AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಎಲ್ಲಾ ಮಕ್ಕಳಿಗೆ ಸಿಗಲಿವೆ 2 ಸ್ಪೇಸ್​​ಎಕ್ಸ್ ಷೇರುಗಳು; ಇಲಾನ್ ಮಸ್ಕ್​ರಿಂದ ಸಾವಿರಾರು ಕೋಟಿ ರೂ ಗಿಫ್ಟ್

ಅಮೆರಿಕದ ಎಲ್ಲಾ ಮಕ್ಕಳಿಗೆ ಸ್ಪೇಸ್​ಎಕ್ಸ್ ಷೇರು ನೀಡುವುದಾಗಿ ಇಲಾನ್ ಮಸ್ಕ್ ಪುನರುಚ್ಚರಿಸಿದ್ದಾರೆ. ಟ್ರಂಪ್ ಅಕೌಂಟ್ ತೆರೆದಿರುವ 70 ಲಕ್ಷ ಮಕ್ಕಳಿಗೆ ತಲಾ 2 ಸ್ಪೇಸ್​ಎಕ್ಸ್ ಷೇರುಗಳು ಸಿಗಲಿವೆ. ಮುಂದಿನ ತಿಂಗಳೇ (ಡಿಸೆಂಬರ್) ಸ್ಪೇಸ್​ಎಕ್ಸ್​ನಿಂದ ತಲಾ ಒಂದು ಷೇರು ಈ ಮಕ್ಕಳಿಗೆ ವರ್ಗಾವಣೆ ಆಗಲಿದೆ. 2027ರ ಜೂನ್​ನಲ್ಲಿ ಮಸ್ಕ್ ಪಾಲಿನ ಷೇರುಗಳ ಲಾಕಪ್ ಅವಧಿ ಮುಗಿದ ಬಳಿಕ ಮತ್ತೊಂದು ಷೇರು ವರ್ಗಾವಣೆ ಆಗಲಿದೆ.

ಅಮೆರಿಕದ ಎಲ್ಲಾ ಮಕ್ಕಳಿಗೆ ಸಿಗಲಿವೆ 2 ಸ್ಪೇಸ್​​ಎಕ್ಸ್ ಷೇರುಗಳು; ಇಲಾನ್ ಮಸ್ಕ್​ರಿಂದ ಸಾವಿರಾರು ಕೋಟಿ ರೂ ಗಿಫ್ಟ್
ಇಲಾನ್ ಮಸ್ಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 26, 2026 | 3:16 PM

Share

ವಾಷಿಂಗ್ಟನ್, ನವೆಂಬರ್ 26: ಅಮೆರಿಕದ ಎಲ್ಲಾ ಮಕ್ಕಳೂ ಸ್ಪೇಸ್​ಎಕ್ಸ್​ನ 2 ಷೇರುಗಳನ್ನು ಗಿಟ್ಟಿಸಲಿದ್ದಾರಂತೆ. ಇದು ಅಮೆರಿಕ ಸರ್ಕಾರದ ಕೊಡುಗೆಯಲ್ಲ. ವಿಶ್ವದ ನಂಬರ್ ಒನ್ ಶ್ರೀಮಂತನಾದ ಇಲಾನ್ ಮಸ್ಕ್ ಅವರು ಘೋಷಿಸಿರುವ ದೊಡ್ಡ ಕೊಡುಗೆ. ಅಮೆರಿಕದ ಪ್ರತೀ ಮಕ್ಕಳಿಗೂ ಸ್ಪೇಸ್​ಎಕ್ಸ್ ಸಂಸ್ಥೆಯು ತನ್ನ ಒಂದು ಷೇರನ್ನು ನೀಡಲಿದೆ. ಇದರ ಜೊತೆಗೆ ಇಲಾನ್ ಮಸ್ಕ್ ವೈಯಕ್ತಿಕವಾಗಿ ಹೊಂದಿರುವ ತಮ್ಮ ಷೇರುಗಳನ್ನು ಪ್ರತೀ ಮಗುವಿಗೂ ನೀಡಲಿದ್ದಾರೆ. ಹಾಗಂತ, ಇಲಾನ್ ಮಸ್ಕ್ ಅವರು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಪ್ರಕಟಿಸಿದ್ದಾರೆ. ಮುಂದಿನ ತಿಂಗಳೇ ಸ್ಪೇಸ್​ಎಕ್ಸ್ ಷೇರು ವರ್ಗಾವಣೆ ಆಗಲಿದೆ ಎಂದಿದ್ದಾರೆ.

