AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನ ಮೈಯಿಂದ ಕೆಟ್ಟ ವಾಸನೆ ಬರ್ತಿದೆ: ಆಕ್ಸ್‌ಫರ್ಡ್‌ನಲ್ಲಿ ಜನಾಂಗೀಯ ನಿಂದನೆಗೆ ಒಳಗಾದ ಭಾರತೀಯ ವಿದ್ಯಾರ್ಥಿನಿ

ಆಕ್ಸ್‌ಫರ್ಡ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಕಾಮಾಕ್ಷಿ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದಾರೆ. ಶಾಪಿಂಗ್ ವೇಳೆ 'ನಿನ್ನಿಂದ ಕೆಟ್ಟ ವಾಸನೆ ಬರುತ್ತಿದೆ' ಎಂದು ಅಪರಿಚಿತ ಮಹಿಳೆ ಅವಹೇಳನ ಮಾಡಿದ್ದಾರೆ. ಈ ಘಟನೆಯಿಂದ ತೀವ್ರ ನೋವು ಅನುಭವಿಸಿದರೂ, ಕಾಮಾಕ್ಷಿ ತಮ್ಮ ಅನುಭವ ಹಂಚಿಕೊಂಡು, ಇಂತಹ ತಾರತಮ್ಯದ ವಿರುದ್ಧ ಹೋರಾಡುವ ಸಂದೇಶ ನೀಡಿದ್ದಾರೆ. ಬ್ರಿಟನ್‌ನಲ್ಲಿ ಇಂತಹ ಘಟನೆಗಳು ಸಾಮಾನ್ಯವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆಕ್ಸ್‌ಫರ್ಡ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಕಾಮಾಕ್ಷಿ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದಾರೆ. ಶಾಪಿಂಗ್ ವೇಳೆ 'ನಿನ್ನಿಂದ ಕೆಟ್ಟ ವಾಸನೆ ಬರುತ್ತಿದೆ' ಎಂದು ಅಪರಿಚಿತ ಮಹಿಳೆ ಅವಹೇಳನ ಮಾಡಿದ್ದಾರೆ. ಈ ಘಟನೆಯಿಂದ ತೀವ್ರ ನೋವು ಅನುಭವಿಸಿದರೂ, ಕಾಮಾಕ್ಷಿ ತಮ್ಮ ಅನುಭವ ಹಂಚಿಕೊಂಡು, ಇಂತಹ ತಾರತಮ್ಯದ ವಿರುದ್ಧ ಹೋರಾಡುವ ಸಂದೇಶ ನೀಡಿದ್ದಾರೆ. ಬ್ರಿಟನ್‌ನಲ್ಲಿ ಇಂತಹ ಘಟನೆಗಳು ಸಾಮಾನ್ಯವೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನಿನ್ನ ಮೈಯಿಂದ ಕೆಟ್ಟ ವಾಸನೆ ಬರ್ತಿದೆ: ಆಕ್ಸ್‌ಫರ್ಡ್‌ನಲ್ಲಿ ಜನಾಂಗೀಯ ನಿಂದನೆಗೆ ಒಳಗಾದ ಭಾರತೀಯ ವಿದ್ಯಾರ್ಥಿನಿ
ವಿದ್ಯಾರ್ಥಿನಿ
ನಯನಾ ರಾಜೀವ್
|

