ಕೇಂದ್ರ ಶಿಕ್ಷಣ ಸಚಿವರಿಂದ ಆರಂಭಿಕ ಬಾಲ್ಯ ಶಿಕ್ಷಣಕ್ಕೆ ಬೋಧನಾ ಕಲಿಕಾ ಸಾಮಗ್ರಿ ‘ಜಾದುಯಿ ಪಿತಾರಾ’ ಬಿಡುಗಡೆ
'ಜಾದುಯಿ ಪಿತಾರಾ' (ಜಾದೂ ಪೆಟ್ಟಿಗೆ) ಆಟದ ಪುಸ್ತಕಗಳು, ಚಟುವಟಿಕೆ ಪುಸ್ತಕಗಳು, ವರ್ಕ್‌ಶೀಟ್‌ಗಳು, ಆಟಿಕೆಗಳು, ಶಿಕ್ಷಕರು ಮತ್ತು ತರಬೇತುದಾರರಿಗೆ ಕೈಪಿಡಿಗಳು, ಫ್ಲ್ಯಾಷ್‌ಕಾರ್ಡ್‌ಗಳು, ಸ್ಟೋರಿ ಕಾರ್ಡ್‌ಗಳು, ಪೋಸ್ಟರ್‌ಗಳು, ಒಗಟುಗಳು, ಬೊಂಬೆಗಳು ಮತ್ತು ಮಕ್ಕಳ ಮ್ಯಾಗಜಿನ್ಗಳನ್ನು ಒಳಗೊಂಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಸೋಮವಾರ (ಫೆಬ್ರವರಿ 20) ನವದೆಹಲಿಯಲ್ಲಿ ಮೂರರಿಂದ ಎಂಟು ವರ್ಷ ವಯಸ್ಸಿನ ಮಕ್ಕಳಿಗೆ “ಜಾದುಯಿ ಪಿತಾರಾ” ಎಂಬ ಆಟದ ಆಧಾರಿತ ಕಲಿಕಾ ಸಾಮಗ್ರಿಯನ್ನು ಬಿಡುಗಡೆ ಮಾಡಿದರು. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕಲಿಕಾ ಸಾಮಗ್ರಿಯನ್ನು ಕೇಂದ್ರ ಸರ್ಕಾರ (Central Government) ನಡೆಸುವ ಕನಿಷ್ಠ 1,200 ಶಾಲೆಗಳಲ್ಲಿ (Schools) ಕಡ್ಡಾಯಗೊಳಿಸಲಾಗುವುದು ಎಂದು ಘೋಷಿಸಿದರು. ‘ಜಾದೂಯ್ ಪಿತಾರಾ’ (ಜಾದೂ ಪೆಟ್ಟಿಗೆ) ಆಟದ ಪುಸ್ತಕಗಳು, ಚಟುವಟಿಕೆ ಪುಸ್ತಕಗಳು, ವರ್ಕ್‌ಶೀಟ್‌ಗಳು, ಆಟಿಕೆಗಳು, ಶಿಕ್ಷಕರು ಮತ್ತು ತರಬೇತುದಾರರಿಗೆ ಕೈಪಿಡಿಗಳು, ಫ್ಲ್ಯಾಷ್‌ಕಾರ್ಡ್‌ಗಳು, ಸ್ಟೋರಿ ಕಾರ್ಡ್‌ಗಳು, ಪೋಸ್ಟರ್‌ಗಳು, ಒಗಟುಗಳು, ಬೊಂಬೆಗಳು ಮತ್ತು ಮಕ್ಕಳ ಮ್ಯಾಗಜಿನ್ಗಳನ್ನು ಒಳಗೊಂಡಿದೆ.
