AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಹಳ್ಳಿಗಳಲ್ಲಿ ಮನೆ ಹೆರಿಗೆ, ಸಾವುಗಳಾಗುತ್ತಿವೆ, ವರದಿ ಕೊಡ್ತೇವೆ”:ಯು.ಟಿ. ಖಾದರ್ ಹೇಳಿಕೆಗೆ ನಾಗಲಕ್ಷ್ಮೀ ಕಿಡಿ; ಆಶಾಗಳ ಮನವೊಲಿಸಲು ಸರ್ಕಾರದ ಮಾಸ್ಟರ್​ ಪ್ಲಾನ್

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ 10ನೇ ದಿನಕ್ಕೆ ತಲುಪಿದೆ. ಸಚಿವ ಯು.ಟಿ. ಖಾದರ್ ಹೇಳಿಕೆಗೆ ಡಿ. ನಾಗಲಕ್ಷ್ಮೀ ತೀವ್ರ ತಿರುಗೇಟು ನೀಡಿದ್ದಾರೆ. ಆಶಾ ಕಾರ್ಯಕರ್ತೆಯರ ಮಹತ್ವವನ್ನು ಸಚಿವರು ಅರಿತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಇತ್ಯರ್ಥಕ್ಕೆ ಸರ್ಕಾರ ಪ್ರೋತ್ಸಾಹ ಧನ ದುಪ್ಪಟ್ಟು ಮಾಡುವ ಹೊಸ ಪರಿಹಾರ ಸೂತ್ರದತ್ತ ಹೆಜ್ಜೆ ಇಟ್ಟಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದು.

ಹಳ್ಳಿಗಳಲ್ಲಿ ಮನೆ ಹೆರಿಗೆ, ಸಾವುಗಳಾಗುತ್ತಿವೆ, ವರದಿ ಕೊಡ್ತೇವೆ:ಯು.ಟಿ. ಖಾದರ್ ಹೇಳಿಕೆಗೆ ನಾಗಲಕ್ಷ್ಮೀ ಕಿಡಿ; ಆಶಾಗಳ ಮನವೊಲಿಸಲು ಸರ್ಕಾರದ ಮಾಸ್ಟರ್​ ಪ್ಲಾನ್
ಸಾಂದರ್ಭಿಕ ಚಿತ್ರ
ವಿನಯ್​ ಕಾಶಪ್ಪನವರ್​
| Edited By: |

Updated on: Nov 26, 2026 | 1:09 PM

Share

ಬೆಂಗಳೂರು, ನ.26: ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದ್ದು, “ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ” ಎಂಬ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತೀವ್ರ ತಿರುಗೇಟು ನೀಡಿದ್ದಾರೆ. ಮತ್ತೊಂದೆಡೆ, ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಸಮಸ್ಯೆ ಇತ್ಯರ್ಥಪಡಿಸಲು ರಾಜ್ಯ ಸರ್ಕಾರವು ಪ್ರೋತ್ಸಾಹ ಧನ ದುಪ್ಪಟ್ಟು ಮಾಡುವ ಹೊಸ ಪರಿಹಾರ ಸೂತ್ರದತ್ತ ಹೆಜ್ಜೆ ಇಟ್ಟಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಡಿ. ನಾಗಲಕ್ಷ್ಮೀ, ಸಚಿವರು ವಾಸ್ತವಾಂಶ ತಿಳಿಯದೆ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. “ನಮ್ಮನ್ನು ನಿರ್ಲಕ್ಷಿಸಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ. ವೈದ್ಯರು ವೈದ್ಯರ ಕೆಲಸ ಮಾಡುತ್ತಿದ್ದಾರೆ, ನರ್ಸ್‌ಗಳು ನರ್ಸ್ ಕೆಲಸ ಮಾಡುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರ ಕೆಲಸವನ್ನು ಯಾರು ಮಾಡುತ್ತಿದ್ದಾರೆ? ಕಳೆದ 10 ದಿನದಿಂದ ಏನಾಗಿದೆ ಎಂದು ಅವರ ಸಿಬ್ಬಂದಿ ಸರಿಯಾದ ಮಾಹಿತಿ ಸಂಗ್ರಹ ಮಾಡಲಿ. ಹಳ್ಳಿಗಳಲ್ಲಿ ಮನೆಗಳಲ್ಲೇ ಗರ್ಭಿಣಿಯರ ಹೆರಿಗೆ ಆಗುತ್ತಿದೆ, ಹೆರಿಗೆ ಸಾವುಗಳೂ ಸಂಭವಿಸುತ್ತಿವೆ. ಕೆಲವೇ ಸಮಯದಲ್ಲಿ ಎಷ್ಟು ಮರಣವಾಗಿದೆ ಎಂದು ನಾವು ವರದಿ ನೀಡುತ್ತೇವೆ.” ಎಂದು ಆಕ್ರೋಶ ಹೊರಹಾಕಿದ್ದಾರೆ.