‘ಅಮೆರಿಕದ ಪ್ರತೀ ಮಗುವೂ ಎರಡು ಸ್ಪೇಸ್​ಎಕ್ಸ್ ಷೇರುಗಳನ್ನು ಪಡೆಯಲಿದೆ. ಒಂದು ಷೇರು ಕಂಪನಿ ವತಿಯಿಂದ ಸಿಕ್ಕರೆ, ಮತ್ತೊಂದು ನಾನು ವೈಯಕ್ತಿಕವಾಗಿ ನೀಡುತ್ತೇನೆ’ ಎಂದು ಒಂದು ಪೋಸ್ಟ್​ನಲ್ಲಿ ಅವರು ಹೇಳಿದ್ದಾರೆ.

‘ಸ್ಪೇಸ್ ಎಕ್ಸ್ ಷೇರು ಮುಂದಿನ ತಿಂಗಳು ವರ್ಗಾವಣೆ ಆಗುತ್ತದೆ. ಮುಂದಿನ ವರ್ಷ ಜೂನ್​ನಲ್ಲಿ ನನ್ನ ಲಾಕಪ್ ಎಕ್ಸ್​ಪೈರಿ ಆದಾಗ ನನ್ನ ವೈಯಕ್ತಿಕ ಷೇರು ನೇರವಾಗಿ ವರ್ಗಾವಣೆ ಆಗಲಿದೆ’ ಎಂದು ಮಸ್ಕ್ ತಿಳಿಸಿದ್ದಾರೆ.

ಇಲಾನ್ ಮಸ್ಕ್ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಎನ್ ಚಂದ್ರಶೇಖರನ್ ಮರುನೇಮಕ ವಿರುದ್ಧ ಬಾಂಬೆ ಹೈಕೋರ್ಟ್ ಕೋರ್ಟ್ ಮೊರೆಬೀಳಲಿರುವ ಟಾಟಾ ಟ್ರಸ್ಟ್ಸ್

ಟ್ರಂಪ್ ಅಕೌಂಟ್​ನಲ್ಲಿರುವ ಮಕ್ಕಳಿಗೆ ಷೇರು ವರ್ಗಾವಣೆ ಆಗಲಿದೆ…

ಡೊನಾಲ್ಡ್ ಟ್ರಂಪ್ ಅವರು 18 ವರ್ಷದೊಳಗಿನ ಮಕ್ಕಳಿಗೆ ವಿಶೇಷ ಅಕೌಂಟ್ ತೆರೆಸುವ ಯೋಜನೆ ಜಾರಿ ಮಾಡಿದ್ದಾರೆ. ಟ್ರಂಪ್ ಅಕೌಂಟ್ ಎಂದೇ ಖ್ಯಾತವಾಗಿದೆ. ಇದೂವರೆಗೆ 7 ಕೋಟಿ ಅಪ್ರಾಪ್ತ ಮಕ್ಕಳ ಹೆಸರು ಈ ಟ್ರಂಪ್ ಅಕೌಂಟ್​ನಲ್ಲಿ ನೊಂದಣಿಯಾಗಿದೆ. ಸ್ಪೇಸ್​ಎಕ್ಸ್ ಮತ್ತು ಇಲಾನ್ ಮಸ್ಕ್ ವರ್ಗಾಯಿಸುವ ಷೇರುಗಳು ಟ್ರಂಪ್ ಅಕೌಂಟ್​ನಲ್ಲಿರುವ ಮಕ್ಕಳ ಖಾತೆಗಳಿಗೆ ನೇರವಾಗಿ ಸಿಗಬಹುದು ಎಂದು ಭಾವಿಸಲಾಗಿದೆ.

ಸ್ಪೇಸ್​ಎಕ್ಸ್ ಷೇರುಬೆಲೆ ಎಷ್ಟು? ಮಸ್ಕ್ ವ್ಯಯಿಸೋದು ಎಷ್ಟು?

ಸದ್ಯ ಸ್ಪೇಸ್​ಎಕ್ಸ್​ನ ಷೇರುಬೆಲೆ 127.44 ಡಾಲರ್ ಇದೆ. ಅಂದರೆ, ಸುಮಾರು 11,800 ರೂಪಾಯಿ ಆಸುಪಾಸಿನ ಮೌಲ್ಯದ ಷೇರು ಅದು. ಎರಡು ಸ್ಪೇಸ್​ಎಕ್ಸ್ ಶೇರುಗಳ ಮೌಲ್ಯ 254.88 ಡಾಲರ್ ಅಥವಾ 24,000 ರೂ ಆಸುಪಾಸು ಎಂದು ಭಾವಿಸಬಹುದು. 70 ಲಕ್ಷ ಮಕ್ಕಳಿಗೆ ತಲಾ ಎರಡೆರಡು ಶೇರು ನೀಡಿದರೆ 1.8 ಬಿಲಿಯನ್ ಡಾಲರ್ ಅಥವಾ 16,700 ಕೋಟಿ ರುಪಾಯಿ ಆಗಬಹುದು. ಇದು ಸ್ಪೇಸ್​ಎಕ್ಸ್ ಮತ್ತು ಮಸ್ಕ್ ಅವರು ಅಮೆರಿಕದ ಮಕ್ಕಳಿಗೆ ನೀಡಬೇಕೆಂದಿರುವ ಕೊಡುಗೆ.

