಪುರ ಅರಣ್ಯ ಸಿಬ್ಬಂದಿಯೆ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
