ಕೆಪಿಎಸ್ಸಿ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಗೆ ಶಿಫಾರಸು: ರಾಜಕೀಯ ಹಸ್ತಕ್ಷೇಪ ಕಡಿವಾಣಕ್ಕೆ ಸಮಿತಿ ಕೊಟ್ಟ ಸಲಹೆಗಳು ಹೀಗಿವೆ
ಕೆಪಿಎಸ್ಸಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ಆರ್.ವಿ. ದೇಶಪಾಂಡೆ ನೇತೃತ್ವದ ಸದನ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ರಾಜಕೀಯೇತರ ನೇಮಕಾತಿ, ಗ್ರೂಪ್ ‘ಸಿ’ ಹುದ್ದೆಗಳ ಪರೀಕ್ಷೆ ಕೆಇಎಗೆ ವಹಿಸುವುದು, ಒಂದೇ ಎಂಜಿನಿಯರಿಂಗ್ ನೇಮಕಾತಿ ಪರೀಕ್ಷೆ, ಡಿಜಿಟಲ್ ಪ್ರಶ್ನೆ ಬ್ಯಾಂಕ್ ಮತ್ತು ತಂತ್ರಜ್ಞಾನ ಆಧಾರಿತ ಪರೀಕ್ಷಾ ಭದ್ರತೆ ಸೇರಿದಂತೆ ಹಲವು ಬದಲಾವಣೆಗಳಿಗೆ ಸಲಹೆ ನೀಡಿರುವುದು ತಿಳಿದುಬಂದಿದೆ.

ಮುಖ್ಯಾಂಶಗಳು
- ಕೆಪಿಎಸ್ಸಿ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಡಿವಾಣ
- ಗ್ರೂಪ್ ‘ಸಿ’ ನೇಮಕಾತಿ ಕೆಇಎಗೆ ವಹಿಸುವ ಶಿಫಾರಸು
- ಪರೀಕ್ಷೆ, ಮೌಲ್ಯಮಾಪನದಲ್ಲಿ ಡಿಜಿಟಲ್ ಸುಧಾರಣೆಗಳ ಪ್ರಸ್ತಾಪ
ಬೆಂಗಳೂರು, ನವೆಂಬರ್ 26: ನೇಮಕಾತಿ ಅಕ್ರಮಗಳು ಮತ್ತು ನೇಮಕಾತಿ ವಿಳಂಬದ ಆರೋಪಗಳಿಂದ ವಿವಾದಕ್ಕೀಡಾಗಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲು ವಿಧಾನಮಂಡಲದ ಸಮಿತಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿರುವುದು ಮೂಲಗಳಿಂದ ತಿಳಿದುಬಂದಿದೆ. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ರಾಜಕೀಯ ಪ್ರಭಾವ ಇರಬಾರದು, ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂಬುದಕ್ಕೆ ಸಮಿತಿ ಒತ್ತು ನೀಡಿದೆ. ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ರಚನೆಯಾಗಿದ್ದ ಸದನ ಸಮಿತಿ, ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರಿಗೆ ಇತ್ತೀಚೆಗೆ ವರದಿ ಸಲ್ಲಿಸಿದೆ. ಕೆಪಿಎಸ್ಸಿಯ ಆಡಳಿತ, ಪರೀಕ್ಷೆ, ಮೌಲ್ಯಮಾಪನ, ಸಂದರ್ಶನ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಬದಲಾವಣೆ ತರಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯೇತರ ನೇಮಕಾತಿಗೆ ಆಯ್ಕೆ ಸಮಿತಿ
ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರಾಗಿ ಸೇವೆಯಲ್ಲಿರುವ ಅಥವಾ ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳನ್ನು ನೇಮಿಸುವಂತೆ ಸಮಿತಿ ಸಲಹೆ ನೀಡಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, ವಿಶ್ವವಿದ್ಯಾಲಯಗಳ ಕುಲಪತಿಗಳು, ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಅಧಿಕೃತ ಸದಸ್ಯರನ್ನಾಗಿ ನೇಮಿಸುವ ಪ್ರಸ್ತಾಪವೂ ವರದಿಯಲ್ಲಿದೆ.