ಸ್ಪೇಸ್​ಎಕ್ಸ್ ಅಧ್ಯಕ್ಷೆ ಗ್ವೈನೆ ಶಾಟ್​ವೆಲ್ ಮತ್ತು ಆಕೆಯ ಪತಿ ಇಬ್ಬರೂ ಕೂಡ ಅಮೆರಿಕದ 20 ಲಕ್ಷ ಮಕ್ಕಳಿಗೆ ಷೇರುಗಳನ್ನು ವಿತರಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಅಮೆರಿಕದ ಮಕ್ಕಳು ಕೇಳದೇ ಇದ್ದರೂ ಸ್ಪೇಸ್​ಎಕ್ಸ್ ಶೇರುಗಳ ಒಡೆಯರಾಗಲಿದ್ದಾರೆ.

ಇದನ್ನೂ ಓದಿ: ಮತ್ತೆ ಸುಂಕದ ಶಾಕ್ ಕೊಟ್ಟ ಟ್ರಂಪ್; ಭಾರತಕ್ಕೆ ಶೇ. 25, ಚೀನಾಗೆ ಶೇ. 40ರವರೆಗೆ ಟಾರಿಫ್​ ವಿಧಿಸಲು ಅಮೆರಿಕ ಪ್ರಸ್ತಾಪ

ಮಕ್ಕಳಿಗೆ ಷೇರು ನೀಡುವುದರಿಂದ ಮಸ್ಕ್ ಸಂಪತ್ತು ಎಷ್ಟು ಕರಗುತ್ತೆ?

ದೇಶದ ಎಲ್ಲಾ ಮಕ್ಕಳಿಗೆ ಷೇರು ವಿತರಿಸುವುದರಿಂದ ಆಗುವ ವೆಚ್ಚವು ಮಸ್ಕ್ ಅವರಿಗೆ ತೃಣಮಾತ್ರವೂ ಅಲ್ಲ. ವಿಶ್ವದ ಏಕೈಕ ಟ್ರಿಲಿಯನೈರ್ ಎನಿಸಿರುವ ಅವರು 642 ಕೋಟಿ ಸ್ಪೇಸ್​ಎಕ್ಸ್ ಷೇರುಗಳನ್ನು ಹೊಂದಿದ್ದಾರೆ. ಅದರಲ್ಲಿ ಶೇ. 1 ಷೇರು ಮಾತ್ರವೇ ವ್ಯಯವಾಗುವುದು.

ಸ್ಪೇಸ್​ಎಕ್ಸ್ ಷೇರುಗಳನ್ನು ಹಾಗೇ ಇಟ್ಟುಕೊಳ್ಳಿ: ಮಸ್ಕ್ ಸಲಹೆ

‘ಸೂರ್ಯನ ಶಕ್ತಿಯ ಅತ್ಯಲ್ಪ ಪ್ರಮಾಣವನ್ನಾದರೂ ಪಡೆಯಬಲ್ಲ ತಂತ್ರಜ್ಞಾನಕ್ಕಾಗಿ ಸ್ಪೇಸ್ ಎಕ್ಸ್ ಪ್ರಯತ್ನಿಸುತ್ತಿದೆ. ಬೇರೆ ಗ್ರಹಗಳಲ್ಲಿ ಜೀವ ಬೆಳೆಸಲು ಪ್ರಯತ್ನಗಳಾಗುತ್ತಿವೆ. ಸ್ಪೇಸ್​ಎಕ್ಸ್​ನ ಈ ಪ್ರಯತ್ನಗಳು ಯಶಸ್ವಿಯಾದಲ್ಲಿ ಅದರ ಮೌಲ್ಯವು ಜಾಗತಿಕ ಆರ್ಥಿಕತೆಯ ಈಗಿರುವ ಗಾತ್ರಕ್ಕಿಂತ ಲಕ್ಷ ಪಟ್ಟು ಹೆಚ್ಚು ಇರಲಿದೆ. ಈ ಗುರಿಗಳು ತೀರಾ ಕಷ್ಟ ಎನ್ನುವುದು ನಿಜವೇ ಆದರೂ ಅದನ್ನು ಸಾಧಿಸುವ ಮಾರ್ಗ ಇದೆ. ನಿಮ್ಮ ಷೇರುಗಳನ್ನು (ಸ್ಪೇಸ್​ಎಕ್ಸ್) ಇಟ್ಟುಕೊಳ್ಳುವುದು ಉತ್ತಮ ಎನ್ನುವುದು ನನ್ನ ಶಿಫಾರಸು’ ಎಂದು ಇಲಾನ್ ಮಸ್ಕ್ ಮತ್ತೊಂದು ಎಕ್ಸ್ ಪೋಸ್ಟ್​ನಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Thu, 26 November 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More