Parenting: ಮೊಬೈಲ್​ ಈಗ ನಮ್ಮ ಮಕ್ಕಳ ಹಕ್ಕು!?

|

Updated on: Apr 06, 2022 | 1:30 PM

Parenting : ‘ಸಾಮಾನ್ಯವಾಗಿ ಮಕ್ಕಳಲ್ಲಾಗುವ ವ್ಯತ್ಯಾಸಗಳ ಬಗ್ಗೆಯಷ್ಟೇ ಪೋಷಕರ ಗಮನವಿರುವುದೇ ವಿನಃ ತಮ್ಮ ಭಾವ-ಸ್ವಭಾವಗಳು ಮಕ್ಕಳ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡುತ್ತಿವೆ ಎನ್ನುವುದರ ಪರಿವೆ ಇರುವುದಿಲ್ಲ.’ ಸುಷ್ಮಸಿಂಧು

Parenting: ಮೊಬೈಲ್​ ಈಗ ನಮ್ಮ ಮಕ್ಕಳ ಹಕ್ಕು!?
ಪ್ರಾತಿನಿಧಿಕ ಚಿತ್ರ
Follow us on

Children : ಈಗ ಮಕ್ಕಳ ಪ್ರಪಂಚಕ್ಕೆ ಬರುವ ಎಲ್ಲ ಮಾಹಿತಿಯೂ ಆನ್​ಲೈನ್ ಮೂಲಕವೇ. ಮೊದಲಾದರೆ ಶಾಲೆಯ ಚೌಕಟ್ಟಿನ ವಾತಾವರಣದಲ್ಲಿ ಓರಗೆಯ ಮಕ್ಕಳಿನೊಡನೆಯೇ ಆಸಕ್ತಿ, ಕುತೂಹಲ ತಣಿಸುವ ವಿಚಾರ ವಿನಿಮಯ, ಮನೋರಂಜನೆಯಷ್ಟೇ ಇರುತ್ತಿತ್ತು. ಅಂತೆಯೇ ಮಕ್ಕಳು ಪಡೆಯುವ ಮಾಹಿತಿಯೂ ನಿಯಮಿತವಾಗಿತ್ತು. ಆದರೆ ಇಂದು ಆ ಚೌಕಟ್ಟು ಮುರಿದಿದೆ. ಮೊಬೈಲ್ ಮಕ್ಕಳ ಹಕ್ಕಾಗಿದೆ. ತಮ್ಮ ಕಾರ್ಯಕ್ಕೆ ಅಡ್ಡಿಪಡಿಸದಂತೆ ಮಕ್ಕಳನ್ನು ಏನಾದರೊಂದರಲ್ಲಿ ತೊಡಗಿಸಲು ತಾವೇ ಮೊಬೈಲ್ ಕೊಡುವ ಅನಿವಾರ್ಯತೆ ಪೋಷಕರಿಗಿಂದು ಎದುರಾಗಿದೆ. ಹಾಗಾಗಿ ಅಪಾಯಕಾರಿಯಾದ, ವಿಚಲಿತಗೊಳಿಸುವ ವಿಷಯಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆಯೇ ಎಂದು ನಿಗಾ ವಹಿಸಬೇಕಾದ ಅಗತ್ಯವೂ ಹಿಂದೆಂದಿಗಿಂತ ಜಾಸ್ತಿಯಿದೆ. ಮಕ್ಕಳನ್ನು ನಿಯಂತ್ರಣದಲ್ಲಿಡಲು ಗಂಟೆಗಟ್ಟಲೆ, ಅನಿಯಮಿತವಾಗಿ ಮೊಬೈಲ್ ಬಳಸುವ ಅವಕಾಶ ನೀಡುವ ಅಭ್ಯಾಸದಿಂದ ಮುಂದೆ ಅನಿಯಂತ್ರಿತತೆ ಹೆಚ್ಚಾಗುವುದೇ ವಿನಃ ನಿಯಂತ್ರಣವಲ್ಲ. ಹಾಗಾಗಿ ಮಕ್ಕಳ ಮನೋವಿಕಾಸ, ಆರೋಗ್ಯ ದೃಷ್ಟಿಯಲ್ಲಿರಿಸಿ ಅವಶ್ಯಕತೆ ಮತ್ತು ಮನೋರಂಜನೆಗೆ ತಕ್ಕಷ್ಟು ಸ್ಕ್ರೀನ್ ಟೈಮ್ ಒದಗಿಸುವ ಪರಿಪಾಠ ಇರಿಸಿಕೊಳ್ಳುವುದೊಳಿತು.
ಸುಷ್ಮಸಿಂಧು, ಮನಃಶಾಸ್ತ್ರಜ್ಞೆ (SushmaSindhu)