ಅಧ್ಯಕ್ಷರು ಮತ್ತು ಸದಸ್ಯರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಇರುವ ಆಯ್ಕೆ ಸಮಿತಿ ರಚಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶವಿರಬಾರದು ಎಂಬುದು ಸಮಿತಿಯ ಪ್ರಮುಖ ಆಶಯವಾಗಿದೆ.
ಗ್ರೂಪ್ ‘ಸಿ’ ನೇಮಕಾತಿ ಕೆಇಎಗೆ?
ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿ ಹಾಗೂ ಒಎಂಆರ್ ಉತ್ತರ ಪತ್ರಿಕೆ ಆಧಾರಿತ ಪರೀಕ್ಷೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವಂತೆ ಸಮಿತಿ ಶಿಫಾರಸು ಮಾಡಿದೆ. ಕೆಪಿಎಸ್ಸಿ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿಗೆ ಮಾತ್ರ ಗಮನಹರಿಸಬೇಕು ಎಂಬ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಎಂಜಿನಿಯರ್ ಹುದ್ದೆಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ನಡೆಸುವ ಬದಲು, ಒಂದೇ ನೇಮಕಾತಿ ಪ್ರಕ್ರಿಯೆ ರೂಪಿಸುವಂತೆಯೂ ವರದಿ ಸೂಚಿಸಿದೆ. ಕರ್ನಾಟಕ ಎಂಜಿನಿಯರಿಂಗ್ ಸೇವೆ, ಲೋಕೋಪಯೋಗಿ ಇಲಾಖೆ, ನಗರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಎಂಜಿನಿಯರಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳು ಒಂದೇ ಪರೀಕ್ಷೆ ಬರೆಯಬಹುದು. ಅರ್ಜಿ ಸಲ್ಲಿಸುವಾಗ ಆದ್ಯತೆಯ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ರೂಪಿಸುವಂತೆ ಸಮಿತಿ ಸಲಹೆ ನೀಡಿದೆ.
ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನದಲ್ಲಿ ಸುಧಾರಣೆಗೆ ಶಿಫಾರಸು
ಪರೀಕ್ಷೆಗಳಿಗಾಗಿ ಕಂಪ್ಯೂಟರೀಕೃತ ಪ್ರಶ್ನೆ ಬ್ಯಾಂಕ್ ಸಿದ್ಧಪಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಪಠ್ಯಕ್ರಮಕ್ಕೆ ಅನುಗುಣವಾಗಿ ತಯಾರಿಸಿದ ಪ್ರಶ್ನೆಗಳನ್ನು ತಜ್ಞರಿಂದ ಪರಿಶೀಲಿಸಿ, ಭಾಷಾಂತರಿಸಿ ಚರ್ಚೆ ನಡೆಸಬೇಕು. ಡಿಜಿಟಲೀಕರಣದ ಬಳಿಕ ಪ್ರಶ್ನೆಗಳನ್ನು ಸುಲಭ, ಮಧ್ಯಮ ಮತ್ತು ಕಠಿಣ ವಿಭಾಗಗಳಾಗಿ ವರ್ಗೀಕರಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಪರೀಕ್ಷಾ ನಿಯಂತ್ರಕರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ಪ್ರಶ್ನೆಪತ್ರಿಕೆಯ ಗೌಪ್ಯತೆ ಉಲ್ಲಂಘನೆಯಾದರೆ ಸಂಬಂಧಪಟ್ಟ ಅಧಿಕಾರಿಯೇ ಹೊಣೆ ಹೊರಬೇಕು ಎಂಬ ಶಿಫಾರಸೂ ಇದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಳಂಬ ತಪ್ಪಿಸಲು ರಾಜ್ಯದಲ್ಲಿ ಕೆಪಿಎಸ್ಸಿಯ ನಾಲ್ಕು ಉಪಕೇಂದ್ರಗಳನ್ನು ಸ್ಥಾಪಿಸುವಂತೆ ಸಮಿತಿ ಸಲಹೆ ನೀಡಿದೆ. ಪರೀಕ್ಷೆ ನಡೆದ ದಿನವೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ವೆಬ್ಸೈಟ್ಗೆ ಅಪ್ಲೋಡ್ ಮಾಡಬೇಕು. ಉತ್ತರ ಕೀ ಕೂಡ ಅದೇ ದಿನ ಪ್ರಕಟಿಸುವಂತೆ ಶಿಫಾರಸು ಮಾಡಲಾಗಿದೆ.