‘ಇದೊಂದು ಹೊಸ ರೀತಿಯ, ಮಕ್ಕಳ-ಕೇಂದ್ರಿತ ಕಲಿಕೆಯ ಸಾಮಾಗ್ರಿ. ಇದು ಚಿಕ್ಕ ಮಕ್ಕಳನ್ನು ಜೀವನದ ದೀರ್ಘಾವಧಿಯ ಕಲಿಕೆಯ ಪ್ರಯಾಣಕ್ಕೆ ಸಿದ್ಧಪಡಿಸುತ್ತದೆ. ಅದಲ್ಲದೆ, ಇದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಪ್ರಮುಖ ಶಿಫಾರಸುಗಳಲ್ಲಿ ಒಂದನ್ನು ಪೂರೈಸುತ್ತದೆ, ”ಎಂದು ಪ್ರಧಾನ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಗೆ ಅನುಗುಣವಾಗಿ, ಸರ್ಕಾರವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಲ್ಯ ಶಿಕ್ಷಣ ಮತ್ತು ಆರಂಭಿಕ ಆರೈಕೆಗಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು (NCF) ಪ್ರಾರಂಭಿಸಿತು. ಆ ನೀತಿಯ ಪ್ರಕಾರ ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳಿಗೆ ಯಾವುದೇ ಪಠ್ಯಪುಸ್ತಕಗಳನ್ನು ಶಿಫಾರಸು ಮಾಡಬಾರದು. ಆಟಿಕೆಗಳು, ಆಟ, ಜೀವನ ಅನುಭವ ಮತ್ತು ಮಾತೃಭಾಷೆಯ ಬಳಕೆಯನ್ನು ಆಧರಿಸಿ ಕಲಿಕೆಯನ್ನು ಉತ್ತೇಜಿಸಲು ಇದು ಒತ್ತು ನೀಡಿತ್ತು. ಅದರಂತೆ, ಬಾಲವಾಟಿಕದಲ್ಲಿ (ನರ್ಸರಿ, ಎಲ್‌ಕೆಜಿ, ಮತ್ತು ಯುಕೆಜಿ) ದಾಖಲಾದ ಮಕ್ಕಳಿಗಾಗಿ ಸಚಿವಾಲಯವು ಆಟದ ಆಧಾರಿತ ವಸ್ತುಗಳನ್ನು ಪ್ರಾರಂಭಿಸಿದೆ.
“ಬಾಲವಟಿಕ 1 (ನರ್ಸರಿ) ಮತ್ತು 2 (ಎಲ್‌ಕೆಜಿ) ಗಾಗಿ ಯಾವುದೇ ಪುಸ್ತಕ ಇರುವುದಿಲ್ಲ, ಆದರೆ ಬಾಲವಟಿಕ 3 (ಯುಕೆಜಿ) ನಲ್ಲಿ ವಿದ್ಯಾರ್ಥಿಗಳಿಗೆ ಪ್ಲೇಬುಕ್ ಅನ್ನು ಪರಿಚಯಿಸಲಾಗುವುದು. ಪಠ್ಯಪುಸ್ತಕಗಳನ್ನು 1 ಮತ್ತು 2 ನೇ ತರಗತಿಗಳಲ್ಲಿ ಮಾತ್ರ ಪರಿಚಯಿಸಲಾಗುವುದು ಮತ್ತು ಈ ಪುಸ್ತಕಗಳಲ್ಲಿ ಸಚಿತ್ರ ವಿವರಣೆಗಳೇ ಪ್ರಮುಖವಾಗಿರುತ್ತದೆ.” ಎಂದು ಪ್ರಧಾನ್ ತಿಳಿಸಿದರು.
ದೈಹಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆ, ನೈತಿಕ ಅಭಿವೃದ್ಧಿ, ಅರಿವಿನ ಅಭಿವೃದ್ಧಿ, ಭಾಷೆ ಮತ್ತು ಸಾಕ್ಷರತೆ ಅಭಿವೃದ್ಧಿ, ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಎಂಬ ಐದು ಕ್ಷೇತ್ರಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಈ ಕಲಿಕಾ ಸಾಮಗ್ರಿಯು ಒತ್ತು ನೀಡುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕಲಿಕಾ ಸಾಮಗ್ರಿಗಳು ಈಗಾಗಲೇ 13 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ‘ಜಾದುಯಿ ಪಿತಾರಾ’ ನಲ್ಲಿರುವ ವಸ್ತುಗಳನ್ನು ಎಲ್ಲಾ ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುವಂತೆ ಸಚಿವರು ಒತ್ತಾಯಿಸಿದರು.
ಇದನ್ನೂ ಓದಿ: ಇಂಜಿನಿಯರಿಂಗ್, ಫಾರ್ಮಸಿ ಪ್ರವೇಶ ಪರೀಕ್ಷಾ ದಿನಾಂಕ ಪ್ರಕಟ; ವೇಳಾಪಟ್ಟಿ ಹೀಗಿದೆ
ನಮ್ಮ ದೇಶದ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಪರಿವರ್ತಿಸಲು ಎಲ್ಲಾ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗಳಿಗೆ (SCERT) ಈ ‘ಜಾದೂ ಪೆಟ್ಟಿಗೆ’ ಲಭ್ಯವಿದೆ. ಪ್ರಧಾನ್ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ತನ್ನ ಅಂಗಸಂಸ್ಥೆ ಶಾಲೆಗಳಲ್ಲಿ ಈ ಬೋಧನಾ-ಕಲಿಕೆ ಸಾಮಗ್ರಿಯನ್ನು ಅಳವಡಿಸಲು ವಿನಂತಿಸಿದರು.
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Tue, 21 February 23