 

ಮಕ್ಕಳು ಹೆಚ್ಚು ಸಮಯ ನಮ್ಮ ಕಣ್ಣ ಮುಂದೆ ಕಳೆಯುತ್ತಿರುವುದೇನೋ ನಿಜ. ಹಾಗೆಂದ ಮಾತ್ರಕ್ಕೆ ಮಾನಸಿಕವಾಗಿ ಸುಸ್ಥಿರವಾಗಿದ್ದಾರೆ ಎಂದು ಅರ್ಥವಲ್ಲ. ಅಸ್ಥಿರತೆ, ಭಯ, ಅಭದ್ರತೆ, ರೋಗಭೀತಿ, ಮುಕ್ತವಾಗಿ ಆಡಲು,  ಎಲ್ಲರೊಂದಿಗೆ ಬೆರೆಯಲು ಇರುವ ನಿರ್ಬಂಧಗಳು, ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯಬೇಕಾದ ಪರಿಸ್ಥಿತಿ, ಏಕತಾನತೆ, ಸಾಮಾಜಿಕ ಪ್ರತ್ಯೇಕತೆ, ಪರಿಣಾಮ ಬೀರುವ ಪೋಷಕರ ಪ್ರಯಾಸ, ಒತ್ತಡಗಳು, ಮೊದಲಾದವು ಅವರಲ್ಲಿ ಆತಂಕ, ಗೊಂದಲಗಳನ್ನು ಸೃಷ್ಟಿಸುತ್ತಿರುತ್ತದೆ. ತಾಳ್ಮೆಯಿಂದ ಮಕ್ಕಳ ಮಾತುಗಳನ್ನು ಆಲಿಸಿ ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಒಂದೊಳ್ಳೆಯ ಬಂಧವನ್ನು ಏರ್ಪಡಿಸಿಕೊಂಡರೆ ಅವೆಷ್ಟೋ ಸಮಸ್ಯೆಗಳು ಸಣ್ಣದರಲ್ಲೇ ಪರಿಹಾರ ಕಂಡುಬಿಡುವವು.

ಸ್ಪಂದನೆ ಮುಖ್ಯ
ಕುತೂಹಲ, ಪ್ರಶ್ನೆಗಳು, ದ್ವಂದ್ವಗಳು ಬೆಳೆಯುವ ಹಂತದಲ್ಲಿ ಸಾಮಾನ್ಯ. ಕಂಡಿದ್ದೆಲ್ಲದರ ಬಗೆಗೆ ಬೆರಗು ಪಡುತ್ತಾ ಪ್ರಶ್ನೆಗಳ ಮಳೆ ಸುರಿಸುವ ಮಕ್ಕಳನ್ನು ತಮ್ಮ ಕಾರ್ಯದೊತ್ತಡದ ನಡುವೆಯೂ ಸಹಿಸಿ, ಸಂಭಾಳಿಸುವುದು ಸವಾಲೇ ಸರಿ. ಹಾಗೆಂದು ಅವರ ಉತ್ಸಾಹವನ್ನು ಕುಂದಿಸದೇ ಪ್ರೀತ್ಯಾದರಗಳಿಂದ  ಕಾಣುವುದು ತರವೂ ಹೌದು ಹಾಗೇ ನಮ್ಮ ಕರ್ತವ್ಯವೂ! ಕುತೂಹಲಗಳಿಗೆ ಸ್ಪಂದಿಸಿ, ಅವರ ವಯೋಮಾನಕ್ಕೆ  ಸರಿಯಾದ ಮಾಹಿತಿಯನ್ನು ಪೋಷಕರೇ ಒದಗಿಸಲು ಪ್ರಯತ್ನಿಸಿದರೆ ಮಾಹಿತಿಗಾಗಿ ಬೇರೆಯವರ, ಬೇರೆ ಮೂಲಗಳ ಮೇಲಿನ ಅವಲಂಬನೆಯನ್ನು ಆದಷ್ಟೂ ಕಡಿಮೆ ಮಾಡಬಹುದು. ಹಾಗೆಯೇ ಮಾಹಿತಿ ಅಲಭ್ಯವಾದಾಗ ಆಗುವ ಅನಗತ್ಯ ಭಯ, ಅಸುರಕ್ಷತೆಗಳನ್ನೂ ಹೋಗಲಾಡಿಸಬಹುದು. ಮಕ್ಕಳು ಚೈತನ್ಯದ ಬುಗ್ಗೆಗಳು. ನಮ್ಮ ಉತ್ಸಾಹ, ಉತ್ಸುಕತೆಗೂ ಮಕ್ಕಳ ಉತ್ಸಾಹ, ಉತ್ಸುಕತೆಗೂ ಅಜಗಜಾಂತರ. ಈ ಅಂತರದಿಂದಲೇ ಅವರ ಅತಿ ಕುತೂಹಲ, ಅತ್ಯುತ್ಸಾಹ ನಮಗೆ ಅನಪೇಕ್ಷಿತ ಕಿರಿಕಿರಿ ಎನಿಸುವುದು ಎನ್ನುವುದನ್ನು ನೆನಪಿನಲ್ಲಿಡಬೇಕು.