ಸಂದರ್ಶನ, ವಾರ್ಷಿಕ ಪರೀಕ್ಷೆ ಮತ್ತು ತಂತ್ರಜ್ಞಾನ ಬಳಕೆ
ಸಂದರ್ಶನದ ಆಯ್ಕೆ ಸಮಿತಿಯಲ್ಲಿ ಕೆಪಿಎಸ್ಸಿಯ ಒಬ್ಬ ಸದಸ್ಯರು ಹಾಗೂ ಮೂವರು ತಜ್ಞರು ಮಾತ್ರ ಇರಬೇಕು ಎಂದು ವರದಿ ಸೂಚಿಸಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಕನಿಷ್ಠ 20 ವರ್ಷಗಳ ಬೋಧನಾ ಅನುಭವ ಹೊಂದಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಥವಾ ಉಪನ್ಯಾಸಕರಿಂದ ಮಾಡಿಸಬೇಕು ಎಂಬ ಸಲಹೆಯೂ ಇದೆ.
ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಪರೀಕ್ಷೆಗಳನ್ನು ಪ್ರತಿವರ್ಷ ಕಡ್ಡಾಯವಾಗಿ ನಡೆಸಬೇಕು. ವರ್ಷದ ಆರಂಭದಲ್ಲೇ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಬೇಕು. ಒಂದೇ ಪಠ್ಯಕ್ರಮ ಹೊಂದಿರುವ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಒಂದೇ ಸಮಯದಲ್ಲಿ ನಡೆಸುವಂತೆ ಸಮಿತಿ ಶಿಫಾರಸು ಮಾಡಿದೆ.
ಕೆಪಿಎಸ್ಸಿಗೆ ಪ್ರತ್ಯೇಕ ಡೇಟಾ ಸೆಂಟರ್ ಸ್ಥಾಪನೆ, ಅಭ್ಯರ್ಥಿಗಳಿಗೆ ಒಮ್ಮೆ ಮಾತ್ರ ನೋಂದಣಿ ಮಾಡುವ ವ್ಯವಸ್ಥೆ ಹಾಗೂ ಪ್ರತಿ ಅರ್ಜಿಗೂ ದಾಖಲೆಗಳನ್ನು ಮತ್ತೆ ಮತ್ತೆ ಸಲ್ಲಿಸುವ ಅಗತ್ಯ ತಪ್ಪಿಸುವಂತೆ ಸಲಹೆ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಾಗ ಮತ್ತು ಪರೀಕ್ಷೆಗೆ ಹಾಜರಾಗುವಾಗ ಲೈವ್ ಫೋಟೋ ತೆಗೆದುಕೊಳ್ಳುವುದು, ಮುಖದ ದೃಢೀಕರಣ ಹಾಗೂ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಜಾರಿಗೆ ತರುವ ಪ್ರಸ್ತಾಪವೂ ಇದೆ.
ಆಯೋಗಕ್ಕೆ ಕಾನೂನು ಸಂಬಂಧಿತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಪ್ರತ್ಯೇಕ ಕಾನೂನು ವಿಭಾಗ ಸ್ಥಾಪಿಸಬೇಕು. ಕೆಪಿಎಸ್ಸಿ ಕಾರ್ಯದರ್ಶಿ, ಪರೀಕ್ಷಾ ನಿಯಂತ್ರಕ ಮತ್ತು ಜಂಟಿ ಪರೀಕ್ಷಾ ನಿಯಂತ್ರಕರಿಗೆ ಕನಿಷ್ಠ ಮೂರು ವರ್ಷಗಳ ಅವಧಿ ನಿಗದಿಪಡಿಸಬೇಕು. ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಬಾರದು ಎಂಬ ಶಿಫಾರಸುಗಳನ್ನೂ ಮಾಡಲಾಗಿದೆ.
ಕೆಪಿಎಸ್ಸಿಯ ನೇಮಕಾತಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಈ ಶಿಫಾರಸುಗಳನ್ನು ಮಾಡಲಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಂದಿನ ನಿರ್ಧಾರ ಮಹತ್ವದ್ದಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




