ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ಗೆ ಕರ್ನಾಟಕದ ನಂಟು; ಭಟ್ಕಳ ಮೂಲದ ಡಾ. ಸಾರಾ ಜುಕಾಕು ಪತಿಗೆ ಐತಿಹಾಸಿಕ ಗೆಲುವು
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಬ್ದುಲ್ ಎಲ್-ಸಯೆದ್ ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಐತಿಹಾಸಿಕ ಗೆಲುವು ಕರ್ನಾಟಕದ ಕರಾವಳಿ ಭಾಗದ ಭಟ್ಕಳವನ್ನು ಜಾಗತಿಕವಾಗಿ ಗಮನ ಸೆಳೆಯುವಂತೆ ಮಾಡಿದೆ. ಇದಕ್ಕೆ ಕಾರಣ ಅವರ ಧರ್ಮಪತ್ನಿ ಡಾ. ಸಾರಾ ಜುಕಾಕು. ಅವರ ಕುಟುಂಬದ ಮೂಲ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣಕ್ಕೆ ಸೇರಿದ್ದಾಗಿದೆ. ಹೀಗಾಗಿ, ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ಗೆ ಕರ್ನಾಟಕದ ನಂಟಿದೆ.

ವಾಷಿಂಗ್ಟನ್, ನವೆಂಬರ್ 4: ನವೆಂಬರ್ 3ರಂದು ನಡೆದ ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಮಿಚಿಗನ್ ಯುಎಸ್ ಸೆನೆಟ್ ರೇಸ್ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಎಲ್-ಸಯೆದ್ ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿ, ಅಮೆರಿಕದ ಇತಿಹಾಸದಲ್ಲೇ ಅತ್ಯುನ್ನತ ಸೆನೆಟ್ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಹೊಸ ಇತಿಹಾಸ ಬರೆದಿದ್ದಾರೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಅವರ ಧರ್ಮಪತ್ನಿ, ವೃತ್ತಿಯಲ್ಲಿ ಪ್ರಸಿದ್ಧ ಮನೋವೈದ್ಯೆಯಾಗಿರುವ ಡಾ. ಸಾರಾ ಜುಕಾಕು ಕೂಡ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರಿಗಿರುವ ಕರ್ನಾಟಕದ ನಂಟು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಅವರ ಪತಿ ಅಮೆರಿಕದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿರುವುದರಿಂದ ಭಾರತದಲ್ಲೂ ಈ ಫಲಿತಾಂಶ ಭಾರೀ ಸದ್ದು ಮಾಡುತ್ತಿದೆ.
ಡಾ. ಸಾರಾ ಅವರು ಅಮೆರಿಕದ ಮಿಚಿಗನ್ನಲ್ಲಿ ಭಾರತೀಯ ವಲಸಿಗ ಪೋಷಕರಿಗೆ ಜನಿಸಿ ಬೆಳೆದರು. ಮಿಚಿಗನ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ಮತ್ತು ನಿಯರ್ ಈಸ್ಟರ್ನ್ ಸ್ಟಡೀಸ್ನಲ್ಲಿ ಡಬಲ್ ಡಿಗ್ರಿ ಪಡೆದ ನಂತರ, ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾಲಯದ ವಾಗೆಲೋಸ್ ಕಾಲೇಜ್ ಆಫ್ ಫಿಸಿಷಿಯನ್ಸ್ ಆಂಡ್ ಸರ್ಜನ್ಸ್ನಿಂದ ವೈದ್ಯಕೀಯ ಪದವಿ (ಎಂಡಿ) ಪಡೆದರು. ಮಿಚಿಗನ್ ಹೆಲ್ತ್ನಲ್ಲಿ ಮನೋರೋಗ ವಿಭಾಗದ ಹಿರಿಯ ಹುದ್ದೆಯಲ್ಲಿದ್ದ ಅವರು, ಪ್ರಸ್ತುತ ಆನ್ ಆರ್ಬರ್ನಲ್ಲಿ ‘ಮೈಂಡ್ ವರ್ಕ್ ಸೈಕಿಯಾಟ್ರಿ’ ಎಂಬ ಕ್ಲಿನಿಕ್ ನಡೆಸುತ್ತಿದ್ದಾರೆ.
