Education: 1ನೇ ತರಗತಿಗೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿ ನಿಗದಿ ಮಾಡಿದ ರಾಜ್ಯಗಳಿಗೆ ನಿರ್ದೇಶನ ನೀಡಿದ ಕೇಂದ್ರ

|

Updated on: Feb 22, 2023 | 9:35 PM

ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಿ ಕೇಂದ್ರ ಶಿಕ್ಷಣ ಇಲಾಖೆಯು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.

Education: 1ನೇ ತರಗತಿಗೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿ ನಿಗದಿ ಮಾಡಿದ ರಾಜ್ಯಗಳಿಗೆ ನಿರ್ದೇಶನ ನೀಡಿದ ಕೇಂದ್ರ
Follow us on

ನವದೆಹಲಿ: ಒಂದನೇ ತರಗತಿ ಪ್ರವೇಶಾತಿಗೆ (admission) ಮಕ್ಕಳ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿ ಮಾಡುವಂತೆ ಕೇಂದ್ರದ ಶಿಕ್ಷಣ ಸಚಿವಾಲಯವು (Ministry of Education) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) (new National Education Policy (NEP) ಪ್ರಕಾರ, ಎಲ್ಲ ಮಕ್ಕಳ ಆರಂಭಿಕ ಶಿಕ್ಷಣದ 5 ವರ್ಷದ (3ರಿಂದ 8 ವರ್ಷದವರೆಗೆ) ಕಲಿಕೆಯಲ್ಲಿ 3 ವರ್ಷ ಪ್ರೀಸ್ಕೂಲ್ ಶಿಕ್ಷಣ ಮತ್ತು 1 ಹಾಗೂ 2ನೇ ತರಗತಿಯ ವ್ಯಾಸಂಗ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಶಿಕ್ಷಣ ಸಚಿವರಿಂದ ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೋಧನಾ ಕಲಿಕಾ ಸಾಮಗ್ರಿ ‘ಜಾದುಯಿ ಪಿತಾರಾ’ ಬಿಡುಗಡೆ

ಪ್ರಿಸ್ಕೂಲ್‌ನಿಂದ 2ನೇ ತರಗತಿಯವರೆಗಿನ ಮಕ್ಕಳ ತಡೆರಹಿತ ಕಲಿಕೆ ಮತ್ತು ಬೆಳವಣಿಗೆಯನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಉತ್ತೇಜಿಸುತ್ತದೆ. ಅಂಗನವಾಡಿಗಳು ಅಥವಾ ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ಎನ್‌ಜಿಒ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಮೂರು ವರ್ಷಗಳ ಗುಣಮಟ್ಟದ ಪ್ರಿಸ್ಕೂಲ್ ಶಿಕ್ಷಣವನ್ನು ಖಾತ್ರಿಪಡಿಸುವ ಮೂಲಕ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ.

ಹೊಸ ಶಿಕ್ಷಣ ನೀತಿಯ ಜೊತೆ ವಯಸ್ಸನ್ನು ಹೊಂದಿಸಲು ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಆರು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿರಬೇಕು ಎಂಬ ನಿಯಮವನ್ನು ಜಾರಿ ಮಾಡಲು ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಿ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಳೆದ ವರ್ಷ ಅಂದ್ರೆ 2022ರಲ್ಲಿ ಆದೇಶ ಹೊರಡಿಸಿತ್ತು. ಆಯಾ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಕಿಗೆ ಕಡ್ಡಾಯವಾಗಿ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ. ಶಿಕ್ಷಣ ಹಕ್ಕು ಕಾಯ್ದೆ 2009 (Right To Education – RTE) ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅನ್ವಯ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಲ್​ಕೆಜಿ ಪ್ರವೇಶಕ್ಕೆ ಮಗುವಿಗೆ 4 ವರ್ಷ, 10 ತಿಂಗಳು ತುಂಬಿರಬೇಕು ಎಂದು ನಿಯಮ ಮಾಡಲಾಯಿತು. ಅದಕ್ಕೂ ಮೊದಲು ಎಲ್​ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳು ಆಗಿದ್ದರೆ ಸಾಕಾಗಿತ್ತು. ಅದೇ ರೀತಿ 1ನೇ ತರಗತಿ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ನಡುವೆ ಮಗುವಿನ ವಯಸ್ಸು ಇದ್ದರೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಿತ್ತು.

ಇನ್ನಷ್ಟು ಶಿಕ್ಷಣ ಕುರಿತಾದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