Updated on: Nov 26, 2026 | 2:54 PM

Share

ಬ್ರಿಟನ್, ನವೆಂಬರ್ 26: ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬರು ಜನಾಂಗೀಯ ತಾರತಮ್ಯಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಶಾಪಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಬಳಿ ಬಂದು, ‘ನಿನ್ನಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆ’ ಎಂದು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ. ಈ ಘಟನೆಯಿಂದ ತೀವ್ರ ನೋವು ಮತ್ತು ಮುಜುಗರ ಅನುಭವಿಸಿದ್ದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಶಾಪಿಂಗ್ ವೇಳೆ ನಡೆದಿದ್ದೇನು? ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಕಾಮಾಕ್ಷಿ ಎಂಬ ವಿದ್ಯಾರ್ಥಿನಿ ನವೆಂಬರ್ 21ರಂದು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ತಾವು ಅಂಗಡಿಯೊಂದರಲ್ಲಿ ಸಂತೋಷದಿಂದ ಶಾಪಿಂಗ್ ಮಾಡುತ್ತಿದ್ದಾಗ ಬಿಳಿ ಮಹಿಳೆಯೊಬ್ಬರು ತಮ್ಮ ಸುತ್ತಮುತ್ತ ಓಡಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಸ್ವಲ್ಪ ಸಮಯದ ಬಳಿಕ ಆ ಮಹಿಳೆ ಕಾಮಾಕ್ಷಿ ಅವರ ಬಳಿ ಬಂದು, “ನಾನು ಹೇಳ್ಬಾರ್ದು ಅನ್ಕೊಂಡಿದ್ದೆ ಆದ್ರೂ ಹೇಳಲೇಬೇಕು ಎಂದು ಹೇಳುತ್ತಾ , ನಿಮ್ಮಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆ ಎನ್ನುತ್ತಾ ಅವಮಾನ ಮಾಡಿದ್ದಾರೆ. ಈ ಮಾತು ಕೇಳಿ ತಾನು ಕೆಲಕಾಲ ಏನು ಹೇಳಬೇಕೆಂದು ತಿಳಿಯದೆ ನಿಂತುಬಿಟ್ಟಿದ್ದಾಗಿ ಕಾಮಾಕ್ಷಿ ವಿವರಿಸಿದ್ದಾರೆ.

ತಂದೆಯ ನೆಚ್ಚಿನ ಪರ್ಫ್ಯೂಮ್ ಹಾಕಿದ್ದೆ ಮಹಿಳೆಯ ಮಾತು ಕೇಳಿ ತಮಗೆ ಅಚ್ಚರಿಯಾಯಿತು ಎಂದು ಕಾಮಾಕ್ಷಿ ಹೇಳಿದ್ದಾರೆ. ತಾವು ಯಾವುದೇ ಕೆಟ್ಟ ವಾಸನೆ ಬರುವ ವಸ್ತುವನ್ನು ಬಳಸಿರಲಿಲ್ಲ. ಬದಲಿಗೆ ತಂದೆಗೆ ಇಷ್ಟವಾದ ಪರ್ಫ್ಯೂಮ್ ಹಾಕಿದ್ದೆ ಎಂದು ಅವರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ. ಆ ಮಹಿಳೆ ಮಾತು ಮುಗಿಸಿ ಅಲ್ಲಿಂದ ತೆರಳಿದ ಬಳಿಕವೂ ಆ ಘಟನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಡೀ ದಿನ ಯಾರ ಗಮನಕ್ಕೂ ಬಾರದಂತೆ ಇರಲು ಪ್ರಯತ್ನಿಸಿದೆ. ಈ ಅನುಭವದಿಂದ ನೋವು ಮತ್ತು ನಿರಾಶೆಯಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್‌ ಕರ್ನಾಟಕದ ಅಳಿಯ; ಭಟ್ಕಳ ಮೂಲದ ಡಾ. ಸಾರಾ ಜುಕಾಕು ಪತಿಗೆ ಐತಿಹಾಸಿಕ ಗೆಲುವು

