ಎನ್ ಚಂದ್ರಶೇಖರನ್ ಮರುನೇಮಕ ವಿರುದ್ಧ ಬಾಂಬೆ ಹೈಕೋರ್ಟ್ ಕೋರ್ಟ್ ಮೊರೆಬೀಳಲಿರುವ ಟಾಟಾ ಟ್ರಸ್ಟ್ಸ್
ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರ ಮರುನೇಮಕವನ್ನು ಪ್ರಶ್ನಿಸಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ರತನ್ ಟಾಟಾ ಟ್ರಸ್ಟ್ ಸೇರಿದಂತೆ ಟಾಟಾ ಟ್ರಸ್ಟ್ಸ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದೆ. ಸೆಪ್ಟೆಂಬರ್ 17ರಂದು ನಡೆದ ಮಂಡಳಿ ಸಭೆಯಲ್ಲಿ ಚಂದ್ರಶೇಖರನ್ ಅವರ ಮರುನೇಮಕಕ್ಕೆ ಅನುಮೋದನೆ ನೀಡಲಾಗಿತ್ತು. ಫೆಬ್ರವರಿ 2027ರಿಂದ ಆರಂಭವಾಗುವ ಐದು ವರ್ಷಗಳ ಅವಧಿಗೆ ಅವರ ನೇಮಕಾತಿಗೆ ಅನುಮೋದಿಸಲಾಗಿದೆ. ಆದರೆ, ನಿರ್ಣಯವು ಕಂಪನಿ ನಿಯಮಗಳಿಗೆ ವಿರುದ್ಧವಾಗಿದೆ ಎನ್ನವುದು ಟ್ರಸ್ಟ್ಸ್ನ ಆರೋಪ.

ನವದೆಹಲಿ, ನವೆಂಬರ್ 26: ಟಾಟಾ ಸನ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿ ಎನ್. ಚಂದ್ರಶೇಖರನ್ ಅವರ ಮರುನೇಮಕವನ್ನು ಪ್ರಶ್ನಿಸಿ ಟಾಟಾ ಟ್ರಸ್ಟ್ಸ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಲಿದೆ. ಸೆಪ್ಟೆಂಬರ್ 17ರ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವು ಕಂಪನಿಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟ್ರಸ್ಟ್‌ಗಳು ಆರೋಪಿಸಿವೆ.
ಟಾಟಾ ಸನ್ಸ್‌ನ ‘ಆರ್ಟಿಕಲ್ಸ್ ಆಫ್ ಅಸೋಸಿಯೇಷನ್’ ಪ್ರಕಾರ ಅಧ್ಯಕ್ಷರ ನೇಮಕ ಅಥವಾ ಮರುನೇಮಕದಂತಹ ಪ್ರಮುಖ ನಿರ್ಣಯಗಳಿಗೆ ಸಭೆಯಲ್ಲಿ ಹಾಜರಿರುವ ಟ್ರಸ್ಟ್ ನಾಮನಿರ್ದೇಶಿತ ನಿರ್ದೇಶಕರ ಬಹುಮತದ ಬೆಂಬಲ ಅಗತ್ಯವಿದ್ದು, ಆ ಷರತ್ತು ಈಡೇರಿಲ್ಲ ಎಂದು ಟ್ರಸ್ಟ್‌ಗಳು ವಾದಿಸಿವೆ.
ಈ ನಿರ್ಣಯವನ್ನು ಅಮಾನ್ಯವೆಂದು ಘೋಷಿಸುವಂತೆ ಮತ್ತು ಅದರ ಆಧಾರದ ಮೇಲೆ ಕಂಪನಿ ಯಾವುದೇ ಕ್ರಮ ಕೈಗೊಳ್ಳದಂತೆ ತಡೆಯುವಂತೆ ಟ್ರಸ್ಟ್‌ಗಳು ನ್ಯಾಯಾಲಯವನ್ನು ಕೋರಲು ಮುಂದಾಗಿವೆ.
