AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ 24 ಲಕ್ಷ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫ್ರೀಯಾಗಿ ಸಿಗುತ್ತೆ ಇ-ಖಾತಾ!

ಬೆಂಗಳೂರಿನ ಜಿಬಿಎ ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕ ಉಚಿತ ಇ-ಖಾತಾ ವಿತರಿಸಲಾಗುತ್ತಿದೆ. ಪಿಡಿಎಫ್ ಪ್ರಮಾಣಪತ್ರದೊಂದಿಗೆ ePID ಸಂಖ್ಯೆ ನೀಡಲಾಗುತ್ತಿದ್ದು, ಆನ್‌ಲೈನ್ ಮೂಲಕ ಖಾತಾ ತಿದ್ದುಪಡಿ ಮತ್ತು ಮಾಲೀಕತ್ವ ಬದಲಾವಣೆಗೂ ಅರ್ಜಿ ಸಲ್ಲಿಸಬಹುದು ಎಂದು ಜಿಬಿಎ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರಿನ 24 ಲಕ್ಷ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ವಾಟ್ಸಾಪ್ ಮೂಲಕ ಫ್ರೀಯಾಗಿ ಸಿಗುತ್ತೆ ಇ-ಖಾತಾ!
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Nov 26, 2026 | 3:41 PM

Share

ಮುಖ್ಯಾಂಶಗಳು

  • 24 ಲಕ್ಷ ಆಸ್ತಿ ಮಾಲೀಕರಿಗೆ ಉಚಿತ ಇ-ಖಾತಾ
  • ವಾಟ್ಸಾಪ್ ಮೂಲಕ ಪಿಡಿಎಫ್ ಪ್ರಮಾಣಪತ್ರ ವಿತರಣೆ
  • ತಿದ್ದುಪಡಿ, ಮ್ಯುಟೇಷನ್‌ಗೆ ಆನ್‌ಲೈನ್ ಅರ್ಜಿ ಅವಕಾಶ

ಬೆಂಗಳೂರು, ನವೆಂಬರ್ 26: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಸುಮಾರು 24 ಲಕ್ಷ ಆಸ್ತಿ ಮಾಲೀಕರಿಗೆ ವಾಟ್ಸಾಪ್ ಮೂಲಕ ಉಚಿತವಾಗಿ ಇ-ಖಾತಾ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಜಿಬಿಎ ಹಾಗೂ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಪಿಡಿಎಫ್ ರೂಪದಲ್ಲಿ, ವಿಶಿಷ್ಟ ePID ಸಂಖ್ಯೆಯೊಂದಿಗೆ ಇ-ಖಾತಾ ತಲುಪಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

‘ಭೂ-ಗ್ಯಾರಂಟಿ: ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಸೇವೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಶಯ ಮತ್ತು ನಿರ್ದೇಶನದಂತೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ‘ಭೂ-ಗ್ಯಾರಂಟಿ: ನನ್ನ ಖಾತಾ, ನನ್ನ ಹಕ್ಕು’ ಅಭಿಯಾನದಡಿ ಈ ಸೇವೆ ನೀಡಲಾಗುತ್ತಿದೆ ಎಂದು ಮಹೇಶ್ವರ್ ರಾವ್ ಹೇಳಿದ್ದಾರೆ.

ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸುವ ಅಗತ್ಯವಿಲ್ಲ. ವಾಟ್ಸಾಪ್ ಮೂಲಕ ಬರುವ ಪಿಡಿಎಫ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಇ-ಖಾತಾ ಎಂದರೇನು?

ಖಾತಾ ಎಂದರೆ ಸ್ಥಳೀಯ ನಗರ ಪಾಲಿಕೆ ಅಥವಾ ಮಹಾನಗರ ಪಾಲಿಕೆ ನಿರ್ವಹಿಸುವ ಆಸ್ತಿ ದಾಖಲೆ. ಆಸ್ತಿಯ ಮಾಲೀಕರ ಹೆಸರು, ಆಸ್ತಿಯ ವಿಳಾಸ, ವಿಸ್ತೀರ್ಣ ಹಾಗೂ ಆಸ್ತಿ ತೆರಿಗೆಗೆ ಸಂಬಂಧಿಸಿದ ವಿವರಗಳನ್ನು ಈ ದಾಖಲೆಯಲ್ಲಿ ನಮೂದಿಸಲಾಗುತ್ತದೆ. ಇ-ಖಾತಾ ಎಂದರೆ ಇದೇ ಖಾತಾ ದಾಖಲೆಯ ಡಿಜಿಟಲ್ ರೂಪ.

ಇ-ಖಾತಾ ಪ್ರಮಾಣಪತ್ರದಲ್ಲಿ ಆಸ್ತಿಗೆ ಸಂಬಂಧಿಸಿದ ವಿವರಗಳು ಹಾಗೂ ವಿಶಿಷ್ಟ ePID ಸಂಖ್ಯೆ ಇರುತ್ತದೆ. ಇದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು, ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಅಗತ್ಯವಿದ್ದಾಗ ಡಿಜಿಟಲ್ ದಾಖಲೆಯಾಗಿ ಬಳಸಲು ಸಾಧ್ಯವಾಗುತ್ತದೆ.