ಪೋಷಕರ ಪ್ರಯಾಸದ ನಕಾರಾತ್ಮಕತೆ
ಸಾಮಾನ್ಯವಾಗಿ ಮಕ್ಕಳಲ್ಲಾಗುವ ವ್ಯತ್ಯಾಸಗಳ ಬಗ್ಗೆಯಷ್ಟೇ ಪೋಷಕರ ಗಮನವಿರುವುದೇ ವಿನಃ ತಮ್ಮ ಭಾವ-ಸ್ವಭಾವಗಳು ಮಕ್ಕಳ ಮೇಲೆ ಹೇಗೆ ಪರಿಣಾಮವನ್ನುಂಟು ಮಾಡುತ್ತಿವೆ ಎನ್ನುವುದರ ಪರಿವೆ ಇರುವುದಿಲ್ಲ. ತಮ್ಮ ಕೆಲಸ, ಮಕ್ಕಳ ಕೆಲಸಗಳ ಒತ್ತಡದ ನಡುವೆ ತಮ್ಮ ಬಗೆಗೆ ಯಾವ ರೀತಿಯೂ ಕಾಳಜಿ ಮಾಡಿಕೊಳ್ಳಲಾಗದ ಸಂದರ್ಭದಲ್ಲಿ ಆಗುವ ಪ್ರಯಾಸವನ್ನು ಸಂಭಾಳಿಸಿಕೊಳ್ಳಲಾಗದಿರುವುದೂ ಮಕ್ಕಳ ಮೇಲೆಯೇ ಪರಿಣಾಮ ಬೀರುತ್ತಿರುತ್ತದೆ. ನಮ್ಮ ಭಾವನಾತ್ಮಕ ಸಂಜ್ಞೆಗಳನ್ನೂ ಬಹು ಸೂಕ್ಷ್ಮವಾಗಿ ಮಕ್ಕಳು ಗಮನಿಸುತ್ತಿರುತ್ತಾರೆ. ಪ್ರಯಾಸದ ನಡುವೆ ನಾವು ತೋರುವ ಅಪ್ರಜ್ಞಾಪೂರ್ವಕ ನಡವಳಿಕೆಗಳು ಅವರ ಮನದಲ್ಲಿ ದಾಖಲಾಗುತ್ತಲೇ ಇರುತ್ತವೆ. ಹಾಗಾಗಿ ತನ್ನ ಮಾನಸಿಕ ಆರೋಗ್ಯ, ಭಾವ ಜಗತ್ತು, ವರ್ತನೆಗಳನ್ನು ಅವಲೋಕಿಸಿಕೊಳ್ಳುತ್ತಾ ಸ್ವ-ಆರೈಕೆಯತ್ತಲೂ ಕೊಂಚವಾದರೂ ಗಮನ ನೀಡಿದಾಗ ಪ್ರಯಾಸವೂ ಹೆಚ್ಚು ಕಾಡದು, ಅಂತೆಯೇ ಮಕ್ಕಳನ್ನು ನೋಡಿಕೊಳ್ಳುವುದೂ ಜಾಸ್ತಿ ಆಯಾಸಕರ ಎನಿಸದು.

