ಬೆಂಗಳೂರು: ಮೇ 20 ಹಾಗೂ 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ಅಥವಾ ಸಿಇಟಿ ಪರೀಕ್ಷೆ (CET Exam) ನಡೆಯಲಿದ್ದು,, ಪಿಯುಸಿ ಪೂರಕ ಪರೀಕ್ಷೆ ಬರೆಯಲು ಉದ್ದೇಶಿಸಿರುವವರೂ ಕೂಡ ಸಿಇಟಿ ಪರೀಕ್ಷೆ ಬರೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬುಧವಾರ ತಿಳಿಸಿದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದು ಕೆಲವರು ಪೂರಕ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಅಂಥವರೂ ಸಿಇಟಿ ಪರೀಕ್ಷೆ ಬರೆಯಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಪೂರಕ ಪರೀಕ್ಷೆ ಬರೆಯುವವರು ಸಿಇಟಿಗೆ ಹಾಜರಾದರೆ ಮಾತ್ರ ಅವರ ಪೂರಕ ಪಿಯು ಪರೀಕ್ಷೆ ಫಲಿತಾಂಶದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವವರು ಸಿಇಟಿ ಪರೀಕ್ಷೆಗೆ ಹಾಜರಾದರೆ ಸೀಟು ಹಂಚಿಕೆ ವೇಳೆ ಪೂರಕ ಪರೀಕ್ಷೆ ಅಂಕಗಳನ್ನು ಪರಿಗಣಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ವಿದ್ಯಾರ್ಥಿಗಳಾಗಲೀ, ಪೋಷಕರಾಗಲೀ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಶಾಲೆಗಳಲ್ಲಿ ಪಠ್ಯ ವಿಷಯವಾಗಿ ಕೃಷಿಯನ್ನು ಸೇರಿಸಲು ಆದೇಶ
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 21ರಂದು ಪ್ರಕಟಗೊಂಡಿದ್ದು. ಈ ಬಾರಿ ದಾಖಲೆಯ, ಅಂದರೆ ಶೇ 74.67 ಫಲಿತಾಂಶ ಬಂದಿತ್ತು. ಒಟ್ಟು 7,02,067 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಶೇ 95.34 ಫಲಿತಾಂಶ ದಾಖಲಿಸುವ ಪ್ರಥಮ ಸ್ಥಾನವನ್ನು ಪಡೆದಿತ್ತು. ಉಡುಪಿ ಜಿಲ್ಲೆ ಶೇ 95.24 ಗಳಿಸಿ ಎರಡನೇ ಸ್ಥಾನ ಪಡೆದರೆ, ಕೊಡಗು ಜಿಲ್ಲೆ ಶೇ 90.55 ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದಿತ್ತು.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ನೋಂದಣಿ ಮಾಡಲು ಏಪ್ರಿಲ್ 21ರಿಂದಲೇ ಅವಕಾಶ ಕಲ್ಪಿಸಲಾಗಿದೆ. ದಂಡರಹಿತವಾಗಿ ನೋಂದಣಿ ಮಾಡಿಕೊಳ್ಳಲು ಇಂದು (ಏಪ್ರಿಲ್ 26) ಕೊನೆಯ ದಿನವಾಗಿದೆ. ದಂಡಸಹಿತ ನೋಂದಣಿ ಮಾಡಿಕೊಳ್ಳಲು ಏಪ್ರಿಲ್ 27 ರಿಂದ ಮೇ 2ರ ವರೆಗೆ ಅವಕಾಶ ನೀಡಲಾಗಿದೆ.
ಶಿಕ್ಷಣಕ್ಕೆ ಸಂಭಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 pm, Wed, 26 April 23