ಇದನ್ನೂ ಓದಿ: ಫ್ಲಿಪ್ಕಾರ್ಟ್ನಲ್ಲಿ ನಾಯಕತ್ವ ಬದಲಾವಣೆ; ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ರಾಜೀನಾಮೆ; ಬಾಲಾಜಿ ತ್ಯಾಗರಾಜನ್ ಹಂಗಾಮಿ ಸಿಇಒ
ಸೆಪ್ಟೆಂಬರ್ ಸಭೆಯಲ್ಲಿ ಕ್ಯಾಸ್ಟಿಂಗ್ ವೋಟ್ ಮೂಲಕ ಅನುಮೋದನೆ ನೀಡಲಾಗಿತ್ತು
ಟ್ರಸ್ಟ್ ನಾಮನಿರ್ದೇಶಿತ ನಿರ್ದೇಶಕರಾದ ನೋಯೆಲ್ ಟಾಟಾ ಅವರು ಮರುನೇಮಕದ ವಿರುದ್ಧ ಮತ ಚಲಾಯಿಸಿದರೆ, ವೇಣು ಶ್ರೀನಿವಾಸನ್ ಅವರು ಪರವಾಗಿ ಮತ ಹಾಕಿದ್ದರು.
ಟ್ರಸ್ಟ್ ನಾಮನಿರ್ದೇಶಿತರ ನಡುವೆ ಭಿನ್ನಮತ ಮೂಡಿದ ಹಿನ್ನೆಲೆಯಲ್ಲಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಹರೀಶ್ ಮನ್ವಾನಿ ಅವರು ನಿರ್ಣಾಯಕ ಮತ (casting vote) ಚಲಾಯಿಸಿ ಮರುನೇಮಕಕ್ಕೆ ಅನುಮೋದನೆ ದೊರಕಿಸಿದ್ದರು. ಆದರೆ, ಕಂಪನಿಯ ನಿಯಮಗಳಡಿ ಅಗತ್ಯವಿರುವ ಸಕಾರಾತ್ಮಕ ಮತಗಳಿಗೆ ಬದಲಾಗಿ ನಿರ್ಣಾಯಕ ಮತವನ್ನು ಬಳಸಲು ಬರುವುದಿಲ್ಲ ಎಂಬುದು ಟ್ರಸ್ಟ್‌ಗಳ ನಿಲುವಾಗಿದೆ.
ನ್ಯಾಯಾಲಯಕ್ಕೆ ಹೋಗುವ ನಿರ್ಧಾರಕ್ಕೆ ಟ್ರಸ್ಟ್‌ನೊಳಗೆ ನಡೆದ ಮತದಾನದಲ್ಲಿ ನೋಯೆಲ್ ಟಾಟಾ, ನೆವಿಲ್ಲೆ ಟಾಟಾ ಮತ್ತು ಭಾಸ್ಕರ್ ಭಟ್ ಬೆಂಬಲ ನೀಡಿದ್ದರೆ, ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಯಂತ್ರೋಪಕರಣ ತಯಾರಿಕೆ ಉತ್ತೇಜಿಸಲು 11,000 ಕೋಟಿ ರೂ ಸ್ಕೀಮ್ಗೆ ಅನುಮೋದನೆ; ಚೀನಾಗೆ ಸೆಡ್ಡು ಹೊಡೆಯುತ್ತಿರುವ ಭಾರತ
ನವೆಂಬರ್ 30ರ ಸಭೆ ಮತ್ತು ಪರಿಹಾರ ಕೋರಿಕೆ
ನವೆಂಬರ್ 30ರಂದು ಮತ್ತೊಂದು ಟಾಟಾ ಸನ್ಸ್ ಮಂಡಳಿ ಸಭೆ ನಿಗದಿಯಾಗಿರುವುದರಿಂದ, ಭವಿಷ್ಯದ ನಿರ್ಣಯಗಳಲ್ಲೂ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ತಲೆದೋರಬಹುದೆಂಬ ಆತಂಕದಲ್ಲಿ ಸಭೆಗೆ ಮುನ್ನವೇ ತುರ್ತು ನ್ಯಾಯಾಂಗ ಮಧ್ಯಪ್ರವೇಶಕ್ಕೆ ಟ್ರಸ್ಟ್‌ಗಳು ಮುಂದಾಗಿವೆ.
ಜೊತೆಗೆ, ಸರ್ ದೊರಾಬ್ಜಿ ಟಾಟಾ ಟ್ರಸ್ಟ್ 50 ಕೋಟಿ ರೂ ಮತ್ತು ಆರ್.ಡಿ. ಟಾಟಾ ಟ್ರಸ್ಟ್ 15 ಕೋಟಿ ರೂ ಸೇರಿದಂತೆ ಒಟ್ಟು ರೂ. 65 ಕೋಟಿ ರೂ ಹಾನಿ ಪರಿಹಾರಕ್ಕೂ ಕೋರಿಕೆ ಸಲ್ಲಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:34 pm, Thu, 26 November 26