ಹಿತವಾದ ಶಿಸ್ತು
ಮಕ್ಕಳು ಮನೆಯಲ್ಲಿಯೂ ಬಹಳವೇ ಶಿಸ್ತಿನಿಂದ ವರ್ತಿಸಬೇಕು ಎಂಬ ಅತಿಯಾದ ನಿರೀಕ್ಷೆ, ಇಲ್ಲವೇ ಮಕ್ಕಳು ಏನಾದರೂ ಮಾಡಿಕೊಳ್ಳಲಿ ಕೆಲಸಕ್ಕೆ ಅಡ್ಡಪಡಿಸದಿದ್ದರೆ ಸಾಕು ಎಂಬ ಅಲಕ್ಷ್ಯ ಮನೋಭಾವವಾಗಲೀ ತರವಲ್ಲದ್ದು. ಸ್ವಲ್ಪ ಕಿರಿಕಿರಿ, ಭಾವನಾತ್ಮಕ ಏರುಪೇರುಗಳು ಮಕ್ಕಳಲ್ಲಿ ಸಾಮಾನ್ಯ. ತಮ್ಮ ಮನಸ್ಸಿನ ತಾಕಲಾಟವನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ಒದಗಿಸುತ್ತಾ, ಹೀಗೆನಿಸುವುದು ಸಹಜವೆಂದು ತೋರ್ಪಡಿಸುತ್ತಾ, ಹಾಗೆಯೇ ವರ್ತನಾ ವೈಪರೀತ್ಯಗಳನ್ನು ನಿಯಂತ್ರಣದಲ್ಲಿಡಲು ಅಗತ್ಯವೆನಿಸುವಷ್ಟು ಶಿಸ್ತನ್ನು ಕಲಿಸಿ ಸಮತೋಲಿತ ರೀತಿಯಲ್ಲಿ ಸಂವಹಿಸುವುದು ಮುಖ್ಯ.

ಇದನ್ನೂ ಓದಿ : T. P. Kailasam’s Birthday ; ನಮ್ ಮಕ್ಳ್ ಇschool ನೋಡಕ್ಕೆ ನೀವಿರ್ಬೇಕಿತ್ ಪ್ರಹಸನ ಪಿತಾಮಹರೇ

ಕ್ರಿಯಾತ್ಮಕ ಚಟುವಟಿಕೆಗಳ ಪ್ರಾಮುಖ್ಯತೆ
ಮನೆಯಲ್ಲಿ ಮಕ್ಕಳನ್ನು ಚಿತ್ರಕಲೆ, ಆಟ, ಕ್ರಾಫ್ಟ್ ಮೊದಲಾದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವುದು ಭಾವನಾತ್ಮಕ ಆರೋಗ್ಯಕ್ಕೆ ಬಹಳ ಸಹಕಾರಿ. ತನ್ನನ್ನು ತಾನು ಸುರಕ್ಷಿತವಾದ, ಬೆಂಬಲಿತ ವಾತಾವರಣದಲ್ಲಿ ವ್ಯಕ್ತಪಡಿಸಿಕೊಳ್ಳುವುದರಿಂದ ಮನದಲ್ಲಿ ಕಾಡುತ್ತಿರಬಹುದಾದ ಋಣಾತ್ಮಕ ಆಲೋಚನೆಗಳ ಸಂವಹನ ಸಾಧ್ಯವಾಗುತ್ತದೆ. ಎಷ್ಟೋ ಬಾರಿ ಮಕ್ಕಳಿಗೆ ಕಷ್ಟಕರ ಭಾವಗಳನ್ನು ಹೆಸರಿಸಲು ಸಾಧ್ಯವಾಗದು. ತನಗೆ ಭಯವಾಗುತ್ತಿದೆ, ಯಾವುದೋ ದುಃಖ ಕಾಡುತ್ತಿದೆ, ಇಂತಹುದು ಕೋಪ ತರುತ್ತದೆ. ಈ ರೀತಿ ಭಾವನೆಗಳನ್ನು ಹೆಸರಿಸಿ ಹೇಳಿಕೊಳ್ಳಲಾಗದೇ ಗೊಂದಲಕರ ವರ್ತನೆಯನ್ನು ತೋರಿಸುತ್ತಿರುತ್ತಾರೆ. ಕ್ರಿಯಾತ್ಮಕ ಕೆಲಸಗಳಲ್ಲಿ ಅಭಿವ್ಯಕ್ತಿ ಸಾಧ್ಯವಾದಾಗ ಮಾನಸಿಕ ಕ್ಲೇಶಗಳು ಈ ಮೂಲಕ ವ್ಯಕ್ತವಾಗಿ ಪರಿಹಾರ ಒದಗಿಸಲು ಸಲೀಸಾಗುತ್ತದೆ.