ಆದರೆ ಇ-ಖಾತಾ ಎಂದರೆ ಆಸ್ತಿಯ ನೋಂದಣಿ ಪತ್ರ ಅಥವಾ ಸಂಪೂರ್ಣ ಮಾಲೀಕತ್ವದ ಹಕ್ಕುಪತ್ರವಲ್ಲ. ಇದು ಮುಖ್ಯವಾಗಿ ಸ್ಥಳೀಯ ಸಂಸ್ಥೆಯ ಆಸ್ತಿ ಮತ್ತು ತೆರಿಗೆ ದಾಖಲೆ ಎಂಬುದನ್ನು ಆಸ್ತಿ ಮಾಲೀಕರು ಗಮನಿಸಬೇಕು.

ಇ-ಖಾತಾ ಏಕೆ ಬೇಕು?

ಆಸ್ತಿ ತೆರಿಗೆ ಪಾವತಿಸುವುದು, ಆಸ್ತಿಯ ವಿವರಗಳನ್ನು ಸ್ಥಳೀಯ ಸಂಸ್ಥೆಯ ದಾಖಲೆಗಳಲ್ಲಿ ಸರಿಯಾಗಿ ದಾಖಲಿಸುವುದು ಹಾಗೂ ಮಾಲೀಕತ್ವ ಬದಲಾದಾಗ ಖಾತಾ ದಾಖಲೆಯನ್ನು ನವೀಕರಿಸುವುದು ಸೇರಿದಂತೆ ಹಲವು ನಾಗರಿಕ ಸೇವೆಗಳಿಗೆ ಖಾತಾ ಮುಖ್ಯವಾಗಿದೆ. ಆಸ್ತಿ ಮಾರಾಟ, ವರ್ಗಾವಣೆ ಅಥವಾ ಇತರ ವ್ಯವಹಾರಗಳ ಸಂದರ್ಭದಲ್ಲಿಯೂ ಖಾತಾ ದಾಖಲೆಗಳನ್ನು ಪರಿಶೀಲಿಸುವ ಅಗತ್ಯ ಉಂಟಾಗಬಹುದು.

ಆಸ್ತಿ ವಿವರಗಳ ಪರಿಶೀಲನೆ ಸುಲಭ

ಇ-ಖಾತಾ ಡಿಜಿಟಲ್ ರೂಪದಲ್ಲಿರುವುದರಿಂದ ಆಸ್ತಿ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು. ದಾಖಲೆಯಲ್ಲಿರುವ ಹೆಸರು, ವಿಳಾಸ ಅಥವಾ ಇತರ ವಿವರಗಳಲ್ಲಿ ತಪ್ಪಿದ್ದರೆ ತಿದ್ದುಪಡಿ ಮಾಡಲು ಹಾಗೂ ಆಸ್ತಿ ಮಾಲೀಕತ್ವ ಬದಲಾವಣೆಯಾದಾಗ ಮ್ಯುಟೇಷನ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ನೆರವಾಗುತ್ತದೆ. ಇದರಿಂದ ಕಚೇರಿಗಳಿಗೆ ಪದೇಪದೆ ಭೇಟಿ ನೀಡುವ ಅಗತ್ಯ ಕಡಿಮೆಯಾಗುತ್ತದೆ.

ಇ-ಖಾತಾದಲ್ಲಿ ತಿದ್ದುಪಡಿ, ಮ್ಯುಟೇಷನ್‌ಗೆ ಆನ್‌ಲೈನ್ ಅವಕಾಶ

ವಾಟ್ಸಾಪ್ ಸಂದೇಶದೊಂದಿಗೆ ಜಿಬಿಎಯ ಅಧಿಕೃತ ಇ-ಆಸ್ತಿ ಪೋರ್ಟಲ್‌ನ ಲಿಂಕ್ ಕೂಡ ನೀಡಲಾಗುತ್ತದೆ. ಆಸ್ತಿ ಮಾಲೀಕರು ತಮ್ಮ ePID ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್‌ನಲ್ಲಿ (https://GBAeAasthi.karnataka.gov.in) ಇ-ಖಾತಾ ವಿವರಗಳನ್ನು ಪರಿಶೀಲಿಸಬಹುದು. ದಾಖಲೆಯಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಅಥವಾ ಮಾಲೀಕತ್ವ ಬದಲಾವಣೆ (ಮ್ಯುಟೇಷನ್) ಮಾಡಬೇಕಿದ್ದರೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಈ ಸೇವೆಯ ಮೂಲಕ ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಅನಗತ್ಯ ಕಚೇರಿ ಭೇಟಿಗಳನ್ನು ತಪ್ಪಿಸುವುದು, ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡುವುದು ಹಾಗೂ ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.

ಆಸ್ತಿ ಮಾಲೀಕರು ತಮ್ಮ ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿ ಇ-ಖಾತಾ ಪಿಡಿಎಫ್ ಪ್ರಮಾಣಪತ್ರವನ್ನು ಪಡೆದುಕೊಳ್ಳುವಂತೆ ಜಿಬಿಎ ಕೋರಿದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಇ-ಖಾತಾ ಪಡೆಯಲು ಯಾವುದೇ ಮಧ್ಯವರ್ತಿಗಳಿಗೆ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More