ಕರ್ನಾಟಕದ ಜುಕಾಕು ಮನೆತನದ ಐತಿಹಾಸಿಕ ಹಿನ್ನೆಲೆ:
ಜುಕಾಕು ಕುಟುಂಬವು ಕರಾವಳಿ ಕರ್ನಾಟಕದ ಭಟ್ಕಳ ಪಟ್ಟಣದ ನವಾಯತ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾಗಿದೆ. ಈ ಸಮುದಾಯವು ಶತಮಾನಗಳ ಹಿಂದೆ ದಕ್ಷಿಣ ಭಾರತದ ಕರಾವಳಿಯಲ್ಲಿ ನೆಲೆಸಿದ ಅರಬ್, ಯೆಮೆನ್ ಮತ್ತು ಪರ್ಷಿಯನ್ ವಾಣಿಜ್ಯೋದ್ಯಮಿಗಳೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ.
Sarah’s beautiful speech in the final moments of our final rally of the campaign. https://t.co/bbTyp8onc9
— Dr. Abdul El-Sayed (@AbdulElSayed) November 3, 2026
ಡಾ. ಸಾರಾ ಅವರ ತಂದೆ ಜುಕಾಕು ತಯ್ಯಬ್ ಅವರು ಭಟ್ಕಳದಲ್ಲಿ ಹುಟ್ಟಿ, ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ನಂತರ ಅಮೆರಿಕಕ್ಕೆ ತೆರಳಿ ವೃತ್ತಿಪರ ಕಿಡ್ನಿ ತಜ್ಞರಾಗಿ ಉದ್ಯೋಗಕ್ಕೆ ಸೇರಿದರು. ಅವರ ತಾತ ಜುಕಾಕು ಶಂಸುದ್ದೀನ್ ಪ್ರಸಿದ್ಧ ವಕೀಲರು ಹಾಗೂ ಶಿಕ್ಷಣತಜ್ಞರಾಗಿದ್ದರು. ಅಷ್ಟೇ ಅಲ್ಲದೆ, ಮೈಸೂರು ರಾಜ್ಯದ (ಈಗಿನ ಕರ್ನಾಟಕ) ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರ ಸರ್ಕಾರದಲ್ಲಿ ಉಪ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು.
The many beat the money. The people beat the corporations and special interests. Hope beat hate and fear.
Michigan, we won. https://t.co/k3cPNCInOI
— Dr. Abdul El-Sayed (@AbdulElSayed) November 4, 2026
ಸಾರಾ- ಅಬ್ದುಲ್ ಭೇಟಿ ಮತ್ತು ವಿವಾಹ:
ಅಮೆರಿಕದ ಮಿಚಿಗನ್ನಲ್ಲಿ ಹುಟ್ಟಿ ಬೆಳೆದ ಡಾ. ಸಾರಾ, 2015ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ವಾಗೆಲೋಸ್ ಕಾಲೇಜ್ ಆಫ್ ಫಿಸಿಷಿಯನ್ಸ್ ಆಂಡ್ ಸರ್ಜನ್ಸ್ನಿಂದ ವೈದ್ಯಕೀಯ ಪದವಿ ಪಡೆದರು. ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಇಬ್ಬರೂ ‘ಮುಸ್ಲಿಂ ಸ್ಟೂಡೆಂಟ್ಸ್ ಅಸೋಸಿಯೇಷನ್’ ಸದಸ್ಯರಾಗಿದ್ದಾಗ ಭೇಟಿಯಾದರು. ಸಾರಾ ಅವರಿಗೆ 19 ವರ್ಷ ವಯಸ್ಸಿದ್ದಾಗ (2006ರ ಮೇಯಲ್ಲಿ) ಅವರಿಬ್ಬರೂ ವಿವಾಹವಾದರು. ಇವರಿಗೆ ಇಮ್ಮಾಲಿ ಮತ್ತು ಸೆರೀನ್ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಟ್ರಂಪ್ಗೆ ಡಬಲ್ ಶಾಕ್: ಸೆನೆಟ್, ಹೌಸ್ ಎರಡೂ ಡೆಮಾಕ್ರಟ್ಗಳ ವಶ