“ರಾಜ್ಯದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸಚಿವರ ಮಾತು ಬಹಳ ನೋವು ತಂದಿದೆ. ಸರ್ಕಾರದ ಮೇಲೆ ನಮಗೆ ಅಪಾರ ವಿಶ್ವಾಸ ಇತ್ತು. ಪ್ರತಿಭಟನೆಗೂ 20 ದಿನ ಮುಂಚೆಯೇ ಮಾಹಿತಿ ನೀಡಿದ್ದರೂ ಏನು ಮಾಡಿದಿರಿ? ಈಗ ನಮ್ಮ ಮನೋಸ್ಥೈರ್ಯ ಕುಸಿಯುವಂತೆ ಮಾಡಿ ಪ್ರತಿಭಟನೆ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಬೆದರಿಕೆಗೆ ಹೆದರುವುದಿಲ್ಲ” ಎಂದು ನಾಗಲಕ್ಷ್ಮೀ ಸ್ಪಷ್ಟಪಡಿಸಿದರು.

ಇದನ್ನೂ ಓದಿ: “ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ” ಎಂದ ಯು.ಟಿ. ಖಾದರ್: ಆರೋಗ್ಯ ಸಚಿವರ ಹೇಳಿಕೆಗೆ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ?

ಪ್ರತಿಭಟನೆಗೆ ಬ್ರೇಕ್ ಹಾಕಲು ಸರ್ಕಾರದ ಸೂತ್ರ:

ಇತ್ತ ಫ್ರೀಡಂ ಪಾರ್ಕ್ ಪ್ರತಿಭಟನೆಯನ್ನು ಸುಖಾಂತ್ಯಗೊಳಿಸಲು ಆರೋಗ್ಯ ಇಲಾಖೆ ತೆರೆಮರೆಯಲ್ಲಿ ಮಹತ್ವದ ಕಸರತ್ತು ನಡೆಸುತ್ತಿದೆ. ಆಶಾ ಕಾರ್ಯಕರ್ತೆಯರ ವೇತನ ಮತ್ತು ಗೌರವ ಧನ ಸಮಸ್ಯೆ ಪರಿಹಾರಕ್ಕೆ ಆರೋಗ್ಯ ಇಲಾಖೆಯು ಈಗಾಗಲೇ ಆರೋಗ್ಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ವರದಿ ಪಡೆದುಕೊಂಡಿದೆ. ಪ್ರಸುತ್ತ ನೀಡುತ್ತಿರುವ ನಿಶ್ಚಿತ ಗೌರವ ಧನದ ಹೊರತಾಗಿ, ವಿವಿಧ ಆರೋಗ್ಯ ಸೇವೆಗಳಿಗೆ ನೀಡಲಾಗುವ ಪ್ರೋತ್ಸಾಹ ಧನದ ಕಡೆಗೆ ಹೆಚ್ಚಿನ ಗಮನ ಹರಿಸಲು ತಜ್ಞರು ಸೂಚಿಸಿದ್ದಾರೆ. ಪ್ರಸ್ತುತ ನೀಡುತ್ತಿರುವ ಇನ್ಸೆಂಟಿವ್ಸ್ ಮೊತ್ತವನ್ನು ದುಪ್ಪಟ್ಟು ಹೆಚ್ಚಿಸಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ಈಗಾಗಲೇ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನದ ಸಂಪೂರ್ಣ ವಿವರ ಹಾಗೂ ಆರ್ಥಿಕ ಇಲಾಖೆಯಿಂದ ಅಗತ್ಯ ಅನುದಾನದ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆಹಾಕುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More