ಬ್ರಿಟನ್‌ನಲ್ಲಿ ಪದೇಪದೆ ತಾರತಮ್ಯದ ಅನುಭವ ಇದು ಮೊದಲ ಘಟನೆಯಲ್ಲ, ಬ್ರಿಟನ್‌ನಲ್ಲಿ ತಾವು ಹಲವು ಬಾರಿ ಸೂಕ್ಷ್ಮ ರೀತಿಯ ಜನಾಂಗೀಯ ತಾರತಮ್ಯವನ್ನು ಎದುರಿಸಿದ್ದಾಗಿ ಕಾಮಾಕ್ಷಿ ಆರೋಪಿಸಿದ್ದಾರೆ. ಕೆಲವೊಮ್ಮೆ ಬೀದಿಗಳಲ್ಲಿ ಇಂತಹ ಅನುಭವಗಳಾದರೆ, ಮತ್ತೊಂದೆಡೆ ಜನಾಂಗೀಯ ವಿಚಾರಗಳಿಗೆ ವೇದಿಕೆ ಒದಗಿಸುವ ಸಂಸ್ಥೆಗಳೂ ಇವೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಾಂಗ, ಸಾಮ್ರಾಜ್ಯಶಾಹಿ ಅಥವಾ ವಿವಾದಾತ್ಮಕ ಹಿನ್ನೆಲೆಯ ಆರೋಪಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುವ ಪ್ರತಿಷ್ಠಿತ ಸಂಸ್ಥೆಗಳನ್ನು ಹುಡುಕುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಕ್ಸ್‌ಫರ್ಡ್‌ನಲ್ಲಿ ನಾಥನ್ ಕೋಫ್ನಾಸ್ ವಿಚಾರವಾಗಿ ವಿವಾದ ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಅಮೆರಿಕದ ಶಿಕ್ಷಣ ತಜ್ಞ ನಾಥನ್ ಕೋಫ್ನಾಸ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ವಿವಾದಕ್ಕೆ ಸಿಲುಕಿತ್ತು. ಜನಾಂಗ ಮತ್ತು ಅರ್ಹತೆ ಕುರಿತ ಅವರ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದವು.

ಈ ಕಾರ್ಯಕ್ರಮದ ವಿರುದ್ಧ ನೂರಾರು ಪ್ರತಿಭಟನಾಕಾರರು ಆಕ್ಸ್‌ಫರ್ಡ್‌ನ ಓರಿಯಲ್ ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದ್ದರು. ಕೋಫ್ನಾಸ್ ಅವರಿಗೆ ವಿಶ್ವವಿದ್ಯಾಲಯ ವೇದಿಕೆ ನೀಡಿರುವುದನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಕಾಮಾಕ್ಷಿ ಅವರು ವಿಶ್ವವಿದ್ಯಾಲಯದ ಪರಿಸರದಲ್ಲಿಯೂ ಜನಾಂಗೀಯತೆಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಆದರೆ ಶಾಪಿಂಗ್ ವೇಳೆ ನಡೆದ ಘಟನೆಗೂ ಈ ವಿವಾದಕ್ಕೂ ನೇರ ಸಂಬಂಧವಿದೆ ಎಂಬುದಕ್ಕೆ ಮಾಹಿತಿ ಇಲ್ಲ.

ಭರವಸೆಯ ಮಾತಿನೊಂದಿಗೆ ವಿಡಿಯೋ ಅಂತ್ಯ ತಮ್ಮ ಅನುಭವದಿಂದ ಬೇಸರಗೊಂಡಿದ್ದರೂ ಕಾಮಾಕ್ಷಿ ಧೈರ್ಯ ಕಳೆದುಕೊಂಡಿಲ್ಲ. ಭಾರತದ ಸ್ನೇಹಿತೆಯೊಬ್ಬರು ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡ ಅವರು, ಪ್ರತಿದಿನ ಹೋರಾಡುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ. ಆದರೂ ಈ ಜಗತ್ತಿನಲ್ಲಿ ನಮಗಾಗಿ ಸ್ವಲ್ಪ ಹೆಚ್ಚು ಜಾಗವನ್ನು ಸೃಷ್ಟಿಸಿಕೊಳ್ಳುತ್ತೇವೆ ಎಂಬ ಸಂದೇಶ ನೀಡಿದ್ದಾರೆ. ಅಲ್ಲದೆ, ಆ ಮಹಿಳೆಯ ಮಾತಿನಿಂದಾಗಿ ತಾವು ಇಷ್ಟಪಡುವ ಪರ್ಫ್ಯೂಮ್ ಬಳಸುವುದನ್ನು ನಿಲ್ಲಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More