ದಿನಚರಿಯಿರಲಿ
ಓದು, ಕಲಿಕೆ, ಆಟ, ಹವ್ಯಾಸಗಳನ್ನೊಳಗೊಂಡ ದಿನಚರಿಯನ್ನು ಮಕ್ಕಳಿಗೆ ರೂಡಿ ಮಾಡುವುದೊಳಿತು. ಹಿತಮಿತವಾದ ಶಿಸ್ತು. ನಿಯಮಿತವಿದ ದಿನಚರಿಯಿಲ್ಲದೆ ಖಾಲಿ ಕುಳಿತು ಏನೂ ಮಾಡಲು ಗೊತ್ತಾಗದೇ ಆಗುವ ಬೇಸರದಿಂದಲೇ ಕೋಪಗೊಳ್ಳುವುದು, ರೋದಿಸುವುದು, ರಚ್ಚೆ ಹಿಡಿಯುವುದು ಮಾಡುತ್ತಿರುತ್ತಾರೆ. ಓದು, ದೈಹಿಕ ವ್ಯಾಯಾಮವನ್ನು ಪ್ರೇರೇಪಿಸುವ ಉತ್ತಮ ಅಭ್ಯಾಸಗಳೊಡನೆ ಅವರಿಗಿಷ್ಟವಾದ ಹವ್ಯಾಸಗಳನ್ನು ಸೇರಿಸಿ ದಿನಚರಿಯನ್ನು ಆಸಕ್ತಿದಾಯಕಗೊಳಿಸಿ. ಬೇಸರ ಮೂಡಿಸುವ, ಅತಿ ಹೇರಿಕೆಯ ದಿನಚರಿ ಉಸಿರುಗಟ್ಟಿಸುವುದು ಮತ್ತು ಬರೀ ಮನೋರಂಜನೆಯೇ ಹೆಚ್ಚಾದರೂ ಉಪಯೋಗಕ್ಕೆ ಬಾರದು. ಹಾಗಾಗೆ ಕಲಿಕೆಗೆ ಪೂರಕವಾದ, ಇಷ್ಟಗಳನ್ನೊಳಗೊಂಡ ದಿನಚರಿ ರೂಪಿಸುವುದು ಅಗತ್ಯ. ತಮ್ಮ ತಮ್ಮ ಮಕ್ಕಳ ವೈಶಿಷ್ಟ್ಯವೇನು? ಏನು ಮಾಡುವುದು ಅವರಿಗೆ ಸೂಕ್ತವಾದುದು ಮತ್ತು ಹೊಂದಿಕೆಯಾಗುವುದು ಎನ್ನುವುದನ್ನು ಚಿಂತಿಸಿ ಹೊರಗಿನ ಮಾಹಿತಿಯನ್ನು ತಮ್ಮ ಮಕ್ಕಳಿಗೆ ಅನ್ವಯಿಸುವಂತೆ ಅಳವಡಿಸಿಕೊಂಡರೆ ಮಾನಸಿಕ ಸಮಸ್ಯೆಯೂ ಬಾಧಿಸದು ಮತ್ತು  ಮನೋವಿಕಾಸವೂ ಸಾಧ್ಯವಾಗುವುದು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Gokak Falls: ಸಾತ್ವಿಕ, ಸೂಕ್ಷ್ಮ ಮನಸ್ಸಿನವರೇ ಬೇಕು ಈ ನೇಣಿನ ಕುಣಿಕೆಗೆ