ರಸ್ತೆಯೋ ಅಥವಾ ಕಸದ ತೊಟ್ಟಿಯೋ? ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿ ಕಸದ ರಾಶಿ
ಬೆಂಗಳೂರಿನ ಪದ್ಮನಾಭನಗರದ ಬೃಂದಾವನ ಲೇಔಟ್‌ನಲ್ಲಿ ರಸ್ತೆಯೇ ಕಸದ ರಾಶಿಯಾಗಿ ಮಾರ್ಪಟ್ಟಿದೆ. ಹಲವು ವರ್ಷಗಳಿಂದ ಕಸದ ಸಮಸ್ಯೆ ಕಾಡುತ್ತಿದ್ದು, ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ದುರ್ವಾಸನೆ, ಸೊಳ್ಳೆ ಕಾಟ ಮತ್ತು ರೋಗಗಳ ಭೀತಿ ಹೆಚ್ಚಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗಿದೆ.
ಬೆಂಗಳೂರು, ನವೆಂಬರ್ 23: ನಗರದ ಪದ್ಮನಾಭನಗರದ ಬೃಂದಾವನ ಲೇಔಟ್ ಬಳಿಯ ರಸ್ತೆಯು ಕಸದ ರಾಶಿಯಾಗಿ ಮಾರ್ಪಟ್ಟಿರುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯನ್ನು ಕಸ ಸಂಪೂರ್ಣವಾಗಿ ಆವರಿಸಿದ್ದು, ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತೀವ್ರ ಕಿರಿಕಿರಿಯನ್ನುಂಟುಮಾಡಿದೆ. ಜಿಬಿಎ ಅಧಿಕಾರಿಗಳ ಮತ್ತು ಸ್ವಚ್ಛತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕಸದಿಂದಾಗಿ ದುರ್ವಾಸನೆ, ಸೊಳ್ಳೆಗಳ ಕಾಟ ಮತ್ತು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಕೇವಲ ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರವನ್ನು ಒದಗಿಸುವಂತೆ ನಿವಾಸಿಗಳು ಪಾಲಿಕೆಯನ್ನು ಒತ್ತಾಯಿಸಿದ್ದಾರೆ. ಕಳೆದ ಆರು ವರ್ಷಗಳಿಂದಲೂ ಇದೇ ಸಮಸ್ಯೆ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ. ನಾಗರಿಕರ ಒತ್ತಾಯದ ನಂತರ, ಸದ್ಯಕ್ಕೆ ಸ್ಥಳದಿಂದ ಕಸವನ್ನು ತೆರವುಗೊಳಿಸಲಾಗಿದ್ದು, ಮುಂದೆಯೂ ಕಸ ಬೀಳದಂತೆ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

