
ಬೆಂಗಳೂರು, ಅ.27: ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿ ಸುದ್ದಿ ನೀಡಿದೆ. ಸಿಇಟಿ (CET), ಪಿಜಿ ಪ್ರವೇಶ ಪರೀಕ್ಷೆಗಳು ಹಾಗೂ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿ ಬಾರಿಯೂ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ದಾಖಲೆಗಳನ್ನು ಮರು ಅಪ್‌ಲೋಡ್ ಮಾಡುವ ಕಿರಿಕಿರ ತಪ್ಪಿಸಲು ‘ಒನ್ ಟೈಮ್ ರಿಜಿಸ್ಟ್ರೇಷನ್’ (One Time Registration) ವ್ಯವಸ್ಥೆಯನ್ನು ಜಾರಿಗೆ ತರಲು ಕೆಇಎ ಯೋಜನೆ ರೂಪಿಸಿದೆ. ಇನ್ಮುಂದೆ ಕರ್ನಾಟಕದಲ್ಲಿ ಕೆಇಎ ನಡೆಸುವ ಎಲ್ಲಾ ಪರೀಕ್ಷೆಗಳಿಗೆ ಆಧಾರ್ ನಂಬರ್ ಆಧಾರಿತ ಒಂದೇ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ.
ಪಿಯುಸಿ ಶಿಕ್ಷಣದ ಬಳಿಕ ಅಭ್ಯರ್ಥಿಗಳು ಒಮ್ಮೆ ಆಧಾರ್ ಆಧಾರಿತ ನೋಂದಣಿ ಮಾಡಿಕೊಂಡರೆ ಆ ಅಭ್ಯರ್ಥಿಗೆ ‘ಯೂನಿಕ್ ನಂಬರ್’ ಜೆನರೇಟ್ ಆಗಲಿದೆ. ಈ ಸಂಖ್ಯೆಯ ಮೂಲಕ ಎಲ್ಲಾ ದಾಖಲೆಗಳು ಕೆಇಎಗೆ ಒಮ್ಮೆ ಸಲ್ಲಿಕೆಯಾದರೆ ಶಾಶ್ವತ ಪ್ರೊಫೈಲ್ ಕ್ರಿಯೇಟ್ ಆಗುತ್ತದೆ.
ಆಧಾರ್ ಸಂಖ್ಯೆ, ಯೂನಿಕ್ ನಂಬರ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಹುದ್ದೆಗಳಿಗೆ, ಸಿಇಟಿ ಹಾಗೂ ಪಿಜಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.
ಒಮ್ಮೆ ನೋಂದಣಿ ಮಾಡಿಕೊಂಡರೆ ಮುಂದಿನ ಪರೀಕ್ಷೆಗಳು ಹಾಗೂ ಕೌನ್ಸೆಲಿಂಗ್‌ಗೂ ಅದೇ ಮಾಹಿತಿ ಮತ್ತು ದಾಖಲೆಗಳು ಬಳಕೆಯಾಗಲಿವೆ. ಪ್ರತಿ ಬಾರಿಯೂ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ದಾಖಲೆಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ಪರೀಕ್ಷಾ ಅಕ್ರಮ ತಡೆಯಲು ಕೆಇಎ ಮಾಸ್ಟರ್ ಪ್ಲ್ಯಾನ್; ಇನ್ಮುಂದೆ ಟ್ರಿಪಲ್ ಒಎಂಆರ್ ಶೀಟ್ ವ್ಯವಸ್ಥೆ
ಈ ನೂತನ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದಾಗಿ ಪರೀಕ್ಷಾ ಅಕ್ರಮಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬಹುದು. ಒಬ್ಬನೇ ಅಭ್ಯರ್ಥಿ ಬಹು ಅರ್ಜಿಗಳನ್ನು ಸಲ್ಲಿಸುವುದನ್ನು ಪತ್ತೆ ಹಚ್ಚಿ ತಡೆಯಲು ಕೆಇಎಗೆ ಸಹಕಾರಿಯಾಗಲಿದೆ. ಮುಂಬರುವ ಸಿಇಟಿ ಅರ್ಜಿಯಿಂದಲೇ ಈ ಹೊಸ ನೋಂದಣಿ ವ್ಯವಸ್ಥೆಯನ್ನು ಪರಿಚಯಿಸಲು ಕೆಇಎ ಭರದಿಂದ ಸಿದ್ಧತೆ ನಡೆಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