2 ದಶಕಗಳಿಗೂ ಹೆಚ್ಚು ಕಾಲದಿಂದ ದಾಂಪತ್ಯ ಜೀವನ ನಡೆಸುತ್ತಿರುವ ಅಬ್ದುಲ್ ಎಲ್-ಸಯೆದ್ ದಕ್ಷಿಣ ಭಾರತದ ಸಂಸ್ಕೃತಿಗೆ ತಾವು ಹೊಂದಿಕೊಂಡಿರುವ ಬಗ್ಗೆ ಹಾಸ್ಯಸ್ಪದವಾಗಿ ಹಂಚಿಕೊಂಡಿದ್ದಾರೆ. “ನೋಡಿ, ನಾನು ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಕುಟುಂಬದ ಜೊತೆ ಒಡನಾಟವಿಟ್ಟುಕೊಂಡಿದ್ದೇನೆ, ದಕ್ಷಿಣ ಭಾರತೀಯಳನ್ನು ಮದುವೆಯಾಗಿದ್ದೇನೆ. ನಾನೀಗ ಅವರ ಸಂಸ್ಕೃತಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದೇನೆ. ಬಹುಶಃ ನಾನು ಅರಬ್ಗಿಂತ ಹೆಚ್ಚಾಗಿ ಭಾರತೀಯನೇ ಆಗಿದ್ದೇನೆ ಎನಿಸುತ್ತಿದೆ!” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಡಾ. ಅಬ್ದುಲ್ ಎಲ್-ಸಯೆದ್ ಯಾರು?:
ಅಬ್ದುಲ್ ಎಲ್-ಸಯೆದ್ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಪ್ರಮುಖ ಯುವ ರಾಜಕಾರಣಿ, ಖ್ಯಾತ ಆರೋಗ್ಯ ತಜ್ಞ. ಅಮೆರಿಕದ 2026ರ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ರಾಜ್ಯದಿಂದ ಯುಎಸ್ ಸೆನೆಟ್ಗೆ ಆಯ್ಕೆಯಾಗುವ ಮೂಲಕ, ಅವರು ಅಮೆರಿಕದ ಇತಿಹಾಸದಲ್ಲೇ ಅತ್ಯುನ್ನತ ಸೆನೆಟ್ಗೆ ಆಯ್ಕೆಯಾದ ಪ್ರಥಮ ಮುಸ್ಲಿಂ ನಾಯಕ ಎಂಬ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಬ್ದುಲ್ ಎಲ್-ಸಯೆದ್ ಅವರು 1984ರ ಅಕ್ಟೋಬರ್ 31ರಂದು ಅಮೆರಿಕದ ಮಿಚಿಗನ್ ರಾಜ್ಯದ ರೋಚೆಸ್ಟರ್ ಹಿಲ್ಸ್ನಲ್ಲಿ ಜನಿಸಿದರು. ಇವರ ತಂದೆ-ತಾಯಿ ಈಜಿಪ್ಟ್ ಮೂಲದ ವಲಸಿಗರು. ತಂದೆ ಮೊಹಮ್ಮದ್ ಎಲ್-ಸಯೆದ್ ಎಂಜಿನಿಯರ್ ಹಾಗೂ ತಾಯಿ ಫಾತಿನ್ ಎಲ್-ಕೋಮಿ ನರ್ಸ್ ಪ್ರಾಕ್ಟೀಷನರ್.
ಅಬ್ದುಲ್ ಮಿಚಿಗನ್ ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಬಿ.ಎಸ್. ಪದವಿ ಪಡೆದರು. ಪ್ರಸಿದ್ಧ ರೋಡ್ಸ್ ಸ್ಕಾಲರ್ಶಿಪ್ ಪಡೆದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಡಾಕ್ಟರೇಟ್ ಪೂರ್ಣಗೊಳಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದ ವಾಗೆಲೋಸ್ ಕಾಲೇಜ್ ಆಫ್ ಫಿಸಿಷಿಯನ್ಸ್ ಆಂಡ್ ಸರ್ಜನ್ಸ್ನಿಂದ ಎಂಡಿ ಪದವಿ ಗಳಿಸಿದರು. 2023ರಿಂದ 2025ರವರೆಗೆ ವೇನ್ ಕೌಂಟಿಯ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಸಾರ್ವಜನಿಕರ ಕೋಟ್ಯಂತರ ಡಾಲರ್ ವೈದ್ಯಕೀಯ ಸಾಲ ಮನ್ನಾ ಮಾಡುವ ಯೋಜನೆಗೆ ನೆರವಾದರು.
‘ಅಮೆರಿಕ ಡಿಸೆಕ್ಟೆಡ್’ (ಎಂಬ ಪ್ರಸಿದ್ಧ ಹೆಲ್ತ್ & ಪಾಲಿಟಿಕ್ಸ್ ಪೋಡ್ಕಾಸ್ಟ್ನ ನಿರೂಪಕರಾಗಿಯೂ ಅವರು ಕೆಲಸ ಮಾಡಿದ್ದಾರೆ. 2018ರಲ್ಲಿ ಮಿಚಿಗನ್ ಗವರ್ನರ್ ಚುನಾವಣೆಯ ಡೆಮಾಕ್ರಟಿಕ್ ಪ್ರೈಮರಿಯಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. 2026ರ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ನ ಯುಎಸ್ ಸೆನೆಟ್ ಕ್ಷೇತ್ರದಿಂದ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:15 pm, Wed, 4 November 26




